ಮಡಿಕೇರಿ, ಅ. 17: ಜಾಗತಿಕ ಕೊರೊನಾ ನಡುವೆ, ಕೇವಲ 72 ದಿನಗಳ ಹಿಂದೆ ತಲಕಾವೇರಿ ಕ್ಷೇತ್ರದ ಪ್ರಧಾನ ಅರ್ಚಕರ ಕುಟುಂಬವೊಂದು ತಲಕಾವೇರಿ ಪುಣ್ಯ ಸನ್ನಿಧಿ ಪರಿಸರದ ಬ್ರಹ್ಮಗಿರಿ ಶ್ರೇಣಿಯ ಗಜರಾಜಗಿರಿ ಬೆಟ್ಟ ಕುಸಿತದಿಂದ ಭೂಸಮಾಧಿಯಾಗಿರುವ ದುರಂತ ಮಾಸುವ ಮುನ್ನ; ಶಾರ್ವರಿ ನಾಮ ಸಂವತ್ಸರದ ತುಲಾ ಮಾಸದ ಇಂದಿನ ಕಾವೇರಿ ತೀರ್ಥೋದ್ಭವವು ಹೊಸ ಇತಿಹಾಸವನ್ನೇ ಸೃಷ್ಟಿಸಿದ ಅನುಭವವಾಯಿತು.ಮುಂಜಾನೆಯ ನಾಲ್ಕು ಗಂಟೆ ವೇಳೆಗೆ ಬೆಂಗಳೂರು, ದಕ್ಷಿಣ ಕೊಡಗು ಸೇರಿದಂತೆ ಜಿಲ್ಲೆಯ ವಿವಿಧೆಡೆಗಳಿಂದ 200ಕ್ಕೂ ಅಧಿಕ ಯುವಕರು ಕೊಡವ ಸಾಂಪ್ರದಾಯಿಕ ದಟ್ಟಿಕುಪ್ಪಸ ತೊಟ್ಟು ಭಾಗಮಂಡಲದಿಂದ ತಲಕಾವೇರಿಗೆ ಕಾಲ್ನಡಿಗೆಯಲ್ಲಿ ಸಾಗಿ ಬರುತ್ತಿದ್ದ ದೃಶ್ಯ ‘ಶಕ್ತಿ’ಗೆ ಎದುರಾಯಿತು. ಈ ತಂಡದ ಮುಂಚೂಣಿಯಲ್ಲಿ ದುಡಿ ಹಾಡು ಹಾಗೂ ವನಿತೆಯರು ಆರತಿ ಬೆಳಕಿನಲ್ಲಿ ಮುಂದಡಿ ಇಟ್ಟಿದ್ದರು.ಇನ್ನೊಂದೆಡೆ ಕರವಾಲೆ ಭಗವತಿ ದೇವಾಲಯ ಪ್ರಮುಖರು ಹಿರಿಯ ಮುಖಂಡ ಎಂ.ಬಿ. ದೇವಯ್ಯ ನೇತೃತ್ವದಲ್ಲಿ ‘ದುಡಿಪಾಟ್’ ಸಹಿತ ಅಗಸ್ತ್ಯೇಶ್ವರ ಸನ್ನಿಧಿಗೆ ಬಂದು ಕಾವೇರಿ ಮಾತೆಯ ಬಗ್ಗೆ ಪದ ಹೇಳುತ್ತಿದ್ದರು. ಕ್ಷೇತ್ರದಲ್ಲಿ ಒಂದಿಷ್ಟು ಪೊಲೀಸರು ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ, ಸದಸ್ಯ ಡಾ. ಸಣ್ಣುವಂಡ ಕಾವೇರಪ್ಪ ತಕ್ಕರಾದ ಕೋಡಿ ಮೋಟಯ್ಯ ಹಾಗೂ ಚಂದ್ರಶೇಖರ್ ಕಾಣಿಸಿಕೊಂಡರು.

ಇನ್ನು ದೇವತಾ ಕಾರ್ಯಕ್ಕೆ ಧಾವಿಸಿದ ಸೀಮಿತ ಅರ್ಚಕರು ಹಾಗೂ ಸುದ್ದಿಗಾಗಿ ತೆರಳಿದ ಮಾಧ್ಯಮ ಬಳಗ ಹೊರತು ಭಕ್ತ ಸಮೂಹ ಕಾಣಿಸಲೇ ಇಲ್ಲ; ದೇವಾಲಯ ಸಮಿತಿ ವಿಶೇಷ ಪ್ರವೇಶ ಪತ್ರ ನೀಡಿ ಒಂದಿಷ್ಟು ಸ್ವಯಂಸೇವಕರನ್ನು ನಿಯೋಜಿಸಿತ್ತು.

ಮಹಿಳಾ ಪ್ರಮುಖರ ಆಗಮನ

ಈ ಮುನ್ನ ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸದಸ್ಯೆ ಕೆ.ಪಿ. ಚಂದ್ರಕಲಾ ಹಾಗೂ ಮೇಲ್ಮನೆ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಕಾಣಿಸಿಕೊಂಡರು. ಸಾಂಪ್ರದಾಯಿಕ ಉಡುಪಿನಲ್ಲಿ ಪುತ್ರರು, ಸೊಸೆ ಸಹಿತ ಬಂದ ವೀಣಾ ಮನೆಯಿಂದಲೇ ಚಳಿಯ ನಡುವೆ ಕುಡಿಯಲು ಕಾಫಿ ಕೂಡ ತಂದುಕೊಂಡಿದ್ದು ಜಾತ್ರೆಯ ಸೂಕ್ಷ್ಮವನ್ನು ವಿವರಿಸುವಂತಿತ್ತು.

ಪಾದಯಾತ್ರೆ ತಂಡ: ಕತ್ತಲೆ ಸರಿದು ಮೂಡಣದಲ್ಲಿ ಸೂರ್ಯೋದಯ ಆಗುತ್ತಿದ್ದಂತೆಯೇ ಭಾಗಮಂಡಲದಿಂದ ಸಾಗಿಬರುತ್ತಿದ್ದ ಯುವಕರ ತಂಡ ತಲಕಾವೇರಿ ತಲುಪಿತು. ಈ ತಂಡವನ್ನು ಮಹಾದ್ವಾರದಿಂದ ಒಳಗೆ ಬಿಡಲಾಗುವುದಿಲ್ಲ ಎಂದು ಭದ್ರತಾ ವ್ಯವಸ್ಥೆ ನೋಡಿಕೊಳ್ಳುತ್ತಿದ್ದ ಮಡಿಕೇರಿ ಪೊಲೀಸ್ ಉಪ ಅಧೀಕ್ಷಕ ಬಿ.ಪಿ. ದಿನೇಶ್‍ಕುಮಾರ್ ಹಾಗೂ ವೃತ್ತ ನಿರೀಕ್ಷಕರುಗಳಾದ ಐ.ಪಿ. ಮೇದಪ್ಪ, ಹೆಚ್. ದಿವಾಕರ್ ಸೂಚ್ಯವಾಗಿ ನುಡಿದರು.

ವೀಣಾ ಸಿಡಿಮಿಡಿ: ಈ ವೇಳೆ ಸಿಡಿಮಿಡಿಗೊಂಡ ವೀಣಾ ಅಚ್ಚಯ್ಯ, ಕಾಲ್ನಡಿಗೆಯಲ್ಲಿ ಬಂದಿರುವ ಯುವ ಸಮೂಹಕ್ಕೆ

(ಮೊದಲ ಪುಟದಿಂದ) ತೀರ್ಥೋದ್ಭವ ವೀಕ್ಷಣೆಗೆ ಬಿಡುವಂತೆ ಪೊಲೀಸರಲ್ಲಿ ಬಿನ್ನವಿಸಿದರು. ಮೇಲಧಿಕಾರಿಗಳ ಸೂಚನೆ ಹೊರತು ತಾವು ನಿರ್ಧರಿಸಲಾಗದು ಎಂದು ಕರ್ತವ್ಯನಿರತ ಅಧಿಕಾರಿಗಳು ಸ್ಪಷ್ಟಪಡಿಸಿದರು.

ಅಧ್ಯಕ್ಷರಿಗೆ ಬುಲಾವ್: ಹೀಗಾಗಿ ಮೇಲ್ಮನೆ ಸದಸ್ಯರು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ ಅವರನ್ನು ಮೊಬೈಲ್ ಕರೆ ಮಾಡಿ ಕರೆಸಿಕೊಂಡು, ವೀಣಾ ಅಚ್ಚಯ್ಯ ಬಣಗುಡುತ್ತಿರುವ ಕ್ಷೇತ್ರದಲ್ಲಿ ಬರುತ್ತಿರುವ ಭಕ್ತರಿಗಾದರೂ ತೀರ್ಥೋದ್ಭವ ವೀಕ್ಷಿಸಲು ಅವಕಾಶ ನೀಡುವಂತೆ ತಿಳಿ ಹೇಳಿದರು. ಈ ಬಗ್ಗೆ ತಮ್ಮಯ್ಯ ಅಸಹಾಯಕತೆ ಹೊರಗೆಡವಿದರು.

ಕೆರಳಿದ ವೀಣಾ: ‘ನೀವು ಭಕ್ತರನ್ನು ಬಿಡದಿದ್ದರೆ ನಾನೂ ಬರಲಾರೆ’ ಎಂದು ವೀಣಾ ನುಡಿದರಲ್ಲದೆ, ನಿಮಿಷ ಕ್ಕೊಂದು ಹೇಳಿಕೆ ಬದಲಾಯಿಸುವ ಅಧ್ಯಕ್ಷರಿಂದ ಏನು ತಾನೆ ಆದೀತು ಎಂದು ಕೆರಳಿದರು. ಈ ವೇಳೆ ಜೊತೆಗಿದ್ದ ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ... ‘ಅಧ್ಯಕ್ಷರೇ ನಿಮ್ಮಿಂದ ವ್ಯವಸ್ಥೆ ಮಾಡಲು ಸಾಧ್ಯವಿಲ್ಲದಿದ್ದರೆ ನಿಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಆ ಪತ್ರವನ್ನು ಸಂಬಂಧಿಸಿದ ಅಧಿಕಾರಿಯ ಮುಖಕ್ಕೆ ಎಸೆದು ಹೊರ ಬನ್ನಿ ಎಂದು ತರಾಟೆಗೆ ತೆಗೆದುಕೊಂಡರು.

ಈ ಜನಪ್ರತಿನಿಧಿಗಳೊಂದಿಗೆ ಇದ್ದ ಇತರರೂ ಅಧ್ಯಕ್ಷರ ವಿರುದ್ಧ ಮಾತನಾಡತೊಡಗಿದರು. ಅಷ್ಟರಲ್ಲಿ ಸ್ಪಷ್ಟ ಮಾತುಗಳಲ್ಲಿ ತನ್ನ ಕರ್ತವ್ಯ ವ್ಯಾಪ್ತಿಯನ್ನು ನೆನಪಿಸಿದ ಬಿ.ಎಸ್. ತಮ್ಮಯ್ಯ... ‘ನಿಮಗೆ ಏನೂ ಮಾತನಾಡುವುದಿದ್ದರೂ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿ ಬಳಿ ಮಾತನಾಡಿ’ ಎಂದು ಹೇಳಿ ಪೂಜಾ ವ್ಯವಸ್ಥೆಯತ್ತ ಗಮನಿಸತೊಡಗಿದರು.

ದುಡಿ ಹಾಡಿಗೆ ತಡೆ: ಅಷ್ಟರಲ್ಲಿ ಭಗಂಡೇಶ್ವರ ಸನ್ನಿಧಿಯ ಅರ್ಚಕರ ಸಹಿತ ಬಳ್ಳಡ್ಕ ಕುಟುಂಬದ ತಕ್ಕರಾದ ಅಪ್ಪಾಜಿ ತಂಡ ಕಾವೇರಿ ಮಾತೆಗೆ ಆಭರಣದೊಂದಿಗೆ ತೀರ್ಥ ಕೊಂಡೊಯ್ಯಲು ಆಗಮಿಸಿತು. ಈ ವೇಳೆ ಅಗಸ್ತ್ಯೇಶ್ವರ ಸನ್ನಿಧಿಯಲ್ಲಿ ಎಂ.ಬಿ. ದೇವಯ್ಯ ತಂಡದ ದುಡಿ ಹಾಡನ್ನು ಸ್ಥಗಿತಗೊಳಿಸಲು ಪೊಲೀಸರು ತಾಕೀತು ಮಾಡಿ ದ್ದಾಯಿತು.

ಕೋಪ ತೋರಿದ ರಂಜನ್

ಈ ಎಲ್ಲಾ ಬೆಳವಣಿಗೆ ನಡುವೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಆಗಮನವಾಯಿತು. ಗೇಟ್ ಬಳಿಯಲ್ಲಿ ಕೊಡವ ಸಾಂಪ್ರದಾಯಿಕ ಧಿರಿಸಿನ ಯುವಕ ರನ್ನು ಒಳಗೆ ಬಿಡದೆ ತಡೆಗಿಡಿದಿದ್ದು ಕಂಡು ಶಾಸಕರು ಕೋಪಗೊಂಡರು. ಪೊಲೀಸ್ ಅಧಿಕಾರಿಗಳ ವಿರುದ್ಧ ಹರಿಹಾಯ್ದು ಯುವ ಸಮೂಹವನ್ನು ಮಹಾದ್ವಾರ ಬಳಿ ಕರೆದೊಯ್ದರು.

ಸಚಿವರ ಆಗಮನ: ಅಷ್ಟರಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ, ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಸೇರಿದಂತೆ ಅಧಿಕಾರಿಗಳ ತಂಡದ ಆಗಮನವಾಯಿತು. ಪರಿಸ್ಥಿತಿ ಬಗ್ಗೆ ಶಾಸಕ ಅಪ್ಪಚ್ಚು ರಂಜನ್ ಗಮನ ಸೆಳೆದು ಎಲ್ಲರನ್ನೂ ತೀರ್ಥೋದ್ಭವ ವೀಕ್ಷಣೆಗೆ ಬಿಡುವಂತೆ ಸಲಹೆಯಿತ್ತರು. ಪರಿಸ್ಥಿತಿ ಸೂಕ್ಷ್ಮತೆ ಅರಿತ ಸಚಿವರು, ಜಿಲ್ಲಾಡಳಿತ ಪ್ರಮುಖರು ಮರು ಮಾತನಾಡದೆ ಮುಂದೆ ಸಾಗಿದರು.

ಯುವ ಸಮೂಹ ಸಾಕ್ಷಿ

ಆ ಮೂಲಕ ಮುನ್ನಡೆದ ಯುವ ಸಮೂಹ ಶಾಸಕರನ್ನು ಪ್ರಶಂಸೆಯ ಮಾತಿನೊಂದಿಗೆ, ಭಕ್ತರ ಸಾಲಿನಲ್ಲಿ ತೀರ್ಥೋದ್ಭವ ವೀಕ್ಷಿಸಿತು. ಬದಲಾಗಿ ಪ್ರತಿವರ್ಷ ಸಾವಿರ ಸಾವಿರ ಸಂಖ್ಯೆಯಲ್ಲಿ ತುಲಾ ಸಂಕ್ರಮಣದ ಕಾವೇರಿ ತೀರ್ಥೋದ್ಭವವನ್ನು ಕಣ್ತುಂಬಿಕೊಳ್ಳುತ್ತಿದ್ದ ಭಕ್ತ ಸಮೂಹ ವಿಲ್ಲದೆ ತಲಕಾವೇರಿ-ಭಾಗಮಂಡಲ ಕ್ಷೇತ್ರ ಬಣಗುಡುತ್ತಿದ್ದ ಅನುಭವವಾಯಿತು.

ಅಧ್ಯಕ್ಷರೇ ನಿರ್ಗಮನ: ಬೆಳಗಿನ ಜಾವ 3 ಗಂಟೆಯಿಂದಲೇ ಕ್ಷೇತ್ರದಲ್ಲಿ ಪೂರ್ವ ಸಿದ್ಧತೆ ಗಮನಿಸುತ್ತಿದ್ದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ, ಈ ಬೆಳವಣಿಗೆಯನ್ನು ಎದುರುಗೊಂಡು, ಜಿಲ್ಲಾಡಳಿತ ವಿರುದ್ಧ ಅಸಮಾಧಾನದೊಂದಿಗೆ ತಲಕಾವೇರಿ ಯಿಂದ ಹೊರ ನಡೆದರು. ಕೋವಿಡ್ ಸೋಂಕಿನ ಕಾರಣ ನೀಡಿ; ಕ್ಷೇತ್ರಕ್ಕೆ ಬರುವ ಭಕ್ತರು ಆರೋಗ್ಯ ತಪಾಸಣೆಯ ಪಾಸ್ ಸಹಿತ ಬರ ಹೇಳಿ, ದಿಢೀರ್ ಎಲ್ಲರನ್ನು ಬಿಟ್ಟಿರುವುದು ನೈಜ ಭಕ್ತರಿಗೆ ನೋವುಂಟು ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇಂದಿನ ಬೆಳವಣಿಗೆಗೆ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಕಾರಣರಾಗಿದ್ದು, ವ್ಯವಸ್ಥಾಪನಾ ಸಮಿತಿ ಕೈಗೊಂಡಿದ್ದ ಪೂರ್ವ ತಯಾರಿ ವ್ಯರ್ಥವಾಯಿತು ಎಂದು ನೋವು ಹೊರಗೆಡ ವಿದರು. ಇತ್ತ ತೀರ್ಥೋದ್ಭವದ ಮರು ಘಳಿಗೆಯಿಂದ ತಲಕಾವೇರಿ-ಭಾಗಮಂಡಲದಲ್ಲಿ ಕೈಬೆರಳೆಣಿಕೆ ಭಕ್ತರೊಂದಿಗೆ ಉಭಯ ಕ್ಷೇತ್ರಗಳು ಮಾಮೂಲಿ ದಿನಗಳಂತೆ ಭಾಸವಾಗುತ್ತಿತ್ತು.