ಮಡಿಕೇರಿ, ಅ. 18: ತುಲಾಮಾಸದ ಕಾವೇರಿ ಜಾತ್ರೆಯ ದ್ವಿತೀಯ ದಿನವಾದ ಇಂದು ಕ್ಷೇತ್ರಕ್ಕೆ ವಿರಳ ಸಂಖ್ಯೆಯಲ್ಲಿ ಕೊಡಗಿನ ವಿವಿಧೆಡೆಯ ಭಕ್ತರು ಆಗಮಿಸುವದ ರೊಂದಿಗೆ, ಭಾಗಮಂಡಲದಲ್ಲಿ ಕೇಶಮುಂಡನ ಹಾಗೂ ಪಿಂಡ ಪ್ರದಾನ ಸಹಿತ ಪಿತೃ ಕಾರ್ಯಗಳಲ್ಲಿ ಪಾಲ್ಗೊಂಡಿದ್ದರು. ಆ ಮೂಲಕ ಶ್ರೀ ಭಗಂಡೇಶ್ವರ, ಮಹಾವಿಷ್ಣು, ಮಹಾಗಣಪತಿ, ಸುಬ್ರಹ್ಮಣ್ಯ ದೇವರುಗಳ ದರ್ಶನ ಪಡೆದು ತೆರಳುತ್ತಿದ್ದ ದೃಶ್ಯ ಕಂಡು ಬಂತು.

ತಲಕಾವೇರಿಗೂ ಆಗಮಿಸಿದ ಭಕ್ತರು ಮತ್ತು ಒಂದಿಷ್ಟು ಮಂದಿ ಪ್ರವಾಸಿಗರು ಕಾವೇರಿ ಮಾತೆಯ ದರ್ಶನದೊಂದಿಗೆ, ಶ್ರೀ ಮಹಾಗಣಪತಿ, ಶ್ರೀ ಅಗಸ್ತ್ಯೇಶ್ವರ ದೇವರ ಸನ್ನಿಧಿಗಳಲ್ಲಿ ಕೈಮುಗಿದು ಹಿಂತೆರಳುತ್ತಿದ್ದ ಚಿತ್ರಣ ಗೋಚರಿಸಿತು. ಈ ಬಾರಿ ಕ್ಷೇತ್ರದಲ್ಲಿ ಅನ್ನದಾನ ಸೇರಿದಂತೆ ಕೊರೊನಾ ನಿರ್ಬಂಧ ನಡುವೆ É ಇತರ ದೇವತಾ ಕೈಂಕರ್ಯ ಗಳಿಗೆ ಅವಕಾಶ ಇಲ್ಲದ್ದರಿಂದ ಎಲ್ಲಿಯೂ ಭಕ್ತರ ಗುಂಪು ಕಾಣಿಸಿಕೊಳ್ಳಲಿಲ್ಲ.

ಮಾಮೂಲಿ ವಾತಾವರಣ: ಭಾಗಮಂಡಲ ಹಾಗೂ ತಲಕಾವೇರಿ ಕ್ಷೇತ್ರಗಳಲ್ಲಿ, ಸಂಗಮ ಕ್ಷೇತ್ರದೊಂದಿಗೆ ಕೊಳದ ಸ್ನಾನ ಇತ್ಯಾದಿಗೆ ಅವಕಾಶ ಇಲ್ಲದಿರುವ ಕಾರಣ, ಸದ್ಭಕ್ತರು ಇರುವಷ್ಟು ದೇವತಾ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿದ್ದು, ಎರಡನೆಯ ದಿನವಾದ ಇಂದು ಜಾತ್ರಾ ಸಂದರ್ಭ ಎನ್ನುವದಕ್ಕಿಂತ ಮಾಮೂಲಿ ವಾತಾವರಣ ಕಂಡು ಬಂದಿದ್ದಾಗಿ ತಕ್ಕರಾದ ಕೋಡಿ ಮೋಟಯ್ಯ ಹಾಗೂ ಪಾರುಪತ್ಯೆಗಾರ ಪೊನ್ನಣ್ಣ ಅಭಿಪ್ರಾಯಪಟ್ಟರು.

ಸಣ್ಣ ಪುಟ್ಟ ಸೇವೆ : ನಿನ್ನೆ ಮತ್ತು ಇಂದು ಕೂಡ ಕ್ಷೇತ್ರಕ್ಕೆ ಹೊರರಾಜ್ಯ ಅಥವಾ ಬೇರೆ ಜಿಲ್ಲೆಗಳ ಮಂದಿ ಆಗಮಿಸದೆ ಕೊಡಗಿನ ಕೆಲವೇ ಭಕ್ತರು ಆಗಮಿಸಿ ಸಣ್ಣ ಪುಟ್ಟ ಸೇವೆಯೊಂದಿಗೆ ದೇವರ ದರ್ಶನ ಪಡೆದುಕೊಂಡು ಹಿಂತಿರು ಗುತ್ತಿದ್ದುದಾಗಿ ಅರ್ಚಕ ವೃಂದ ಅಭಿಪ್ರಾಯಪಟ್ಟರು.

ಸಹಜ ಸ್ಥಿತಿ : ತುಲಾ ಸಂಕ್ರಮಣ ಜಾತ್ರೆಯ ಪರ್ವದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಮಾರ್ಗಸೂಚಿ ಯಂತೆ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದು, ಇಂದು ಯಾವದೇ ಸಮಸ್ಯೆಯಿಲ್ಲದೆ ಸಹಜ ಪರಿಸ್ಥಿತಿ ಇದೆ ಎಂಬದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯೆ ನೀಡಿದರು.

ಈ ಬೆಳಿಗ್ಗೆಯಿಂದ ಭಾಗಮಂಡಲ ಹಾಗೂ ತಲಕಾವೇರಿ ಕ್ಷೇತ್ರಗಳಿಗೆ ತಮ್ಮ ತಮ್ಮ ವಾಹನಗಳಲ್ಲಿ ಒಂದಷ್ಟು ಸಂಖ್ಯೆಯಲ್ಲಿ ಕೊಡಗಿನ ಭಕ್ತರು ಬರುವದರೊಂದಿಗೆ, ದೇವರ ದರ್ಶನ ಪಡೆದು ಕಾವೇರಿ ತೀರ್ಥದೊಂದಿಗೆ ತೆರಳುತ್ತಿದ್ದು, ಶಾಂತಿ ಸುವ್ಯವಸ್ಥೆಗೆ ಯಾವದೇ ಸಮಸ್ಯೆ ಎದುರಾಗಿಲ್ಲ ಎಂದು ಭಾಗಮಂಡಲ ಠಾಣಾಧಿಕಾರಿ ಹೆಚ್. ಮಹದೇವ್ ಅವರು ಮಾಹಿತಿ ನೀಡಿದರು.

ಒಟ್ಟಿನಲ್ಲಿ ಎರಡನೆಯ ದಿವಸ ಪ್ರತಿ ಮನೆಗಳಲ್ಲಿ ಕೊಡಗಿನ ಮಂದಿ ಕಾವೇರಿ ‘ಕಣಿಪೂಜೆ’ ನಡೆಸುವದರಿಂದ ಈ ದಿನ ಭಕ್ತರ ಸಂಖ್ಯೆ ಕ್ಷೀಣವಿದ್ದು, ತಾ. 19 ರಿಂದ ಜಾತ್ರೆಗೆ ಬರುವವರಿದ್ದಾರೆ ಎಂಬ ಅಭಿಪ್ರಾಯ ಕ್ಷೇತ್ರದ ಪ್ರಮುಖರಿಂದ ವ್ಯಕ್ತಗೊಂಡಿದೆ.