ಮಡಿಕೇರಿ, ಅ. 17: ಐತಿಹಾಸಿಕ ನಾಡ ಹಬ್ಬ ಮಡಿಕೇರಿ ದಸರಾ ಪ್ರಯುಕ್ತ ನಗರದ ನಾಲ್ಕು ಶಕ್ತಿ ದೇವತೆಗಳ ಕರಗ ಉತ್ಸವಕ್ಕೆ ಕೊರೊನಾ ಹಾವಳಿಯ ನಡುವೆ ಸಾಂಪ್ರದಾಯಿಕ ವಾಗಿ ಶ್ರದ್ಧಾ ಭಕ್ತಿಯ ಪೂಜೆಯೊಂದಿಗೆ ಇಂದು ಚಾಲನೆ ನೀಡಲಾಯಿತು.ನಗರದ ಪಂಪಿನ ಕೆರೆಯಲ್ಲಿ ಶಕ್ತಿ ದೇವತೆಗಳಾದ ಪ್ರತಿ ಬಾರಿ ಪಂಪಿನಕೆರೆ ಬಳಿಯಿಂದ ಒಟ್ಟಾಗಿ ಸಾಗುತ್ತಿದ್ದ ಕರಗಗಳು ಈ ಬಾರಿ ಕೊರೊನಾ ನಿಯಮದ ಹಿನ್ನೆಲೆಯಲ್ಲಿ ಸಾಮೂಹಿಕ ಪೂಜೆಯ ಬಳಿಕ ಒಂದರ ಹಿಂದೆ ಒಂದರಂತೆ ತೆರಳಬೇಕಾಯಿತು. ಈ ಹಿನ್ನೆಲೆಯಲ್ಲಿ ಪಂಪಿನಕೆರೆ ಗೇಟ್‍ನಿಂದ ಹೊರ ಬಂದ ಶ್ರೀ ಕಂಚಿಕಾಮಾಕ್ಷಿ ಕರಗ ದೈವ ಮುಂದೆ ಚಲಿಸಲು ಕೆಲಕಾಲ ನಿರಾಕರಿಸಿತು. ಕುಂದುರುಮೊಟ್ಟೆ ಹಾಗೂ ದಂಡಿನ ಮಾರಿಯಮ್ಮ ಕರಗಗಳು ಅದಾಗಲೇ ಅಲ್ಲಿಂದ ತೆರಳಿದ್ದ ಬಗ್ಗೆ ಅಸಮಾಧಾನ ಹೊರ ಹಾಕಿದ ದೈವ ‘ಪ್ರತಿ ಬಾರಿ ಒಟ್ಟಾಗಿ ಸಾಗುತ್ತಿದ್ದ ನಮ್ಮನ್ನು ಈ ಬಾರಿ ಏಕೆ ಬೇರೆ ಬೇರೆಯಾಗಿ ಮಾಡಿದಿರಿ’ ಎಂದು ಪ್ರಶ್ನಿಸಿತು. ಈ ವೇಳೆ ಕಂಚಿಕಾಮಾಕ್ಷಿ ದೇವಾಲಯ ಸಮಿತಿ ಪ್ರಮುಖರು ಮನ್ನಿಸುವಂತೆ ಕೋರಿ ನಮಿಸಿದರು. ಬಳಿಕ ‘ಇಲ್ಲಿ ಎಲ್ಲರೂ ಒಂದೇ. ನಮ್ಮ ನಮ್ಮಲ್ಲೇ ಭೇದ-ಭಾವ ಮಾಡಬೇಡಿ; ಎಲ್ಲರೂ ಒಂದಾಗಿರಬೇಕು’ ಎಂದು ಸೂಚಿಸಿದ ದೈವ ಅಲ್ಲಿಂದ ಮುನ್ನಡೆಯಲಾರಂಭಿಸಿತು.

(ಮೊದಲ ಪುಟದಿಂದ) ಕುಂದುರು ಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ, ಶ್ರೀ ದಂಡಿನ ಮಾರಿಯಮ್ಮ, ಶ್ರೀ ಕೋಟೆ ಮಾರಿಯಮ್ಮ ಹಾಗೂ ಶ್ರೀ ಕಂಚಿಕಾಮಾಕ್ಷಿಯಮ್ಮ ಕರಗಗಳಿಗೆ ಭಕ್ತಿಯ ಪೂಜೆ ಸಲ್ಲಿಸಲಾಯಿತು. ಕುಂದುರು ಮೊಟ್ಟೆ ಕರಗವನ್ನು ಚಾಮಿ, ದಂಡಿನ ಮಾರಿಯಮ್ಮ ಕರಗವನ್ನು ಉಮೇಶ್, ಕೋಟೆ ಮಾರಿಯಮ್ಮ ಕರಗವನ್ನು ಉಮೇಶ್ ಸುಬ್ರಮಣಿ, ಕಂಚಿ ಕಾಮಾಕ್ಷಿ ಕರಗವನ್ನು ನವೀನ್ ಹೊತ್ತಿದ್ದರು. ಕೊರೊನಾ ಹಿನ್ನೆಲೆ ಕರಗ ಹಾಗೂ ಮಂಟಪ ಸಮಿತಿಗಳ ನಿರ್ದಿಷ್ಟ ಮಂದಿ ಹಾಗೂ ಕೆಲ ಸಾರ್ವಜನಿಕರು ಜನಪ್ರತಿನಿಧಿಗಳು ಅಧಿಕಾರಿಗಳು ಮಾತ್ರ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಕರಗ ಸಾಗುವ ಮಾರ್ಗದಲ್ಲಿ ಭಕ್ತಿಯಿಂದ ಈಡುಗಾಯಿ, ಆರತಿ ಸೇವೆಗಳು ನಡೆದವು. ಮಡಿವಾಳ ಸಮಾಜದಿಂದ ಕರಗಗಳಿಗೆ ಪೂಜೆ ಸಲ್ಲಿಸಲಾಯಿತು.

ಪೂಜೆ ಬಳಿಕ ಕುಂದುರುಮೊಟ್ಟೆ ಹಾಗೂ ದಂಡಿನ ಮಾರಿಯಮ್ಮ ಕರಗ ಮೊದಲಿಗೆ ಪ್ರದಕ್ಷಿಣೆ ಹೊರಟರೆ ನಂತರ ಕಂಚಿ ಕಾಮಾಕ್ಷಿ ಹಾಗೂ ಕೋಟೆ ಮಾರಿಯಮ್ಮ ಕರಗಗಳು ಪ್ರದಕ್ಷಿಣೆ ಆರಂಭಿಸಿದವು. ನಂತರ ಬನ್ನಿ ಮಂಟಪ, ಕೋದಂಡ ರಾಮ ದೇವಾಲಯ, ಬಸವೇಶ್ವರ ದೇವಾಲಯ, ಚೌಡೇಶ್ವರಿ ದೇವಾಲಯ, ಕನ್ನಿಕಾ ಪರಮೇಶ್ವರಿ ಸನ್ನಿಧಿಗೆ ಹಾಗೂ ಪೇಟೆ ಶ್ರೀ ರಾಮಮಂದಿರಕ್ಕೆ ತೆರಳಿ ಪೂಜೆಯ ಬಳಿಕ ತಮ್ಮ ತಮ್ಮ ದೇವಾಲಯಗಳಿಗೆ ಹಿಂತಿರುಗಿದವು. ಕರಗಗಳ ಸುಗಮ ಸಂಚಾರಕ್ಕೆ ದಿಢೀರನೆ ಸುರಿದ ಮಳೆರಾಯ ಕೆಲಹೊತ್ತು ಅಡ್ಡಿಯುಂಟು ಮಾಡಿತು.

ಮಹಾಮಾರಿ ತೊಲಗಲಿ

ಕರಗ ಪೂಜೆಯಲ್ಲಿ ಪಾಲ್ಗೊಂಡ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು, ಕೊರೊನಾ ಮಹಾಮಾರಿ ತೊಲಗಿ ನಾಡಿಗೆ ಒಳಿತಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾಗಿ ಹೇಳಿದರು. ನಾಡಿನ ಎಲ್ಲರಿಗೂ ಶುಭವಾಗಲಿ ಎಂದು ಪ್ರಾರ್ಥಿಸಿದ್ದಾಗಿ ಶಾಸಕ ಅಪ್ಪಚ್ಚು ರಂಜನ್ ನುಡಿದರು.

ಶಾಸಕರುಗಳಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಪೆÇಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ, ಜಿ.ಪಂ. ಸಿಇಓ ಭಂವರ್ ಸಿಂಗ್ ಮೀನಾ ದಸರಾ ಸಮಿತಿ ಕಾರ್ಯಾಧ್ಯಕ್ಷ ರಾಬಿನ್ ದೇವಯ್ಯ, ಪ್ರಧಾನ ಕಾರ್ಯದರ್ಶಿ ಬಿ.ಕೆ. ಜಗದೀಶ್, ದಶಮಂಟಪ ಸಮಿತಿ ಅಧ್ಯಕ್ಷ ಗುರುರಾಜ್, ನಗರಸಭಾ ಆಯುಕ್ತ ರಾಮದಾಸ್, ಕನ್ನಡ ಸಂಸ್ಕøತಿ ಇಲಾಖೆ ಅಧಿಕಾರಿ ದರ್ಶನ್, ಜಿಲ್ಲಾ ಆರೋಗ್ಯಾಧಿಕಾರಿ ಮೋಹನ್ ಮತ್ತಿತರರು ಪಾಲ್ಗೊಂಡಿದ್ದರು.