ಮಡಿಕೇರಿ, ಅ.16 : ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಬಳಿಯಲ್ಲೇ ವ್ಯಕ್ತಿಯೊಬ್ಬರು ನಿಯಮ ಬಾಹಿರವಾಗಿ ಹಂದಿ ಸಾಕಾಣಿಕೆ ನಡೆಸುತ್ತಿದ್ದು, ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಹಂದಿ ಗೂಡನ್ನು ತಕ್ಷಣ ತೆರವುಗೊಳಿ¸ Àಬೇಕೆಂದು ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿಉತ್ತಪ್ಪ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹಂದಿ ಸಾಕಾಣಿಕೆ ವಿರುದ್ಧ ಈಗಾಗಲೇ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳು, ಗ್ರಾ.ಪಂ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿದರು.

ಸದ್ಯದಲ್ಲಿಯೇ ತಾ.ಪಂ ಹಾಗೂ ಗ್ರಾ.ಪಂ ಎದುರು ಪ್ರತಿಭಟನೆ ನಡೆಸಿ ಹಂದಿ ಗೂಡು ತೆರವಿಗಾಗಿ ಒತ್ತಾಯಿಸಲಾಗುವುದು. ಇದಕ್ಕೂ ಸೂಕ್ತ ಸ್ಪಂದನ ದೊರೆಯದಿದ್ದಲ್ಲಿ ಕಾನೂನು ಹೋರಾಟ ನಡೆಸುವುದಾಗಿ ಮಣಿಉತ್ತಪ್ಪ ಎಚ್ಚರಿಕೆ ನೀಡಿದರು.

ಕಾವೇರಿ ಎಲ್ಲರ ತಾಯಿ

ಕೊಡಗಿನ ಆರಾಧ್ಯ ದೇವಿ ಜಲಸ್ವರೂಪಿ ಕಾವೇರಿ ಮಾತೆ ಯಾವುದೋ ಒಂದು ಪಂಗಡಕ್ಕೆ ಸೇರಿದವಳಲ್ಲ, ಬದಲಿಗೆ ಎಲ್ಲರಿಗೂ ಸೇರಿದ ತಾಯಿಯಾಗಿದ್ದಾಳೆ. ಕಾವೇರಿ ತಾಯಿಯನ್ನು ಮುಂದಿಟ್ಟುಕೊಂಡು ಪಂಗಡ, ಜಾತಿವಾರು ಕಚ್ಚಾಡುವುದು ಸರಿಯಲ್ಲವೆಂದು ಮಣಿಉತ್ತಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಕಾವೇರಿಯ ರೂಪವನ್ನು ನೋಡಿದವರು ಯಾರೂ ಇಲ್ಲ, ಆಕೆ ಜಲ ಮತ್ತು ತೀರ್ಥಸ್ವರೂಪಿಣಿ ಎನ್ನುವುದಂತು ಸತ್ಯ. ಅತ್ಯಂತ ಶಕ್ತಿಶಾಲಿಯಾದ ತಾಯಿ ಕಾವೇರಿಯ ವಿಚಾರದಲ್ಲಿ ಕಲಹ ಏರ್ಪಡುತ್ತಿರು ವುದೇ ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸುತ್ತಿರುವ ಅನಾಹುತಗಳಿಗೆ ಕಾರಣವೆಂದು ಅವರು ಅಭಿಪ್ರಾಯಪಟ್ಟರು.

ಪವಿತ್ರ ಕ್ಷೇತ್ರ ತಲಕಾವೇರಿಯ ವಿಚಾರದಲ್ಲಿ ಸೃಷ್ಟಿಯಾಗಿರುವ ಗೊಂದಲದ ಬಗ್ಗೆ ಹೊರ ಜಿಲ್ಲೆಗಳಲ್ಲೂ ಚರ್ಚೆ ನಡೆಯುತ್ತಿದ್ದು, ಇದು ಉತ್ತಮ ಬೆಳವಣಿಗೆಯಲ್ಲವೆಂದು ತಿಳಿಸಿದ ಮಣಿಉತ್ತಪ್ಪ, ಎಲ್ಲರೂ ಒಗ್ಗಟ್ಟಿನಿಂದ ಜಾತಿ, ಭೇದ ಮರೆತು ಕಾವೇರಿಯ ಶಕ್ತಿಗೆ ತಲೆ ಬಾಗಬೇಕು ಎಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಸಹಕಾರ ಸಂಘದ ಉಪಾಧ್ಯಕ್ಷ ಮರದಾಳು ಎಸ್.ಉಲ್ಲಾಸ್, ನಿರ್ದೇಶಕರುಗಳಾದ ಕಣಜಾಲು ಕೆ.ಪೂವಯ್ಯ, ಪೇರಿಯನ ಎಸ್.ಪೂಣಚ್ಚ, ನೂಜಿಬೈಲು ಡಿ.ನಾಣಯ್ಯ ಹಾಗೂ ಟಿ.ಎಸ್. ಧನಂಜಯ ಉಪಸ್ಥಿತರಿದ್ದರು.