ಮಡಿಕೇರಿ, ಅ. 17 : ಸಪ್ತ ತೀರ್ಥಕೋಟಿಯಲ್ಲಿ ಒಂದಾಗಿರುವ ಕೊಡಗಿನ ಕುಲಮಾತೆ ಹಾಗೂ ದಕ್ಷಿಣ ಗಂಗೆ ಎಂಬ ಹೆಗ್ಗಳಿಕೆಯ ಜೀವನದಿ ಕಾವೇರಿಯ ಉಗಮಸ್ಥಳ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಇಂದು ಬೆಳಗಿನ ಏಳುಗಂಟೆ ನಾಲ್ಕು ನಿಮಿಷಕ್ಕೆ ಪವಿತ್ರ ತೀರ್ಥೋದ್ಭವ ನೆರವೇರಿತು. ಮುಂಜಾನೆಯ ಶುಭ್ರ ವಾತಾವರಣದೊಂದಿಗೆ; ಜಾಗತಿಕ ಕೊರೊನಾ ಸೋಂಕಿನ ನಿರ್ಬಂಧದಿಂದಾಗಿ ಅಡೆತಡೆಗಳ ನಡುವೆಯೂ ಸಾಗಿ ಬಂದ ನೂರಾರು ಭಕ್ತರು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರ ಸಹಿತ ಜಿಲ್ಲೆಯ ಹಿರಿಯ ಅಧಿಕಾರಿಗಳು ಮತ್ತು ಅರ್ಚಕ ಬಳಗ ಪುಣ್ಯ ತೀರ್ಥೋದ್ಭವದ ಕ್ಷಣಕ್ಕೆ ಸಾಕ್ಷಿಯಾದರು.ಉಷಃಕಾಲ 4.40ಕ್ಕೆ ತಲಕಾವೇರಿಯಲ್ಲಿ ಅರ್ಚಕರ ಬಳಗ ಮಂತ್ರ ಘೋಷಗಳ ನಡುವೆ, ಮಹಾ ಸಂಕಲ್ಪದ ಮೂಲಕ ಪೂಜಾ ಕೈಂಕರ್ಯ ಆರಂಭಿಸಿದರು. ಆ ಮುನ್ನ ಶ್ರೀ ಮಹಾಗಣಪತಿ, (ಮೊದಲ ಪುಟದಿಂದ) ಶ್ರೀ ಅಗಸ್ತ್ಯೇಶ್ವರ ಹಾಗೂ ಶ್ರೀ ಕಾವೇರಿ ಮಾತೆಗೆ ಪುಷ್ಪಾಲಂಕಾರದೊಂದಿಗೆ ನಿತ್ಯ ಸೇವೆ ನಡೆಸಲಾಯಿತು. ಪವಿತ್ರ ತೀರ್ಥೋದ್ಭವಕ್ಕೆ ಕ್ಷಣಗಣನೆಯ ನಡುವೆ ‘‘ಕಾವೇರಮ್ಮೆ... ಉಕ್ಕಿ ಬಾ...’’ ಎಂಬ ಉದ್ಘೋಷದೊಂದಿಗೆ ಕೊಡವ ಧಿರಿಸಿನ ಯುವಕರು ಕರತಾಡನ ಮೊಳಗಿಸುತ್ತಿದ್ದರು.

ಮಹಾ ಆರತಿ : ತಲಕಾವೇರಿ ಅರ್ಚಕ ಕುಟುಂಬದ ಹಿರಿಯ ಗೋಪಾಲ ಕೃಷ್ಣ ಆಚಾರ್ ಹಾಗೂ ಕ್ಷೇತ್ರ ಪುರೋಹಿತ ಪ್ರಶಾಂತ್ ಆಚಾರ್ ನೇತೃತ್ವದಲ್ಲಿ ಧಾರ್ಮಿಕ ವಿಧಿಗಳೊಂದಿಗೆ ಕಾವೇರಿ ಮಾತೆಗೆ ವಿಪ್ರ ಬಳಗದಿಂದ ಪೂಜಾ ಕೈಂಕರ್ಯ ನೆರವೇರಿತು. ಬ್ರಹ್ಮಕುಂಡಿಕೆ ಬಳಿ ಮಹಾ ಸಂಕಲ್ಪ, ಷೋಡಸೋಪಚಾರ ಸೇವೆ, ಪಂಚಾಮೃತಾಭಿಷೇಕ, ಸಹಸ್ರ ನಾಮಾರ್ಚನೆ, ಕುಂಕುಮಾರ್ಚನೆ, ನೈವೇಧ್ಯದೊಂದಿಗೆ ಮಹಾ ಆರತಿ ನೆರವೇರಿಸಲಾಯಿತು. ಆ ವೇಳೆ ಬ್ರಹ್ಮಕುಂಡಿಕೆಯಲ್ಲಿ ಅರೆಕ್ಷಣ ಮಂದಗತಿಯಲ್ಲಿ ಕಂಪನದ ಅನುಭವದೊಂದಿಗೆ, ತುಲಾ ಸಂಕ್ರಮಣ ತೀರ್ಥೋದ್ಭವ ಗೋಚರಿಸಿತು.

ಕ್ಷಣಮಾತ್ರದಲ್ಲಿ ನೆರೆದಿದ್ದ ಸದ್ಭಕ್ತರೆಡೆಗೆ ಅರ್ಚಕರು ಸಂಪ್ರೋಕ್ಷಣೆ ನೆರವೇರಿಸಿದರು. ಆ ಬೆನ್ನಲ್ಲೇ ದೇವ ಸನ್ನಿಧಿಗಳಿಗೆ ತೀರ್ಥವನ್ನು ಅಭಿಷೇಕಕ್ಕೆ ಶೇಖರಿಸಿ ಒಯ್ಯಲಾಯಿತು. ಬ್ರಹ್ಮಕುಂಡಿಕೆ ಎದುರು ಸಚಿವ ವಿ. ಸೋಮಣ್ಣ, ಶಾಸಕರುಗಳಾದ ಎಂ.ಪಿ. ಅಪ್ಪಚ್ಚುರಂಜನ್, ವೀಣಾ ಅಚ್ಚಯ್ಯ, ಸುನಿಲ್ ಸುಬ್ರಮಣಿ, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಂವರ್ ಸಿಂಗ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸಿ.ವಿ. ಸ್ನೇಹಾ, ಉಪವಿಭಾಗಾಧಿಕಾರಿ ಈಶ್ವರ್ ಕುಮಾರ್ ಖಂಡು, ತಕ್ಕರಾದ ಕೋಡಿ ಮೋಟಯ್ಯ, ಬಳ್ಳಡ್ಕ ಅಪ್ಪಾಜಿ, ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ ಮತ್ತಿತರರು ಹಾಜರಿದ್ದರು.

(ವರದಿ : ಚಿ.ನಾ. ಸೋಮೇಶ್, ಚಿತ್ರಗಳು : ಕೆ.ಡಿ. ಸುನಿಲ್, ಕರುಣ್ ಕಾಳಯ್ಯ

(ಮೊದಲ ಪುಟದಿಂದ) ಕುಟುಂಬದವರು ಈ ಸಂದರ್ಭ ಹಾಜರಿದ್ದರು. ಬೆಳಗ್ಗೆ 7 ಗಂಟೆಯಿಂದ ಹಲವು ಪೂಜಾ ಕಾರ್ಯಗಳು ಆರಂಭವಾದವು. ಗಣಪತಿ ಹೋಮ ನಡೆಯಿತು. ಚಾಮುಂಡೇಶ್ವರಿ ಪ್ರತಿಷ್ಠಾಪನೆ 8 ಗಂಟೆ ಸುಮಾರಿಗೆ ನಡೆಸಲಾಯಿತು.

ಸರಳ ಹಾಗೂ ಸಾಂಪ್ರದಾಯಿಕ ವಿಧಿ-ವಿಧಾನ, ಪೂಜಾ ಕೈಂಕರ್ಯಗಳಲ್ಲಿ ಶಾಸಕ ಕೆ. ಜಿ. ಬೋಪಯ್ಯ ಸೇರಿದಂತೆ ಸುಮಾರು 50 ಜನರು ಮಾತ್ರ ಹಾಜರಿದ್ದರು.

ಈ ಸಂದರ್ಭ ಕಾವೇರಿ ದಸರಾ ಸಮಿತಿ ಅಧ್ಯಕ್ಷ ರಾಮಕೃಷ್ಣ, ಪ್ರ. ಕಾರ್ಯದರ್ಶಿ ಜಿಮ್ಮ ಸುಬ್ಬಯ್ಯ, ಪ್ರಮುಖರಾದ ಕುಲ್ಲಚಂಡ ಪ್ರಮೋದ್ ಗಣಪತಿ, ಗಿರೀಶ್ ಗಣಪತಿ, ಪೂಜಾ ಸಮಿತಿ ಪ್ರಮುಖರಾದ ಡಾ. ಕಾಳಿಮಾಡ ಶಿವಪ್ಪ, ಡಾ. ಕೆ. ಎನ್. ಚಂದ್ರಶೇಖರ್, ರಾಮಾಚಾರ್, ಸುಮಿ ಸುಬ್ಬಯ್ಯ ಪಾಲ್ಗೊಂಡಿದ್ದರು.

ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಕಾವೇರಿ ತೀರ್ಥೋದ್ಭವ ಸಂದರ್ಭ ಚಾಮುಂಡೇಶ್ವರಿ ದೇವಿ ಪ್ರತಿಷ್ಠಾಪನೆ ಕೂಡ ನಡೆದಿದೆ. ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ಯಾವುದು ನಡೆಸುವುದಿಲ್ಲ. ಪೂಜಾ ಕಾರ್ಯ ಮಾತ್ರ ನಡೆಯಲಿದೆ. ಕೋವಿಡ್ ಹರಡುವಿಕೆ ನಿಯಂತ್ರಿಸಲು ಜನರ ಸಹಕಾರ ಅಗತ್ಯವಿದೆ ಎಂದರು.

ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಮಾರ್ಗಸೂಚಿಯಂತೆ ಚಾಲನೆ ನೀಡಲಾಗಿದೆ. ನವರಾತ್ರಿ ಪೂಜೆ ನಂತರ ವಿಜಯದಶಮಿಯಂದು ತೀರಾ ಸರಳವಾಗಿ ವಿಸರ್ಜನೆ ಕಾರ್ಯಕ್ರಮ ನಡೆಸಲಾಗುವುದು. ಅಲ್ಲಿವರೆಗೂ ಪೂಜೆಗಳು ಮಾತ್ರ ನಡೆಯಲಿವೆ ಎಂದು ಕಾವೇರಿ ದಸರಾ ಸಮಿತಿ ಅಧ್ಯಕ್ಷ ರಾಮಕೃಷ್ಣ ತಿಳಿಸಿದರು.

ಪೂಜೆಗಷ್ಟೆ ಸೀಮಿತ: ಕೊರೊನಾ ಮುಂಜಾಗೃತೆಯಾಗಿ ಪೂಜಾ ಕಾರ್ಯಕ್ರಮಗಳಿಗಷ್ಟೆ ನಿರ್ಧರಿಸಿ ದಸರಾ ಸೀಮಿತಗೊಳಿಸಲಾಗಿದೆ. ಇದರಂತೆ 9 ದಿನ ನಿತ್ಯ ಬೆಳಗ್ಗೆ ಮತ್ತು ರಾತ್ರಿ 7 ಗಂಟೆಗೆ ಚಾಮುಂಡೇಶ್ವರಿಗೆ ಪೂಜೆ ನಡೆಯಲಿದೆ. ಬೆಳಗ್ಗಿನ ಪೂಜೆಯನ್ನು ಗೋಣಿಕೊಪ್ಪ ದಸರಾ ಆಚರಣೆಯ ಮಾತೃಸಂಸ್ಥೆ ಕಾವೇರಿ ದಸರಾ ಸಮಿತಿ ನಡೆಸಲಿದೆ. ರಾತ್ರಿಯ ಪೂಜೆಯನ್ನು ಮಂಟಪ ಸಮಿತಿಗಳು ಆಚರಿಸಲಿವೆ. ವಿಜಯದಶಮಿ ಆಚರಣೆಯ ಅ. 27 ರಂದು ಚಾಮುಂಡೇಶ್ವರಿ ದೇವಿಯನ್ನು ಸೀಗೆತೋಡು ಹರಿಯುವ ನೀರಿನಲ್ಲಿ ವಿಸರ್ಜಿಸಲಾಗುತ್ತದೆ.

ದೇವಿಯ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಸಿ.ಕೆ. ಬೋಪಣ್ಣ, ತಾಲೂಕು ಪಂಚಾಯಿತಿ ಸದಸ್ಯರಾದ ಜಯಪೂವಯ್ಯ, ದಸರಾ ಸಮಿತಿಯ ಪದಾಧಿಕಾರಿಗಳಾದ ಕುಲ್ಲಚಂಡ ಬೋಪಣ್ಣ, ಪ್ರ. ಕಾರ್ಯದರ್ಶಿ ಜಪ್ಪು ಸುಬ್ಬಯ್ಯ, ಕುಲ್ಲಚಂಡ ಚಿಣ್ಣಪ್ಪ, ಮಲ್ಚಿರ ಗಾಂಧಿ ದೇವಯ್ಯ, ಡಾ. ಚಂದ್ರಶೇಖರ್, ಡಾ. ಶಿವಪ್ಪ, ರಮೇಶ್, ಗ್ರಾಮ ಪಂಚಾಯಿತಿ ಪ್ರಬಾರ ಅಧ್ಯಕ್ಷೆ ಕಾವ್ಯ, ಸದಸ್ಯರಾದ ರಾಜಶೇಖರ, ಪ್ರಭಾವತಿ ಮಹೇಶ್, ಸುರೇಶ್ ರೈ, ಕುಲ್ಲಚಂಡ ಪ್ರಮೋದ್ ಗಣಪತಿ, ಸಾವಿತ್ರಿ, ಜೆ.ಕೆ. ಸೋಮಣ್ಣ, ಮುರುಗ, ಯಾಶ್ಮಿನ್, ಎಂ. ಮಂಜುಳ, ರತಿ ಅಚ್ಚಪ್ಪ, ಪಿಡಿಒ ಶ್ರೀನಿವಾಸ್, ಪಂಚಾಯಿತಿ ಸಿಬ್ಬಂದಿಗಳಾದ ಸತೀಶ್, ಸುಬ್ರಮಣಿ, ನವೀನ್, ಮುಂತಾದವರು ಹಾಜರಿದ್ದರು.

-ಸುದ್ದಿಪುತ್ರ, ಜಗದೀಶ್, ದಿನೇಶ್