ಮಡಿಕೇರಿ, ಅ. 20: ಕೊಡಗು ಜಿಲ್ಲೆಯಲ್ಲಿ ಕಂದಾಯ ಇಲಾಖೆಯ ಮೂಲಕ ಜನಸಾಮಾನ್ಯರಿಗೆ ಆಗಬೇಕಾಗಿರುವ ಹತ್ತು ಹಲವಾರು ಅಗತ್ಯತೆಗಳು ಸಮರ್ಪಕ ರೀತಿಯಲ್ಲಿ ಆಗದಿರುವ ಹಿನ್ನೆಲೆ ಹಾಗೂ ಸಂಬಂಧಿಸಿದ ನೈಜ ಕಡತಗಳು ವಿಲೇವಾರಿ ಕಾಣದೆ ಎದುರಾ ಗುತ್ತಿರುವ ಸಮಸ್ಯೆಗಳ ಹಿನ್ನೆಲೆಯಲ್ಲಿ ಕೊಡಗು ಸೇವಾ ಕೇಂದ್ರ ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಇತರ ಅಧಿಕಾರಿಗಳ ಗಮನಕ್ಕೆ ತಂದು ಜನತೆಗೆ ಅನುಕೂಲ ಕಲ್ಪಿಸಲು ಪ್ರಯತ್ನ ನಡೆಸುತ್ತಿದೆ.ಈ ಹಿಂದೆ ಸಮಸ್ಯೆಗಳ ಕುರಿತಾಗಿ ಗಮನ ಸೆಳೆಯುವ ಪ್ರಯತ್ನ ನಡೆಸಿದ ಸಂದರ್ಭ ವಿವಿಧ ಹಂತದ ಅಧಿಕಾರಿಗಳು, ಸಿಬ್ಬಂದಿಗಳು ಉನ್ನತ ಮಟ್ಟಕ್ಕೆ ನೀಡುತ್ತಿದ್ದ ತಪ್ಪು ಮಾಹಿತಿಗಳು ಹಿರಿಯ ಅಧಿಕಾರಿಗಳ ಗಮನಕ್ಕೆ ಬರುತ್ತಿರಲಿಲ್ಲ. ಇದರಿಂದಾಗಿ ಯಾವುದೇ ಕಡತಗಳು ಬಾಕಿ ಉಳಿದಿಲ್ಲ ಎನ್ನಲಾಗುತ್ತಿತ್ತು ಎಂದು ಸೇವಾ ಕೇಂದ್ರದ ಪ್ರಮುಖರಾದ ಎ.ಎ. ತಮ್ಮು ಪೂವಯ್ಯ ಅವರು ತಿಳಿಸಿದ್ದಾರೆ.ಇದರಿಂದಾಗಿ ಸಮಸ್ಯೆ ಎದುರಿಸುತ್ತಿರುವ ಜನರ ನೈಜವಾದ ಮಾಹಿತಿಯನ್ನು ಸಂಗ್ರಹಿಸಿ ಅದನ್ನು ಸೂಕ್ತ ದಾಖಲೆಗಳ ಸಹಿತವಾಗಿ ಜಿಲ್ಲಾಡಳಿತದ ಗಮನಕ್ಕೆ ತರಲು ಕೊಡಗು ಸೇವಾ ಕೇಂದ್ರ ಅಹವಾಲು ಸಂಗ್ರಹಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ. ಇದೀಗ ತಾ. 15, 16 ಹಾಗೂ 19 ರಂದು ಸಂಪಾಜೆ, ಭಾಗಮಂಡಲ, ಮಡಿಕೇರಿ ಹೋಬಳಿ ನಾಡಕಚೇರಿಗೆ ಸಂಬಂಧಪಟ್ಟ ಕಡತಗಳ ಬಗ್ಗೆ ಜನತೆಯ ಅಹವಾಲು ಪಡೆಯುವ ಪ್ರಯತ್ನವನ್ನು ನಡೆಸಲಾಗಿದೆ. ಇದರಂತೆ ಇದೀಗ ಈ ಮೂರು ಹೋಬಳಿಯೂ (ಮೊದಲ ಪುಟದಿಂದ) ಸೇರಿದಂತೆ ಒಟ್ಟು 68 ಅರ್ಜಿಗಳು ಬಂದಿವೆ. ನಾಪೋಕ್ಲು ಹೋಬಳಿಯಿಂದ 5, ಸಂಪಾಜೆಯಿಂದ 20, ಸುಂಟಿಕೊಪ್ಪ 12, ಭಾಗಮಂಡಲ 15, ಮಡಿಕೇರಿ 13, ಬಾಳೆಲೆ 1, ಪೊನ್ನಂಪೇಟೆಯಿಂದ ಎರಡು ಅರ್ಜಿ ಸ್ವೀಕೃತವಾಗಿದೆ ಎಂದು ಸೇವಾ ಕೇಂದ್ರದ ಪ್ರಮುಖರು ತಿಳಿಸಿದ್ದಾರೆ.
ಇದರಲ್ಲಿ ಮುಖ್ಯವಾಗಿ ತಿದ್ದುಪಡಿ, ಕಡತ ನಾಪತ್ತೆ, ಪೌತಿಖಾತೆ, ದುರಸ್ತಿ, ಕಂದಾಯ ನಿಗದಿ, ಕೋವಿ ವಿನಾಯಿತಿ ಪತ್ರ, ಅಕ್ರಮ-ಸಕ್ರಮ, ತತ್ಕಾಲ್ ಪೋಡಿ, ಆರ್ಮಿ ಗ್ರ್ಯಾಂಟ್ ಇದಕ್ಕೆ ಸಂಬಂಧಪಟ್ಟ ಕಡತಗಳ ಸಮಸ್ಯೆ ಅಧಿಕ ಕಂಡುಬಂದಿದೆ.