ಕಣಿವೆ, ಅ. 20: ಕಳೆದ ಹತ್ತು ವರ್ಷಗಳ ಹಿಂದೆ ಕುಶಾಲನಗರದ ಕಾವೇರಿ ಬಡಾವಣೆಯಲ್ಲಿ ಆರಂಭವಾದ ಕನ್ನಡ ಕಲಾ ಭವನ ಕಟ್ಟಡ ಕಾಮಗಾರಿ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ನೆನೆಗುದಿಗೆ ಬಿದ್ದಿದೆ. 2009ರಲ್ಲಿ ಅಂದಿನ ಮುಖ್ಯಮಂತ್ರಿ ಸದಾನಂದಗೌಡ ಅವರ ಅಂಕಿತದೊಂದಿಗೆ ರೂ. 3.90 ಕೋಟಿ ವೆಚ್ಚದಲ್ಲಿ ಆರಂಭಗೊಂಡ ಕಟ್ಟಡ ಕಾಮಗಾರಿ ಕುಂಟುತ್ತಾ ಸಾಗಿ ಬಂದ ಹಿನ್ನೆಲೆ ಮತ್ತೆ ಹೆಚ್ಚುವರಿಯಾಗಿ ರೂ. 1.50 ಕೋಟಿಗಳ ಕಾಮಗಾರಿ ಬಾಕಿ ಉಳಿದಿದೆ ಎನ್ನಲಾಗಿದ್ದು, ರೂ. 50 ಲಕ್ಷಗಳನ್ನು ಜಾಗದ ಬಾಬ್ತು ಸ್ಥಳೀಯ ಪಟ್ಟಣ ಪಂಚಾಯಿತಿಗೆ ಪಾವತಿಸಬೇಕಿದೆ. ಹಾಗಾಗಿ ರೂ. 2 ಕೋಟಿಗಳ ಬಿಡುಗಡೆಗಾಗಿ ಸರ್ಕಾರದ ಖಜಾನೆಯತ್ತ ಮುಖ ಮಾಡಲಾಗಿದೆ. ಈ ಹಣ ಬಂದೊಡನೆ, ಅಪೂರ್ಣಗೊಂಡಿರುವ ಕಾಮಗಾರಿಗೆ ಚುರುಕು ನೀಡಿ ಲೋಕಾರ್ಪಣೆ ಗೊಳಿಸಲಾಗುತ್ತದೆ ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ. ಕನ್ನಡ ಕಲಾಭವನ ಕಟ್ಟಡ ಕುಶಾಲನಗರದಲ್ಲಿ ತಲೆ ಎತ್ತಲು ಕಾರಣರಾದವರು 2009ರಲ್ಲಿ ಕುಶಾಲನಗರದಲ್ಲಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಎನ್.ಕೆ. ಮೋಹನಕುಮಾರ್, ಕಾರ್ಯದರ್ಶಿ ಎಂ.ಇ. ಮೋಹಿದ್ದೀನ್, ಟಿ.ಜಿ. ಪ್ರೇಮಕುಮಾರ್ ಹಾಗೂ ಟಿ.ಪಿ. ರಮೇಶ್ಇ ವರುಗಳು.ಜಿಲ್ಲಾ ಕೇಂದ್ರಗಳಲ್ಲಿ ಅಲ್ಲಿನ ಕಲೆ, ಸಂಸ್ಕøತಿ, ನಾಡು - ನುಡಿಯ ಬಗ್ಗೆ ಬೆಳಕು ಚೆಲ್ಲುವ ಮತ್ತು ಕನ್ನಡ ಸಾಹಿತ್ಯ ಚಟುವಟಿಕೆಗಳನ್ನು ಉಳಿಸಿ ಬೆಳೆಸಿ ಮುಂದಿನ ಜನಾಂಗಕ್ಕೆ ಪರಿಚಯಿಸಿ ಹೆಮ್ಮೆರವಾಗಿಸುವ ಮಹದುದ್ದೇಶದಿಂದ ರಾಜ್ಯ ಸರ್ಕಾರ ಅಂದು 2009 ರಲ್ಲಿ ಎಲ್ಲಾ ಜಿಲ್ಲೆಗಳಲ್ಲೂ ಕಲಾ ಭವನ ನಿರ್ಮಿಸಲು ತಲಾ ಒಂದು ಕೋಟಿ ಹಣ ಬಿಡುಗಡೆ ಮಾಡಿತ್ತು. ಅದರಂತೆ ಕೊಡಗು ಜಿಲ್ಲೆಗೂ ಒಂದು ಕೋಟಿ ಬಿಡುಗಡೆ ಮಾಡಿತ್ತು. ಆದರೆ ಜಿಲ್ಲಾ ಕೇಂದ್ರವಾದ ಮಡಿಕೇರಿಯಲ್ಲಿ ಕನ್ನಡ ಕಲಾ ಭವನ ನಿರ್ಮಾಣಕ್ಕೆ ಸೂಕ್ತವಾದ ಸ್ಥಳಾವಕಾಶದ ಕೊರತೆ ಇದ್ದ ಕಾರಣ ಜಿಲ್ಲಾ ಕಸಾಪ ಅಧ್ಯಕ್ಷರಾಗಿದ್ದ
ಟಿ.ಪಿ. ರಮೇಶ್ ಅವರ ಜೊತೆ ಚರ್ಚಿಸಿದ ಮೋಹನಕುಮಾರ್, ಮೋಹಿದ್ದೀನ್ ಹಾಗೂ ಪ್ರೇಮಕುಮಾರ್ ಅವರು ಅಂದು ಕನ್ನಡ ಸಂಸ್ಕøತಿ ಇಲಾಖೆಯ ಆಯುಕ್ತರಾಗಿದ್ದ ಜಯರಾಮರಾಜೇ ಅರಸು ಅವರಲ್ಲಿಗೆ ನಿಯೋಗ ತೆರಳಿ ಚರ್ಚಿಸಿ ಪತ್ರ ವ್ಯವಹಾರ ನಡೆಸಿದ ಬಳಿಕ ಜಿಲ್ಲಾ ಕೇಂದ್ರದಲ್ಲಿ ತಲೆ ಎತ್ತಬೇಕಿದ್ದ ಭವನವನ್ನು ಕುಶಾಲನಗರದಲ್ಲಿ ನಿರ್ಮಿಸಲು ಒಪ್ಪಿಗೆ ದೊರಕಿದ ಬಳಿಕ ಕುಶಾಲನಗರದಲ್ಲಿ ನಿರ್ಮಿಸಲಾಗಿತ್ತು.
ಕನ್ನಡ ಸಂಸ್ಕøತಿ ಇಲಾಖೆಯ ಆಯುಕ್ತರಾಗಿದ್ದ ಜಯರಾಮರಾಜೇ ಅರಸರು ಮಡಿಕೇರಿಯಲ್ಲಿ ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದುದು ಹಾಗೂ ಕುಶಾಲನಗರದ ಸನಿಹದ ಗ್ರಾಮದವರು ಆದ ಕಾರಣ ಕುಶಾಲನಗರದಲ್ಲಿ ನಿರ್ಮಾಣವಾಗುವ ಕಲಾ ಭವನ ಕಟ್ಟಡ ಕಾಮಗಾರಿಗೆ ಹೆಚ್ಚುವರಿಯಾಗಿ ಎರಡು ಕೋಟಿ ಅನುದಾನ ಸೇರಿಸಿ ಮೂರು ಕೋಟಿ ಮಂಜೂರಾತಿ ಮಾಡಿದ್ದರು. ಬಳಿಕ ಹೆಚ್ಚುವರಿಯಾಗಿ ರೂ. 90 ಲಕ್ಷಗಳ ಅನುದಾನವನ್ನು ತರಲಾಗಿತ್ತು.
ಜಿಲ್ಲಾ ಕೇಂದ್ರದಲ್ಲಿ ನಿರ್ಮಾಣವಾಗಬೇಕಿದ್ದ ಕಲಾ ಭವನ ಕಟ್ಟಡವನ್ನು ಕುಶಾಲನಗರ ಹೋಬಳಿ ಕೇಂದ್ರದಲ್ಲಿ ನಿರ್ಮಿಸುವ
(ಮೊದಲ ಪುಟದಿಂದ) ವಿಚಾರವಾಗಿ ತಾಂತ್ರಿಕ ಅಡಚಣೆ ಎದುರಾದಾಗ ಅಂದೂ ಕೂಡ ಶಾಸಕರಾಗಿದ್ದ ಅಪ್ಪಚ್ಚು ರಂಜನ್ ಹಾಗೂ ಸ್ಪೀಕರ್ ಆಗಿದ್ದ ಕೆ.ಜಿ. ಬೋಪಯ್ಯ ಅವರ ಪರಿಶ್ರಮದಿಂದ ಕಟ್ಟಡ ಕಾಮಗಾರಿ ನಿರ್ವಿಘ್ನವಾಗಿ ಸಾಗಿತು. ಆದರೆ ಕಟ್ಟಡ ಕಾಮಗಾರಿ ಜವಾಬ್ದಾರಿ ವಹಿಸಿಕೊಂಡ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಅಸಡ್ಡೆಯಿಂದಾಗಿ ಸಕಾಲದಲ್ಲಿ ಮುಗಿಯಬೇಕಾದ ಕಟ್ಟಡ ಕಾಮಗಾರಿ ಕುಂಟುತ್ತ ಸಾಗಿ ಈಗ ಹತ್ತು ವರ್ಷ ಕಳೆದಿದೆ. ಈಗ ಕಾಮಗಾರಿ ಪೂರ್ಣಗೊಳ್ಳಲು ಎರಡು ಕೋಟಿ ಹೆಚ್ಚುವರಿಯಾದ ಅನುದಾನವೂ ಬೇಕಿದೆ. ಅಗತ್ಯ ಅನುದಾನ ಬಿಡುಗಡೆಗೆ ಶಾಸಕ ರಂಜನ್ ಸಂಬಂಧಪಟ್ಟವರಿಗೆ ಪತ್ರ ವ್ಯವಹಾರ ನಡೆಸಿದ್ದಾರೆ ಎನ್ನಲಾಗಿದೆ. ಆದರೆ ಅನುದಾನ ಯಾವಾಗ ಬರುತ್ತದೋ ಕಾದು ನೋಡಬೇಕಿದೆ.
ಕೊಡಗಿನ ಶೈಕ್ಷಣಿಕ, ಪ್ರವಾಸಿ, ವಾಣಿಜ್ಯಿಕ ಹಾಗೂ ಸಾಂಸ್ಕøತಿಕ ನಗರ ಖ್ಯಾತಿಯ ಕುಶಾಲನಗರ ಈಗಾಗಲೇ ತಾಲೂಕು ಕೇಂದ್ರವಾಗುತ್ತಿರುವ ಹಿನ್ನೆಲೆ ಕಲಾ ಭವನ ಕಟ್ಟಡ ಪಟ್ಟಣಕ್ಕೆ ಹೆಚ್ಚು ಉಪಯುಕ್ತ ಹಾಗೂ ಕಲಾವಿದರಿಗೆ ಅತ್ಯಂತ ಹೆಚ್ಚು ಉಪಕಾರಿಯೂ ಆಗಿರುವುದರಿಂದ ಬಹು ಬೇಗ ಪೂರ್ಣಗೊಳ್ಳಬೇಕಿದೆ ಎಂಬುದು ಸಾಹಿತ್ಯಾಭಿಮಾನಿಗಳ ಆಶಯವಾಗಿದೆ. - ಕೆ.ಎಸ್. ಮೂರ್ತಿ