ನಾಪೆÇೀಕ್ಲು, ಅ. 18: ಒಂದೆಡೆ ಕೊರೊನಾ ಭಯ...! ಮತ್ತೊಂದೆಡೆ ಸಂಪ್ರದಾಯ.. ಎರಡರ ನಡುವೆಯೂ ಕಾವೇರಿ ತೀರ್ಥೋದ್ಭವದ ಎರಡನೇ ದಿನ ಇತಿಹಾಸ ಪ್ರಸಿದ್ಧ ಬಲಮುರಿ ಅಗಸ್ತ್ಯೇಶ್ವರ ಹಾಗೂ ಕಾವೇರಿ ಕಣ್ವಮುನೀಶ್ವರ ದೇವಾಲಯದಲ್ಲಿ ತುಲಾ ಸಂಕ್ರಮಣದ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮ ಮತ್ತು ತೀರ್ಥ ಸ್ನಾನ, ಪಿಂಡ ಪ್ರಧಾನ ನಡೆಯಿತು. ಆದರೆ, ಕೋವಿಡ್ 19 ಕಾರಣದಿಂದ ಜನಸಂಖ್ಯೆ ಹಿಂದಿಗಿಂತಲೂ ವಿರಳವಾಗಿತ್ತು. ಕಾವೇರಿ ನದಿ ತೀರದ ಎಡಭಾಗದಲ್ಲಿರುವ ಕಾವೇರಿ ಕಣ್ವ ಮುನೀಶ್ವರ ದೇವಾಲಯದಲ್ಲಿ ಬೆಳಿಗ್ಗೆಯಿಂದ ರುದ್ರಾಭಿಷೇಕ, ಸತ್ಯನಾರಾಯಣ ಪೂಜೆ ಹಾಗೂ ಮಹಾಪೂಜಾ ಕಾರ್ಯಕ್ರಮ ದೊಂದಿಗೆ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಮೊದಲು ಕಾವೇರಿ ಕಣ್ವಮುನೀಶ್ವರ ದೇವಾಲಯಕ್ಕೆ ಭೇಟಿ ನೀಡಿ ಹಣ್ಣುಕಾಯಿ ಪೂಜೆ ಸಲ್ಲಿಸಿದ ನಂತರ ಅಗಸ್ತ್ಯೇಶ್ವರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು.ಅಗಸ್ತ್ಯೇಶ್ವರ ದೇವಾಲಯದಲ್ಲಿ ಅರ್ಚಕ ಚಂದ್ರಶೇಖರ್ ಐತಾಳ್ ನೇತೃತ್ವದಲ್ಲಿ ಬೆಳಿಗ್ಗೆ 5 ಗಂಟೆಯಿಂದ ಧಾರ್ಮಿಕ ಕೈಂಕರ್ಯಗಳು ಆರಂಭಗೊಂಡಿತು. ದೇವರಿಗೆ ಕುಂಕುಮಾರ್ಚನೆ, ಮಹಾಪೂಜೆ ನಡೆಯಿತು.
ಬಲಮುರಿ, ಮೂರ್ನಾಡು, ಪಾರಾಣೆ, ಬೇತ್ರಿ, ಹೊದ್ದೂರು, ನಾಪೆÇೀಕ್ಲು, ಕೊಂಡಂಗೇರಿ ಸುತ್ತಮುತ್ತ ಗ್ರಾಮಗಳಿಂದ ಭಕ್ತರು ಆಗಮಿಸಿದ್ದರು. ಕೊರೊನಾ ಹಿನ್ನೆಲೆಯಲ್ಲಿ ಹೆಚ್ಚಿನ ಭಕ್ತರು ಪೂಜಾ ಕೈಂಕರ್ಯಗಳನ್ನು ಮುಗಿಸಿ ಕೂಡಲೇ ಹಿಂತಿರುಗುತ್ತಿದ್ದ ದೃಶ್ಯ ಕಂಡು ಬಂತು.
ತುಲಾ ಸಂಕ್ರಮಣದ ಸಂದರ್ಭದಲ್ಲಿ ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿಗೆ ತೆರಳಲು ಸಾಧ್ಯವಾಗದ ಭಕ್ತರು ಬಲಮುರಿಗೆ ಬಂದು ಕಾವೇರಿ ತೀರ್ಥಸ್ನಾನ ಮಾಡುವದು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿಯಾಗಿದೆ. ಅದರೊಂದಿಗೆ ಕಾವೇರಿ ನದಿ ತೀರದಲ್ಲಿ ಕೇಶ ಮುಂಡನ, ಪೂರ್ವಿಕರಿಗೆ ಪಿಂಡ ಪ್ರಧಾನ ಕಾರ್ಯಗಳು ನಡೆದವು.
ಭಕ್ತರು ವಿರಳ: ಪ್ರತಿವರ್ಷ ಜಾತ್ರೆಯ ಸಂದರ್ಭದಲ್ಲಿ ಮಧ್ಯಾಹ್ನ ನೆರೆದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯುತ್ತಿತ್ತು. ಈ ಬಾರಿ ಅನ್ನ ಸಂತರ್ಪಣೆ ಸ್ಥಗಿತಗೊಳಿಸಿದ್ದರಿಂದ ಭಕ್ತರ ದಟ್ಟಣೆ ಹೆಚ್ಚಾಗಿ ಕಂಡುಬರಲಿಲ್ಲ.
ಒಂದು ಲಕ್ಷ ರೂ. ಕೊಡುಗೆ: ಹೊದ್ದೂರು-ಬಲಮುರಿ ಮುಕ್ಕಾಟಿರ ಕುಟ್ಟಪ್ಪ ಅವರ ಮಗ ಚಿಣ್ಣಪ್ಪ ತಂದೆ ಮತ್ತು ಅಜ್ಜ ಜೋಯಪ್ಪ ಹೆಸರಿನಲ್ಲಿ ಕಣ್ವಮುನೀಶ್ವರ ದೇವಾಲಯದ ಅಭಿವೃದ್ಧಿಗಾಗಿ ಒಂದು ಲಕ್ಷ ರೂ. ದೇಣಿಗೆಯನ್ನು ದೇವಾಲಯದ ಅಧ್ಯಕ್ಷ ನೆರವಂಡ ಜಪ್ಪು ಅಪ್ಪಚ್ಚು ಹಾಗೂ ಆಡಳಿತ ಮಂಡಳಿ ಸದಸ್ಯರಿಗೆ ಚೆಕ್ ಮೂಲಕ ಹಸ್ತಾಂತರಿಸಿದರು.
ವ್ಯಾಪಾರ ವಹಿವಾಟು ಇಲ್ಲ: ಇಲ್ಲಿ ಪ್ರತೀ ವರ್ಷ ಜಾತ್ರೆ ಸಂದರ್ಭದಲ್ಲಿ ವ್ಯಾಪಾರ ವಹಿವಾಟು ಬಿರುಸಿನಿಂದ ಸಾಗುತ್ತಿತ್ತು. ಹೊರ ಊರಿನಿಂದಲೂ ವ್ಯಾಪಾರಿಗಳು ಇಲ್ಲಿ ಅಂಗಡಿ ಇಟ್ಟು ವ್ಯಾಪಾರ ನಡೆಸುತ್ತಿದ್ದರು. ಆದರೆ, ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ವ್ಯಾಪಾರ ವಹಿವಾಟು ನಡೆಸಲು ಅವಕಾಶ ನೀಡಲಿಲ್ಲ.
ಅರ್ಚಕರ ಮನೆ ನಿರ್ಮಾಣಕ್ಕೆ ಬೇಡಿಕೆ : 2019ರ ಆಗಸ್ಟ್ ತಿಂಗಳಲ್ಲಿ ಸುರಿದ ಮಹಾಮಳೆಗೆ ಅಗಸ್ತ್ಯೇಶ್ವರ ದೇವಾಲಯದ ಅರ್ಚಕರ ಮನೆ ಸಂಪೂರ್ಣ ಕುಸಿದು ಹೋಗಿದೆ. ಅರ್ಚಕರ ಮನೆ ನಿರ್ಮಿಸಿಕೊಡುವಂತೆ ಗ್ರಾಮಸ್ಥರು ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರ ಮುಂದೆ ಬೇಡಿಕೆ ಇಟ್ಟಿದ್ದರು. ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಕೆ.ಜಿ.ಬೋಪಯ್ಯ ಸರಕಾರದಿಂದ 5 ಲಕ್ಷ ರೂ. ನೀಡುವ ಭರವಸೆ ನೀಡಿದ್ದಾರೆ ಎಂದು ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಕೊಂಗೀರಂಡ ಸಾದು ತಮ್ಮಯ್ಯ ತಿಳಿಸಿದ್ದಾರೆ.
-ಪಿ.ವಿ.ಪ್ರಭಾಕರ್