ಮಡಿಕೇರಿ, ಅ. 21: ದೇಶದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವುದು ಹಾಗೂ ಆಸ್ತಿ ರಕ್ಷಣೆ ಸಂದರ್ಭದಲ್ಲಿ ಬಲಿಯಾದ ಪೊಲೀಸ್ ಹುತಾತ್ಮರಿಗೆ ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ, ಉಪ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್, ಜಯ ಕುಮಾರ್, ಶೈಲೇಂದ್ರ, ಜಿಲ್ಲಾ ಸಶಸ್ತ್ರ ಪಡೆಯ ಎಸ್.ರಾಚಯ್ಯ, ಮಡಿಕೇರಿ ಗ್ರಾಮಾಂತರ ಠಾಣೆಯ ದಿವಾಕರ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹುತಾತ್ಮ ಪೊಲೀಸ್ ಸ್ಮಾರಕಕ್ಕೆ ಹೂಗುಚ್ಛ ಅರ್ಪಿಸಿ ಗೌರವ ನಮನ ಸಲ್ಲಿಸಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಮಾತನಾಡಿ, ಹುತಾತ್ಮರಾದ ಪೊಲೀಸರಿಗೆ ಗೌರವ ಸಲ್ಲಿಸುವ ದಿನ ಇದಾಗಿದೆ. ಪ್ರತಿ ವರ್ಷವು ಈ ದಿನವನ್ನು ಅತ್ಯಂತ ಗೌರವ ಪೂರ್ವಕವಾಗಿ ಆಚರಿಸ ಲಾಗುತ್ತದೆ. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ಶೌರ್ಯದಿಂದ ಹೋರಾಡಿ ಹುತಾತ್ಮರಾಗಿದ್ದಾರೆ ಎಂದರು.ಕಳೆದ ವರ್ಷ ಕರ್ತವ್ಯ ನಿರ್ವಹಿಸುವಾಗ ದೇಶದಲ್ಲಿ ಪ್ರಾಣ ಕಳೆದುಕೊಂಡ ಪೊಲೀಸ್ ಅಧಿಕಾರಿ ಗಳು ಮತ್ತು ಪೇದೆಗಳ ವಿವರವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಅವರು ಓದಿದರು.

ಅಕ್ಟೋಬರ್ 21 ಪೊಲೀಸರ ಶೌರ್ಯ ಸಾಹಸವನ್ನು ಸ್ಮರಿಸುವ ದಿನವಾಗಿದೆ. ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ದೇಶ ಹಾಗೂ ಸಮಾಜದ ರಕ್ಷಣೆ ಸಂದರ್ಭದಲ್ಲಿ ದೇಶದಲ್ಲಿ

(ಮೊದಲ ಪುಟದಿಂದ) 264 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅವರು ತಿಳಿಸಿದರು.

ಜಿಲ್ಲಾ ಸಶಸ್ತ್ರ ಪಡೆಯ ಎಸ್. ರಾಚಯ್ಯ ಅವರ ನೇತೃತ್ವದಲ್ಲಿ ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆಯಿಂದ ಮೂರು ಸುತ್ತು ಕುಶಲತೋಪು ಹಾರಿಸಿ ಗೌರವ ಅರ್ಪಿಸಲಾಯಿತು. ಸಿದ್ದೇಶ್ ನೇತೃತ್ವದ ಪೊಲೀಸ್ ವಾದ್ಯ ತಂಡದವರು ರಾಷ್ಟ್ರಗೀತೆ ಮೊಳಗಿಸಿದರು. ಅಂತೋಣಿ ಡಿಸೋಜ ನಿರೂಪಿಸಿದರು, ಉಪ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್ ವಂದಿಸಿದರು.