ಮಡಿಕೇರಿ, ಅ. 20: ವಸತಿ ರಹಿತ ಕಡುಬಡವರು, ಕಾರ್ಮಿಕ ವರ್ಗ ಹಾಗೂ ಸಂತ್ರಸ್ತರಿಗೆ ನೆಲೆ ಕಲ್ಪಿಸಲು ವಸತಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನ ಗೊಳಿಸದಿದ್ದಲ್ಲಿ ಜಿಲ್ಲಾ ಜಾತ್ಯತೀತ ಜನತಾದಳದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್ ಎಚ್ಚರಿಕೆ ನೀಡಿದ್ದಾರೆ.
ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ನಡೆದ ಮಹಿಳಾ ಘಟಕದ ಸಭೆಯಲ್ಲಿ ಮಾತನಾಡಿದ ಅವರು, ಬಡವರಿಗೆ, ಕೂಲಿ ಕಾರ್ಮಿಕರಿಗೆ ತಲೆಗೊಂದು ಸೂರು ನೀಡುವಂತೆ ಹಲವು ಬಾರಿ ಒತ್ತಾಯಿಸಿ ಮನವಿ ಸಲ್ಲಿಸಿದರೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಸ್ಪಂದನ ನೀಡಿಲ್ಲ. ಜೆಡಿಎಸ್ ಸದ್ಯದಲ್ಲಿಯೇ ಹೋರಾಟವನ್ನು ರೂಪಿಸಲಿದೆ ಎಂದರು. ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಲೀಲಾ ಶೇಷಮ್ಮ ಮಾತನಾಡಿ, ವಸತಿ ಹಾಗೂ ನಿವೇಶನ ರಹಿತರಿಗೆ ವಿವಿಧ ಯೋಜನೆಗಳಡಿಯಲ್ಲಿ ಪ್ರತಿವರ್ಷ ಅರ್ಜಿದಾರರಿಂದ ಅರ್ಜಿ ಆಹ್ವಾನಿಸ ಲಾಗುತ್ತಿತ್ತು. ಆದರೆ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಇದುವರೆಗೆ ವಸತಿ ನೀಡಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಇಸಾಕ್‍ಖಾನ್, ಮಹಿಳಾ ಜಿಲ್ಲಾಧ್ಯಕ್ಷೆ ಎಂ.ಎಂ. ರುಬೀನಾ, ಜಿಲ್ಲಾ ಖಜಾಂಚಿ ಡೆನ್ನಿ ಬರೋಸ್, ನಗರ ಮಹಿಳಾಧ್ಯಕ್ಷೆ ಸುನಂದಾ, ಉಪಾಧ್ಯಕ್ಷೆ ಲಲಿತ, ಜಿಲ್ಲಾ ಕಾರ್ಯದರ್ಶಿ ಎನ್.ಸಿ. ಸುನಿಲ್, ಯುವ ಘಟಕದ ಪ್ರಧಾನ ಕಾರ್ಯದರ್ಶಿ ಜಾಶೀರ್, ಸಾಮಾಜಿಕ ಜಾಲತಾಣ ಸಂಚಾಲಕ ಸೈಫ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬೊಳ್ಳಿಯಂಡ ಗಣೇಶ್, ನಗರ ಎಸ್.ಸಿ. ಘಟಕ ಅಧ್ಯಕ್ಷ ರವಿಕುಮಾರ್ ಮತ್ತಿತರರು ಹಾಜರಿದ್ದರು.