ನವದೆಹಲಿ, ಅ. 20: ದೇಶದ ಪ್ರತಿ ನಾಗರಿಕನಿಗೂ ಕೋವಿಡ್ -19 ಲಸಿಕೆ ಲಭ್ಯವಾಗುವಂತೆ ಮಾಡಲು ಕೇಂದ್ರ ಸರ್ಕಾರ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಇಂದು ಸಂಜೆ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಮಹಾಮಾರಿ ಕೊರೊನಾ ವಿರುದ್ಧದ ಹೋರಾಟದಲ್ಲಿ ಜನತಾ ಕಫ್ರ್ಯೂನಿಂದ ಆರಂಭವಾಗಿ ಇದುವರೆಗೂ ನಾವು ಸಾಧಿಸಿದ ಪ್ರಗತಿ ಶ್ಲಾಘನೀಯ ಎಂದರು. ಲಾಕ್‍ಡೌನ್ ಅಂತ್ಯವಾಗಿದೆ. ಆದರೆ ಕೊರೊನಾ ಮುಕ್ತವಾಗಿಲ್ಲ. ಹೀಗಾಗಿ ನಾವು ಮತ್ತಷ್ಟು ಜವಾಬ್ದಾರಿಯಿಂದ ವರ್ತಿಸಬೇಕಿದೆ ಎಂದು ದೇಶವಾಸಿಗಳಲ್ಲಿ ಮನವಿ ಮಾಡಿದರು. ದೇಶದಲ್ಲಿ ಕೊರೊನಾ ಚೇತರಿಕೆ ಪ್ರಮಾಣ ಇಡೀ ವಿಶ್ವದಲ್ಲೇ ಅತ್ಯಧಿಕವಾಗಿದ್ದು, ಸಾವಿನ ಪ್ರಮಾಣ ಸಹ ಅತ್ಯಂತ ಕಡಿಮೆ ಇದೆ. ಭಾರತದಲ್ಲಿ ಕೊರೊನಾ ಗುಣಮುಖ ಪ್ರಮಾಣ ಶೇ. 83 ರಷ್ಟಿರುವುದು ನಮ್ಮ ಸಾಧನೆಯೇ ಸರಿ ಎಂದರು. ಕೊರೊನಾ ಲಸಿಕೆ ಬರುವವರೆಗೂ ನಾವು ಜಾಗರೂಕರಾಗಿರಬೇಕು. ಲಸಿಕೆಯನ್ನು ದೇಶದ ಪ್ರತಿಯೊಬ್ಬರಿಗೆ ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ಹೇಳಿದರು. ಜನತಾ ಕಫ್ರ್ಯೂ ಬಳಿಕ ಇಂದಿನವರೆಗೆ ಹಲವು ಸಂಕಷ್ಟಗಳನ್ನು ಎದುರಿಸಿದ್ದೇವೆ. ಕೊರೊನಾ ನಡುವೆ ಜೀವನ ನಿರ್ವಹಣೆಗಾಗಿ ಜನರು ಮನೆಯಿಂದ ಹೊರ ಬರುತ್ತಿದ್ದಾರೆ. ಲಾಕ್‍ಡೌನ್ ತೆರವು ಆಗಿರಬಹುದು, ಆದರೆ ವೈರಸ್ ಹೋಗಿಲ್ಲ. ಕಳೆದ ಎಂಟು ತಿಂಗಳಿಂದ ಕಾಪಾಡಿಕೊಂಡ ಸ್ಥಿತಿಯನ್ನು ಮುಂದೆ ಹಾಳು ಮಾಡಿಕೊಳ್ಳಬಾರದು. ಭಾರತದಲ್ಲಿ ಕೊರೊನಾ ಗುಣಮುಖ ಪ್ರಮಾಣ ಶೇ. 83 ರಷ್ಟಿದೆ. ಅಭಿವೃದ್ಧಿ ರಾಷ್ಟ್ರಗಳಲ್ಲಿ ಕೊರೊನಾ ಮರಣ ಪ್ರಮಾಣ ಹೆಚ್ಚಿದ್ದು, ನಮ್ಮಲ್ಲಿ ಕಡಿಮೆ ಇದೆ. ದೇಶದ 12 ಸಾವಿರ ಲ್ಯಾಬ್‍ಗಳಲ್ಲಿ ಕೊರೊನಾ ಟೆಸ್ಟ್ ಮಾಡಲಾಗುತ್ತಿದೆ. 90 ಲಕ್ಷದಷ್ಟು ಬೆಡ್‍ಗಳ ವ್ಯವಸ್ಥೆ ದೇಶದಲ್ಲಿದೆ. ಭಾರತದಲ್ಲಿ ನಾಗರಿಕರ ಜೀವ ಉಳಿಸುವಲ್ಲಿ ಸರ್ಕಾರ ಸಫಲವಾಗಿದೆ. ಇಂತಹ ಸಂದರ್ಭದಲ್ಲಿ ಜನರು ಬೇಜವಾಬ್ದಾರಿತನ ತೋರಿಸಬಾರದು. ನಿರ್ಲಕ್ಷ್ಯ ನಿಮ್ಮನ್ನು ಅಪಾಯಕ್ಕೆ ದೂಡಬಹುದು. ಭಾರತದಲ್ಲಿ ಕೊರೊನಾ ನಿಯಮಗಳನ್ನು ಉಲ್ಲಂಘನೆ ಮಾಡಲಾಗುತ್ತಿದೆ. ಪೂರ್ಣ ಪ್ರಮಾಣದಲ್ಲಿ ಸಫಲತೆ ಸಿಗದೇ ಖುಷಿ ಪಡುವುದು ಸರಿಯಲ್ಲ. ಕೆಲಸ ಪೂರ್ಣವಾಗದೇ ಸಂತೋಷಪಡುವುದು ಒಳ್ಳೆಯದಲ್ಲ. ಕೊರೊನಾಗೆ ವ್ಯಾಕ್ಸಿನ್ ಸಿಗುವವರೆಗೂ ಎಲ್ಲ ನಿಯಮಗಳನ್ನು ಪಾಲಿಸಬೇಕು. ವಿದೇಶಗಳು ಸೇರಿದಂತೆ ದೇಶದಲ್ಲಿ ಕೊರೊನಾ ವ್ಯಾಕ್ಸಿನ್‍ಗಾಗಿ ಸಂಶೋಧನೆಗಳು ನಡೆಯುತ್ತಿವೆ. ವ್ಯಾಕ್ಸಿನ್ ಸಿದ್ಧವಾದ ಕೂಡಲೇ ಅದನ್ನು ಪ್ರತಿ ದೇಶವಾಸಿಗೆ ಹೇಗೆ ತಲುಪಿಸಬೇಕು ಎಂಬುದರ ಬಗ್ಗೆ ಸರ್ಕಾರ ಕೆಲಸ ಮಾಡುತ್ತಿದೆ. ಸದ್ಯ ಸಾಲು ಸಾಲು ಹಬ್ಬಗಳು ಬಂದಿವೆ. ಈ ಸಮಯದಲ್ಲಿ ಅತ್ಯಂತ ಎಚ್ಚರಿಕೆಯಿಂದ ಹಬ್ಬಗಳನ್ನು ಆಚರಿಸಿ. ಈ ಹಬ್ಬಗಳು ನಿಮ್ಮಲ್ಲಿ ಉತ್ಸಾಹ ಮತ್ತು ಸಂತೋಷವನ್ನು ತರಲಿ ಎಂದು ಆಶಿಸುತ್ತೇನೆ ಎಂದು ಮೋದಿ ಶುಭ ಕೋರಿದರು. ಮಾಸ್ಕ್ ಧರಿಸುವಿಕೆ ಸೇರಿದಂತೆ ಎಲ್ಲ ಕೊರೊನಾ ನಿಯಮಗಳನ್ನು ಪಾಲಿಸಿ ಎಂದು ಆಗ್ರಹಿಸಿದರು. ಕೊರೊನಾ ವಿರುದ್ಧ ಹೋರಾಟದಲ್ಲಿ ವೈದ್ಯರು, ನರ್ಸ್‍ಗಳು ಸೇರಿದಂತೆ ಆರೋಗ್ಯ ಕಾರ್ಯಕರ್ತರು ನಿಸ್ವಾರ್ಥವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಶ್ಲಾಘಿಸಿದರು.