ಕಣಿವೆ, ಅ. 18: ಉನ್ನತ ವ್ಯಾಸಂಗ ಮಾಡಿದಂತಹ ಬಹಳಷ್ಟು ಮಂದಿ ವಿದ್ಯಾವಂತರು ಕೃಷಿಯತ್ತ ಒಲವು ತೋರುವುದು ಬಹಳ ವಿರಳ.

ಅದರಲ್ಲೂ ಹಣ ಸಂಪಾದನೆ ಯಲ್ಲಿ ನಿರತರಾದ ಕೆಲವರು ಕೂಡ ಹಣದ ಹಿಂದೆಯೇ ಹೋಗಿ ಆರೋಗ್ಯದತ್ತ ಆಸಕ್ತಿ ಕಳೆದು ಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ವೈದ್ಯರು ತಮ್ಮ ವೈದ್ಯ ವೃತ್ತಿಯ ನಡುವೆಯೂ ಕೃಷಿಯತ್ತ ಹೆಚ್ಚು ಚಿತ್ತ ಹರಿಸುತ್ತಿದ್ದಾರೆ. ಅದರಲ್ಲೂ ಎಂತಹ ಕೃಷಿ ಅಂತೀರಿ...! ಔಷಧೀಯ ಗಿಡ ಮೂಲಿಕೆಗಳ ಕೃಷಿ. ಇವರು ತಮ್ಮ ಮನೆಯಂಗಳದ ಒಂದು ಎಕರೆ ಭೂಮಿಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಬಗೆಯ ಗಿಡ ಮೂಲಿಕೆಗಳನ್ನು ಬೆಳೆದು ಸ್ವತಃ ಅವುಗಳಿಂದ ಆರೋಗ್ಯ ವೃದ್ಧಿಸಿಕೊಳ್ಳುವ ಜೊತೆಗೆ ಇತರರಿಗೂ ಗಿಡಮೂಲಿಕೆಗಳ ಕುರಿತು ಜಾಗೃತಿ ಮಾಡಿಸುತ್ತಿದ್ದಾರೆ. ಅವರು ಬೇರೆ ಯಾರೂ ಅಲ್ಲ. ಕುಶಾಲನಗರದ ಹೆಸರಾಂತ ದಂತವೈದ್ಯ ದೇವರಗುಂಡ ಡಾ. ಪ್ರವೀಣ್. ಕೂಡಿಗೆ ಹೆದ್ದಾರಿಯಂಚಿನ ಗುಮ್ಮನಕೊಲ್ಲಿ ಗ್ರಾಮದ ತೋಟದ ಮನೆಯಲ್ಲಿ ವಾಸವಿರುವ ಡಾ. ಪ್ರವೀಣ್, ತಮ್ಮ ನಿವಾಸಕ್ಕೆ ‘ಎನೋಮಿತ್ ಫಾರಂ’ ಎಂಬ ಹೆಸರಿಟ್ಟಿದ್ದಾರೆ. ಎನೋಮಿತ್ ಎಂದರೆ ಲ್ಯಾಟಿನ್ ಭಾಷೆಯಲ್ಲಿ ‘ಪಾಸಿಟಿವ್ ಎನರ್ಜಿ’ (ಸಕಾರಾತ್ಮಕ ಶಕ್ತಿ) ನೆಲೆಗೊಳ್ಳುವ ಸ್ಥಳ ಎಂಬುದಾಗಿದೆ. ಹಾಗಾಗಿ ಹೆಸರಿಗೆ ತಕ್ಕ ಹಾಗೆಯೇ ತಮ್ಮ ವಾಸದ ಮನೆಯ ಸುತ್ತಲೂ ಗಿಡಮೂಲಿಕೆಗಳನ್ನು ಬೆಳೆದಿರುವ ಇವರು ತಮ್ಮ ಪರಿಸರವನ್ನು ಹಚ್ಚ ಹಸಿರಿನ ಸುಂದರ ವನವಾಗಿ ಮಾಡಿಕೊಂಡಿದ್ದಾರೆ. ಇಲ್ಲಿ ಹತ್ತಾರು ಬಗೆಯ ಔಷಧೀಯ ಪುಷ್ಪಗಳ ಗಿಡಗಳು, ಮೂರ್ನಾಲ್ಕು ಬಗೆಯ ವೀಳ್ಯದೆಲೆಯ ಬಳ್ಳಿಗಳು, ಮರಬಾಳೆ, ಹೂಬಾಳೆ, ನೇಂದ್ರ ಬಾಳೆ, ಎರಡು ತಳಿಯ ತೆಂಗು, ಇವರ ಮನೆಯ ಬಳಿ ಡಾ. ಪ್ರವೀಣ್ ಅವರು ಬೇರೆಡೆಗಳಿಂದ ಹೆಕ್ಕಿ ತಂದು ನೆಟ್ಟು ಬೆಳೆಸಿದಂತಹ ಐದಾರು ತಳಿಗಳ ತುಳಸಿ ಗಿಡಗಳು, ಇಂಗಾಲದ ಡೈ ಆಕ್ಸೈಡ್ ಹೀರಿಕೊಂಡು ಶುದ್ಧ ಆಮ್ಲ ಜನಕವನ್ನು ಪೂರೈಸುವ ತರಹೇವಾರಿ ಗಿಡ ಮರಗಳು, ಸೀತಾಫಲ, ಸಪೆÇೀಟ, ಫ್ಯಾಷನ್ ಫ್ರ್ರೂಟ್ಸ್, ಲಕ್ಷ್ಮಣ ಫಲ, ಸೇಬು, ಬಟರ್ ಫ್ರೂಟ್, ಲಿಚ್ಚಿ, ಜಿಮ್ ನೇರಳೆ ಹಣ್ಣಿನ ಗಿಡಗಳು, ಎರಡು ಮೂರು ತಳಿಯ ನೆಲ್ಲಿಯ ಗಿಡಗಳು, ಅರಿಶಿಣದ ಗಿಡಗಳು, ದೊಡ್ಡ ಪತ್ರೆ, ಲೆಮೆನ್ ಗ್ರಾಸ್, ನರ್ವಿಸಾ, ಅಮೃತಬಳ್ಳಿ, ಆಹಾರಕ್ಕೆ ಅಗತ್ಯವಿರುವ ವೈವಿಧ್ಯಮಯ ತರಕಾರಿ ಕಾಯಿಪಲ್ಯೆಗಳು, ಹೀಗೆ ಒಂದಲ್ಲ ಎರಡಲ್ಲ ಹತ್ತಾರು ಬಗೆಯ ಗಿಡಮೂಲಿಕೆಗಳನ್ನು ಈ ವೈದ್ಯರು ಬೆಳೆದಿದ್ದಾರೆ. ಕೊರೊನಾ ಕಾಲಿಟ್ಟ ದಿನದಿಂದ ಈವರೆಗೂ ಇವರು ತಾವು ಬೆಳೆದಿರುವ ಔಷಧೀಯ ಗಿಡಮೂಲಿಕೆಗಳನ್ನು ಹೆಚ್ಚಾಗಿ ಬಳಸುವ ಮೂಲಕ ಇತರರಿಗೂ ಈ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.

ಡಾ. ಪ್ರವೀಣ್ ಅವರ ಪತ್ನಿ ಡಾ. ಚಿತ್ರಾ ಪ್ರವೀಣ್ ಕೂಡ ಇವರ ಗಿಡಮೂಲಿಕೆಗಳ ಕೃಷಿಯಲ್ಲಿ ಆಸಕ್ತಿ ಹೊಂದಿದ್ದು, ಅವರೂ ಕೂಡ ಬಿಡುವಿನ ಅವಧಿಯನ್ನು ಮಕ್ಕಳ ಜೊತೆ ಔಷಧೀಯ ಗಿಡಗಳಿಗೆ ನೀರು ಗೊಬ್ಬರ ಅಳವಡಿಕೆಯಲ್ಲಿ ತಲ್ಲೀನರಾಗುತ್ತಾರೆ.

ಇನ್ನೊಂದು ವಿಶೇಷ ಏನೆಂದರೆ, ಇವರ ಔಷಧೀಯ ಗಿಡಮೂಲಿಕೆಗಳ ತೋಟದಲ್ಲಿ ಸಾವಯವ ಗೊಬ್ಬರದ ಗುಂಡಿಯನ್ನು ನಿರ್ಮಿಸಿದ್ದು, ತೋಟದೊಳಗೆ ಸಂಗ್ರಹವಾಗುವ ಗಿಡ ಮರಗಳ ಎಲೆಗಳು ಹಾಗೂ ಇತರ ತ್ಯಾಜ್ಯಗಳನ್ನು ಅದರೊಳಗೆ ಹಾಕಿ ಪಕ್ಕಾ ಸಾವಯವ ಗೊಬ್ಬರ ತಯಾರಿಸಿ ತಮ್ಮ ಮನೆಯಂಗಳದಲ್ಲಿ ಬೆಳೆದಿರುವ ಗಿಡಗಳಿಗೆ ಮರುಪೂರಣಗೊಳಿಸಿ ಹಸನಾಗಿ ಬೆಳೆಸುತ್ತಿರುವುದು ಒಂದೆಡೆಯಾದರೆ, ಅಲ್ಲಿನ ಗಿಡಮೂಲಿಕೆಗಳಿಗೆ ಇದುವರೆಗೂ ಯಾವುದೇ ರಸಾಯನಿಕಗಳನ್ನು ಅಳವಡಿಸದೇ ಬೆಳೆಸಿರುವುದು ಮತ್ತೊಂದು ವಿಶೇಷ.

ವೃತ್ತಿಯಲ್ಲೂ ನೈಪುಣ್ಯತೆ ಗಳಿಸಿರುವ ಈ ದಂತ ವೈದ್ಯ ದಂಪತಿಗಳು ಕುಶಾಲನಗರದ ಸರ್ಕಾರಿ ಆಸ್ಪತ್ರೆಯ ಬಳಿ ಖಾಸಾಗಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ದೂರದ ಊರುಗಳಿಂದಲೂ ದಂತ ರೋಗಿಗಳು ಇಲ್ಲಿ ಬಂದು ಸೇವೆ ಪಡೆಯುತ್ತಿದ್ದಾರೆ. ವಿದೇಶದಲ್ಲಿ ದಂತ ವೈದ್ಯರಾಗಿದ್ದ ಡಾ. ಪ್ರವೀಣ್ ಓರಲ್ ಸರ್ಜನ್ ಆಗಿ ಉತ್ತಮ ಹೆಸರುಗಳಿಸಿದ್ದಾರೆ.

ಔಷಧೀಯ ಗಿಡಮೂಲಿಕೆಗಳ ಕೃಷಿಗೆ ಆಸಕ್ತಿ ಇರುವವರು ಇವರು ಬಿಡುವಾಗಿದ್ದಾಗ ಇವರ ಸಂಪರ್ಕ ಸಂಖ್ಯೆ 97398- 61983 ಮಾಹಿತಿ ಪಡೆಯಬಹುದಾಗಿದೆ.

- ಕೆ.ಎಸ್. ಮೂರ್ತಿ.