ಮಡಿಕೇರಿ, 21. 2.6 ಕೆ.ಜಿ ತೂಕದ ಚಿನ್ನ ನಾಪತ್ತೆ ಸಂಬಂಧ ಕರ್ನಾಟಕ ಗಾಲ್ಫ್ ಕ್ಲಬ್‍ನ ಅಧ್ಯಕ್ಷ ಹಾಗೂ ಸೆಂಟ್ರಲ್ ಟ್ಯಾಕ್ಸ್‍ನ ಸಹಾಯಕ ಆಯುಕ್ತ ಆಗಿರುವ ಜಿಲ್ಲೆಯ ವಿನೋದ್ ಚಿಣ್ಣಪ್ಪ ಸೇರಿದಂತೆ 6 ಮಂದಿ ಮುಖ್ಯ ಆರೋಪಿಗಳ ವಿರುದ್ಧ ಸಿ.ಬಿ.ಐ ಎಫ್.ಐ.ಆರ್ ದಾಖಲಿಸಿದೆ.ಬೆಂಗಳೂರು ಏರ್ ಕಾರ್ಗೊ ಕಾಂಪ್ಲೆಕ್ಸ್‍ನ ಜಂಟಿ ಆಯುಕ್ತ ಎಂ.ಜಿ. ಚೇತನ್ ಅವರು ಸೆಪ್ಟೆಂಬರ್ 13, 2020 ರಂದು ನೀಡಿದ ದೂರಿನ ಸಂಬಂಧ ಸಿ.ಬಿ.ಐ. ಎಫ್.ಐ.ಆರ್. ದಾಖಲಿಸಿದೆ. ಆರೋಪಿಗಳಾದ ವಿನೋದ್ ಚಿಣ್ಣಪ್ಪ, ಬೆಂಗಳೂರಿನ ಎಸ್.ಡಿ. ಹಿರೇಮಟ, ಚೆನ್ನೈನ ಕೆ. ಕೇಶವ್, ಮೈಸೂರಿನ ಬಿ. ಲಿಂಗರಾಜು, ಬೆಂಗಳೂರಿನ ಡೀನ್ ರೆಕ್ಸ್ ಹಾಗೂ ಬೆಂಗಳೂರಿನ ಎನ್.ಜೆ ರವಿಶೇಖರ್ ಅವರುಗಳ ವಿರುದ್ಧ ದೂರು ದಾಖಲಾಗಿದೆ.ಎಫ್.ಐ.ಆರ್. ಪ್ರಕಾರ ಈ ಹಿಂದೆ ಕಸ್ಟಮ್ಸ್ ಅಧಿಕಾರಿಯಾಗಿದ್ದ ಜಿಲ್ಲೆಯ ವಿನೋದ್ ಚಿಣ್ಣಪ್ಪ ಹಾಗೂ ಇನ್ನಿತರ 5 ಮಂದಿ ಅಧಿಕಾರಿಗಳು ಹಿಂದೆ ವಿಮಾನ ಪ್ರಯಾಣಿಕರಿಂದ ವಶ ಪಡೆದುಕೊಂಡಿದ್ದ 2,594 ಗ್ರಾಂ ಚಿನ್ನ ನಾಪತ್ತೆಯಾಗಿತ್ತು. 2012 ರಿಂದ 2014ರ ಅವಧಿಯಲ್ಲಿ 2,594 ಗಾಂ ಚಿನ್ನವನ್ನು 13 ವಿಮಾನ ಪ್ರಯಾಣಿಕರಿಂದ ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ 6 ಮಂದಿಯ ಉಸ್ತುವಾರಿಯಲ್ಲಿ ವಶ ಪಡೆದುಕೊಳ್ಳಲಾಗಿತ್ತು. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ 6 ಮಂದಿ ಆರೋಪಿಗಳು ಕಸ್ಟಮ್ಸ್ ಅಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದ ಅವಧಿಯಲ್ಲಿ ವಶಪಡಿಸಿಕೊಂಡಿದ್ದ ಚಿನ್ನ ನಾಪತ್ತೆ ಸಂಬಂಧ ಆಂತರಿಕ ತನಿಖೆಯನ್ನು ಹೈದರಾಬಾದ್ ಘಟಕದ ವಿಜಿಲೆನ್ಸ್‍ನ ಡೈರೆಕ್ಟರ್ ಜನರಲ್ ನಡೆಸಿದ್ದು, 13 ಪ್ರಕರಣಗಳಲ್ಲಿ ಪ್ರಯಾಣಿಕರಿಂದ ವಶಪಡಿಸಿಕೊಂಡಿದ್ದ ಚಿನ್ನ ನಾಪತ್ತೆ ಯಾಗಿರುವುದು ದೃಢವಾಯಿತು. ಆರೋಪಿ ಗಳಾದ ಕಸ್ಟಮ್ಸ್ ಅಧಿಕಾರಿಗಳಿಗೆ ಮೇಲ್ಕಂಡ ವಶಪಡಿಸಿಕೊಂಡಿದ್ದ ಚಿನ್ನ ಹಾಗೂ ಇದಕ್ಕೆ ಸಂಬಂಧಿಸಿದಂತೆ ಗೋದಾಮು ಗಳ ಜವಾಬ್ದಾರಿಯನ್ನು ನೀಡಲಾಗಿತ್ತು. ಈ ಚಿನ್ನವನ್ನು ಸುರಕ್ಷಿತವಾಗಿಡಲು ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ವಶಪಡಿಸಿಕೊಂಡಿದ್ದ ಚಿನ್ನವನ್ನು ಮುಂದಿನ ಪಾಳಿಯ ಎಮ್.ಹೆಚ್.ಬಿ. ಅಧಿಕಾರಿಗಳಿಗೆ ಹಸ್ತಾಂತರಿಸಬೇಕಾಗಿತ್ತು. ಬದಲಿಗೆ ಎಮ್.ಹೆಚ್. ಬಿ ಗೋದಾಮಿನ ಕೀಲಿಕೈಯನ್ನು ಮಾತ್ರ ಹಸ್ತಾಂತರಿಸಿದ್ದಾರೆ. ಇದಲ್ಲದೆ ‘ಡಬಲ್ ಲಾಕ್‘ ವ್ಯವಸ್ಥೆ ಕೂಡ ಪಾಲಿಸಿಲ್ಲ. ಎಮ್.ಹೆಚ್.ಬಿ. ಗೋದಾಮಿನ ಜವಾಬ್ದಾರಿಯನ್ನು ವಹಿಸಿಕೊಂಡ ಮೇಲೆ ಒಂದು ಕೀಲಿಕೈ ಅನ್ನು ತಮ್ಮಲ್ಲಿ ಇಟ್ಟುಕೊಂಡು ಮತ್ತೊಂದು ಕೀಲಿಕೈ ಅನ್ನು ಹಿರಿಯ ಅಧಿಕಾರಿಗೆ ಹಸ್ತಾಂತರಿಸ ಬೇಕಾಗಿದ್ದು, ಇದನ್ನು ಮಾಡಲು ವಿಫಲರಾಗಿ ದ್ದಾರೆ ಎಂದು ಪ್ರಸ್ತಾಪಿಸಲಾಗಿದೆ. 6 ಮಂದಿ ಅಧಿಕಾರಿಗಳ ಬೇಜವಾಬ್ದಾರಿಯಿಂದ ವಶಪಡಿಸಿ ಕೊಂಡ ಚಿನ್ನ ನಾಪತ್ತೆಯಾಗಿರುವುದಾಗಿ ಆಂತರಿಕ ತನಿಖೆಯಿಂದ ಗೊತ್ತಾಗಿದೆ. ಆಂತರಿಕ ತನಿಖೆ ನಂತರ ಪ್ರಕರಣವನ್ನು ಸಿ.ಬಿ.ಐ. ತಂಡಕ್ಕೆ ತನಿಖೆಯನ್ನು ಒಪ್ಪಿಸಲಾಗಿದ್ದು ಎಫ್.ಐ.ಆರ್ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ವಶಪಡಿಸಿಕೊಂಡ ಚಿನ್ನದ ವಿವರ
2012 ರಿಂದ 2014 ರವೆಗೆ 13 ಪ್ರಕರಣಗಳಲ್ಲಿ 2,594 ಗ್ರಾಂ ವಶಪಡಿಸಿಕೊಂಡ ಚಿನ್ನ ನಾಪತ್ತೆಯಾಗಿದ್ದು ವಿವರ ಇಂತಿದೆ.
15/1/2013 ರಂದು
(ಮೊದಲ ಪುಟದಿಂದ) 207 ಗ್ರಾಂನ 1 ಬೆಳ್ಳಿ ಲೇಪಿತ ಚಿನ್ನದ ಸರ ಹಾಗೂ 1 ಉಂಗುರ, 4/12/2013 ರಂದು 4 ಚಿನ್ನದ ಬಿಸ್ಕೆಟ್‍ಗಳು (400 ಗ್ರಾಂ), 31/1/2014 ರಂದು 116.63 ಗ್ರಾಂನ 1 ಚಿನ್ನದ ಸರ, 200 ಗ್ರಾಂನ 1 ಚಿನ್ನದ ಸರ ಹಾಗೂ 181.4 ಗ್ರಾಂನ 1 ಚಿನ್ನದ ಕಡ ಹಾಗೂ ಚಿನ್ನದ ಸರ, 3/2/2014 ರಂದು 449.92 ಗ್ರಾಮ್ ತೂಕದ 4 ಚಿನ್ನದ ಬಿಸ್ಕೆಟ್‍ಗಳು, 19/2/2014 ರಂದು 154.43 ಗ್ರಾಮ್‍ನ 4 ಚಿನ್ನದ ಬಳೆಗಳು ಸೇರಿದಂತೆ 1 ಚಿನ್ನದ ಲಾಕೆಟ್, 26/3/2014 ರಂದು 181.16 ಗ್ರಾಂನ 1 ಚಿನ್ನದ ಸರ ಹಾಗೂ ಬ್ರೇಸ್‍ಲೆಟ್ ಹಾಗೂ 190.56 ಗ್ರಾಂನ 1 ಚಿನ್ನದ ಸರ ಹಾಗೂ 1 ಬ್ರೇಸ್‍ಲೆಟ್, 163.88 ಗ್ರಾಂನ 5 ಚಿನ್ನದ ಬಳೆಗಳು, 1 ಸರ ಹಾಗೂ 209.31 ಗ್ರಾಂನ 4 ಚಿನ್ನದ ಬಳೆಗಳು, 23/9/2014 ರಂದು 139.75 ಗ್ರಾಂನ 1 ಚಿನ್ನದ ಸರ ಹಾಗೂ 8/6/2012 ರಂದು 6 ಚಿನ್ನದ ಬಳೆಗಳು ವಶಪಡಿಸಿಕೊಳ್ಳಲಾಗಿತ್ತು. ಒಟ್ಟು 2,594.04 ಗ್ರಾಂ ಚಿನ್ನ ಈ ಅವಧಿಯಲ್ಲಿ ವಶಪಡಿದುಕೊಂಡಿದ್ದು ನಾಪತ್ತೆಯಾಗಿದೆ.
ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ
ಕರ್ನಾಟಕ ಗಾಲ್ಫ್ ಕ್ಲಬ್‍ನ ಅಧ್ಯಕ್ಷ ಸ್ಥಾನಕ್ಕೆ ವಿನೋದ್ ಚಿಣ್ಣಪ್ಪ ರಾಜೀನಾಮೆ ನೀಡಿದ್ದಾರೆ. ಚಿನ್ನ ನಾಪತ್ತೆ ಸಂಬಂಧ ಸಿ.ಬಿ.ಐ ತಂಡ ಎಫ್.ಐ.ಆರ್. ದಾಖಲಿಸಿದ ಬೆನ್ನಲ್ಲೇ 6 ಆರೋಪಿಗಳ ಪೈಕಿ ಒಬ್ಬರಾಗಿರುವ ವಿನೋದ್ ಚಿಣ್ಣಪ್ಪ ಕರ್ನಾಟಕ ಗಾಲ್ಫ್ ಕ್ಲಬ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಈ ಹಿಂದೆಯೂ ಕ್ಲಬ್ ಸದಸ್ಯರಿಂದ ರಾಜೀನಾಮೆಗೆ ಒತ್ತಾಯ
ಏಪ್ರಿಲ್ 18 ರಂದು ಲಾಕ್‍ಡೌನ್ ಅವಧಿಯಲ್ಲಿ ಅನಧಿಕೃತ ಪಾಸ್ ಪಡೆದುಕೊಂಡು ಬೆಂಗಳೂರಿನಿಂದ ಜಿಲ್ಲೆಗೆ ಆಗಮಿಸಿದ 6 ಮಂದಿ ವಿನೋದ್ ಚಿಣ್ಣಪ್ಪ ಮಾಲೀಕತ್ವದ ಹೊದ್ದೂರಿನ ರಿವರ್ ವ್ಯಾಲಿ ಹೋಮ್‍ಸ್ಟೇನಲ್ಲಿ ತಂಗಿದ್ದರು. ಹೋಂಸ್ಟೇ ಮಾಲೀಕ ವಿನೋದ್ ಚಿಣ್ಣಪ್ಪ ಏಪ್ರಿಲ್ 14 ರಂದು ತಮ್ಮ ತಾಯಿಗೆ ಆರೋಗ್ಯದ ಸಮಸ್ಯೆ ಇದೆ ಎಂಬ ಸುಳ್ಳು ಮಾಹಿತಿ ನೀಡಿ ಬೆಂಗಳೂರಿನಿಂದ ಪಾಸ್ ಪಡೆದುಕೊಂಡು ತಮ್ಮ ಹೋಂಸ್ಟೆಗೆ ಬಂದು ಒಟ್ಟು 6 ಮಂದಿಯೊಂದಿಗೆ ವಾಸ್ತವ್ಯ ಹೂಡಿದ್ದರು. ಈ ಸಂಬಂಧ ಚಿಣ್ಣಪ್ಪ ಸೇರಿದಂತೆ 6 ಮಂದಿಯ ವಿರುದ್ಧ ಕಲಂ 177,188,269,270 ಐಪಿಸಿ ಪ್ರಕಾರ ಕಾನೂನು ಕ್ರಮಕೈಗೊಳ್ಳಲಾಗಿತ್ತು. ಈ ಪ್ರಕರಣದ ಬೆನ್ನಲ್ಲೆ ಗಾಲ್ಫ್ ಕ್ಲಬ್‍ನ ಕೆಲ ಸದಸ್ಯರು ವಿನೋದ್ ಅವರನ್ನು ಕ್ಲಬ್‍ನ ಅಧ್ಯಕ್ಷ ಸ್ಥಾನದಿಂದ ತೆಗೆಯಬೇಕೆಂದು ಒತ್ತಾಯಿಸಿದ್ದರು.