ಗೋಣಿಕೊಪ್ಪಲು, ಅ.20: ರಂಗಭೂಮಿ ಪ್ರತಿಷ್ಠಾನದ ವತಿಯಿಂದ ರಾಷ್ಟ್ರ ಪ್ರಶಸ್ತಿ ಪುರಸ್ಕøತ ರೈತ ಸೋಮೆಯಂಗಡ ಗಣೇಶ್ ತಿಮ್ಮಯ್ಯ ಕೃಷಿಯಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ಗೌರವಿಸಲಾಯಿತು. ಪೊನ್ನಂಪೇಟೆಯ ಕಾವೇರಿ ಕೊಡವ ಕೂಟ ಸಭಾಂಗಣದಲ್ಲಿ ರಂಗಾಯಣದ ಮೈಸೂರು ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಂಗಾಯಣ, ಮೈಸೂರಿನ ಬಹುರೂಪಕಗಳ ಬಹುರೂಪಿ ಸಾಕ್ಷ್ಯಚಿತ್ರ ಪ್ರದರ್ಶನಗೊಂಡವು.ಪ್ರತಿ ವರ್ಷ ನಡೆಸಿಕೊಂಡು ಬರಲಾಗುತ್ತಿದ್ದ ಕಾರ್ಯಕ್ರಮವು ಸ್ಥಗಿತ ಗೊಳ್ಳಬಾರದೆಂಬ ಉದ್ದೇಶದಿಂದ ಕೋವಿಡ್ - 19 ನಿಯಮವನ್ನು ಪಾಲಿಸುವ ಮೂಲಕ ಸಾಧಕರನ್ನು ಗುರುತಿಸಿ ಗೌರವ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ, ಕೊಡಗಿನಲ್ಲಿ ಸಾಧಕರನ್ನು ಗುರುತಿಸಿ ಗೌರವಿಸುವ ಚಿಂತನೆ ಮರೆಯಾಗುತ್ತಿದೆ. ಇದರಿಂದ ಇನ್ನಷ್ಟು ಸಾಧಕರು ಹೊರಬರಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಕೊಡಗಿನ ರಂಗಭೂಮಿ ಪ್ರತಿಷ್ಠಾನದ ವತಿಯಿಂದ ಕೃಷಿಯಲ್ಲಿ ಉತ್ತಮ ಸಾಧನೆ ಮಾಡಿ ಕೊಡಗಿಗೆ ಕೀರ್ತಿ ತಂದ ಸೋಮೆಯಂಗಡ ಗಣೇಶ್ ಅವರನ್ನು ಸನ್ಮಾನಿಸಿ ಗೌರವಿಸುವ ಮೂಲಕ ಇವರ ಸಾಧನೆಯನ್ನು ಜನತೆಗೆÀ ತಿಳಿಸುವ ಪ್ರಯತ್ನ ರಂಗಭೂಮಿ ಪ್ರತಿಷ್ಠಾನದಿಂದ ನಡೆಯುತ್ತಿದೆ. ಪ್ರತಿ ವರ್ಷವೂ ಅಕ್ಟೋಬರ್ ತಿಂಗಳಿನಲ್ಲಿ ಈ ಕಾರ್ಯಕ್ರಮವು ವಿವಿಧ (ಮೊದಲ ಪುಟದಿಂದ) ರೀತಿಯಲ್ಲಿ ನಡೆಯುತ್ತಿದೆ. ಕಳೆದ ಬಾರಿ ಯೋಧರನ್ನು ಗುರುತಿಸಿ ಗೌರವಿಸಲಾಗಿದೆ ಪ್ರತಿವರ್ಷವೂ ಸಾಧಕರನ್ನು ಗುರುತಿಸುವ ಕೆಲಸ ರಂಗಭೂಮಿ ಪ್ರತಿಷ್ಠಾನ ಮಾಡುತ್ತಿದೆ ಎಂದು ಕಾರ್ಯಪ್ಪ ಹೇಳಿದರು.
ಗೌರವ ಸ್ವೀಕರಿಸಿ ಮಾತನಾಡಿದ ಗಣೇಶ್ ತಿಮ್ಮಯ್ಯ ಕೃಷಿಯಲ್ಲಿ ತೊಡಗಿಕೊಳ್ಳುವುದರಿಂದ ಸಿಗುವ ಆತ್ಮತೃಪ್ತಿ ಬೇರೆ ಎಲ್ಲಿಯೂ ಸಿಗಲು ಸಾಧ್ಯವಿಲ್ಲ. ಕೃಷಿ ಮಾಡಿದವರನ್ನು ಭೂಮಿತಾಯಿ ಎಂದಿಗೂ ಕೈಬಿಟ್ಟ ನಿದರ್ಶನವಿಲ್ಲ. ಇರುವ ಭೂಮಿಯನ್ನು ಪಾಳು ಬಿಡದೆ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು. ಪ್ರಸ್ತುತ ತಂತ್ರಜ್ಞಾನವನ್ನು ಅಳವಡಿಸಿಕೊಂಡು ವಿವಿಧ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡರೆ ಆರ್ಥಿಕವಾಗಿ ಮುಂದೆ ಬರಲು ಸಾಧ್ಯವಿದೆ. ವಿದ್ಯಾವಂತರೂ ಕೂಡ ಇತ್ತೀಚೆಗೆ ದೂರದ ಊರುಗಳಿಂದ ಆಗಮಿಸಿ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಉತ್ತಮ ಬದುಕು ಕಂಡುಕೊಂಡಿದ್ದಾರೆ. ಕೃಷಿಯಲ್ಲಿ ಸಾಧನೆ ಮಾಡಿದ ನನಗೆ ಅತ್ಯುತ್ತಮ ರಾಷ್ಟ್ರ ಪ್ರಶಸ್ತಿ ಗೌರವ ಸಂದಿರುವುದು ಹೆಮ್ಮೆ ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ನೂತನ ತಾಲೂಕು ರಚನೆಗೆ ಸಂಬಂಧಪಟ್ಟಂತೆ ಸಾಧಕ ಅತಿಥಿಗಳಾದ ಚೆಪ್ಪುಡೀರ ಸೋಮಯ್ಯನವರನ್ನು ಗೌರವಿಸಲಾಯಿತು. ರಂಗಭೂಮಿ ಪ್ರತಿಷ್ಠಾನದ ವತಿಯಿಂದ ನೀಡಿರುವ ಗೌರವ ಪೊನ್ನಂಪೇಟೆ ತಾಲೂಕು ರಚನೆಗೆ ಕೆಲಸ ನಿರ್ವಹಿಸಿದ ಸರ್ವರಿಗೂ ಸಲ್ಲಬೇಕು, ನಿರಂತರ ಹೋರಾಟದ ಫಲ ಇಂದು ಕೈಗೂಡಿದೆ. ನಿವೃತ್ತ ಅಧಿಕಾರಿಗಳ ತಂಡ ತಮ್ಮ ದೈನಂದಿನ ಕೆಲಸದ ನಡುವೆ ತಾಲೂಕು ರಚನೆಗೆ ಶ್ರಮಿಸಿದ್ದಾರೆ. ಕೆಲವೇ ದಿನಗಳಲ್ಲಿ ತಾಲೂಕು ಕೇಂದ್ರವು ಕೆಲಸ ನಿರ್ವಹಿಸಲಿದೆ. ನೂತನ ತಾಲೂಕು ಕಚೇರಿಗೆ ಸಹಕಾರ ನೀಡಲು ದಾನಿಗಳು ಮುಂದೆ ಬಂದಿದ್ದಾರೆ. ಈಗಾಗಲೇ ನಾಗರಿಕ ವೇದಿಕೆ ವತಿಯಿಂದ ನೂತನ ತಾಲೂಕು ಕಚೇರಿಯ ಆವರಣದಲ್ಲಿ ಅಗತ್ಯ ಕೆಲಸ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಮುಂದೆಯೂ ಕೆಲಸ ಕೈಗೊಳ್ಳಲಾಗುವುದು ಎಂದು ಸೋಮಯ್ಯ ಹೇಳಿದರು.
ರಂಗಭೂಮಿ ಪ್ರತಿಷ್ಠಾನದ ಸಂಚಾಲಕರಾದ ಅಡ್ಡಂಡ ಅನಿತಾ ಕಾರ್ಯಪ್ಪ ಸ್ವಾಗತಿಸಿದರು. ಕಾಂಗೀರ ಕುಸುಂ ಪ್ರಾರ್ಥಿಸಿ, ವಂದಿಸಿದರು. ರಂಗಾಯಣ, ಮೈಸೂರಿನ ಬಹುರೂಪಕಗಳ ಬಹುರೂಪಿ ಸಾಕ್ಷ್ಯಚಿತ್ರ ಪ್ರದರ್ಶನ ಗಮನ ಸೆಳೆದವು. ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು ವಿವಿಧ ಸಂಘ ಸಂಸ್ಥೆಯ ಪ್ರಮುಖರು ಪಾಲ್ಗೊಂಡಿದ್ದರು.