ಸೋಮವಾರಪೇಟೆ,ಅ.16: ಸೆಸ್ಕ್ ಇಲಾಖೆಯ ಅಧಿಕಾರಿಗಳು ಮಾನವೀಯತೆ ಮರೆತು ರೈತರು ಹಾಗೂ ಕಾಫಿ ಬೆಳೆಗಾರರ ಶೋಷಣೆಗೆ ಮುಂದಾಗಿದ್ದಾರೆ ಎಂದು ರೈತ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಲಿಂಗೇರಿ ರಾಜೇಶ್ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ರೈತ ಸಮುದಾಯ ಹಾಗೂ ಕಾಫಿ ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ಅಕಾಲಿಕ ಮಳೆಯಿಂದ ಕಾಫಿ ಹಣ್ಣು ಉದುರುತ್ತಿವೆ. ಬಿಳಿಕಾಂಡಕೊರಕ, ಬೋರರ್, ಕೊಳೆರೋಗದಿಂದ ಕಾಫಿ ತೋಟಗಳು ನಾಶವಾಗುತ್ತಿವೆ.

ಬೆಳೆಗಾರರು ಸಾಲಗಾರರಾಗಿದ್ದಾರೆ. ಈ ಸಂದರ್ಭದಲ್ಲೇ ಬೆಳೆಗಾರರ ಪಂಪ್‍ಸೆಟ್‍ಗಳ ಬಾಕಿ ಉಳಿಸಿಕೊಂಡಿರುವ ವಿದ್ಯುತ್ ಶುಲ್ಕವನ್ನು ಪಾವತಿ ಮಾಡುವಂತೆ ನೋಟೀಸ್ ಮಾಡುತ್ತಿದ್ದಾರೆ. ನೋಟೀಸ್ ನೀಡುವುದನ್ನು ನಿಲ್ಲಸಬೇಕು. ತಪ್ಪಿದಲ್ಲಿ ಸೆಸ್ಕ್ ಕ್ರಮದ ವಿರುದ್ಧ ರೈತಪರ ಸಂಘಟನೆಗಳ ಸಹಕಾರದೊಂದಿಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಕಾಫಿ ಹೊರತುಪಡಿಸಿ ರಾಜ್ಯದ ಎಲ್ಲಾ ಜಿಲ್ಲೆಯ ವಾಣಿಜ್ಯ ಬೆಳೆ, ಭತ್ತ ಸೇರಿದಂತೆ ಇತರ ಬೆಳೆಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಆದರೆ, ಪ್ರಕೃತಿ ವಿಕೋಪದಿಂದ ಪ್ರತಿವರ್ಷ ಅತಿ ಹೆಚ್ಚು ಹಾನಿಯಾಗುತ್ತಿರುವ ಕಾಫಿ ಕೃಷಿಗೆ ಉಚಿತ ವಿದ್ಯುತ್ ನೀಡದೆ ಸರ್ಕಾರ ಕಾಫಿ ಬೆಳೆಗಾರರಿಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ದೂರಿದರು. ಕೂಡಲೇ ಸರ್ಕಾರ ಕಾಫಿ ಬೆಳೆಗಾರರ ಎಲ್‍ಟಿ4(ಸಿ) ಪಂಪ್‍ಸೆಟ್‍ಗಳ ಬಾಕಿಯಿರುವ ವಿದ್ಯುತ್ ಶುಲ್ಕವನ್ನು ಮನ್ನಾ ಮಾಡಬೇಕು. 10 ಎಚ್.ಪಿ. ಪಂಪ್ ಸೆಂಟ್‍ಗಳಿಗೆ ಉಚಿತ ವಿದ್ಯುತ್ ನೀಡುವುದರೊಂದಿಗೆ ಬೆಳೆಗಾರರನ್ನು ಸಂಕಷ್ಟದಿಂದ ಪಾರು ಮಾಡಬೇಕೆಂದು ಒತ್ತಾಯಿಸಿದರು.

ಬ್ರಿಟಿಷರು ಕಾಫಿಯನ್ನು ಉದ್ಯಮವೆಂದು ಪರಿಗಣನೆ ಮಾಡಿದ್ದರು. ಈ ನಿಯಮವನ್ನೇ ಸರ್ಕಾರಗಳು ಮುಂದುವರಿಸಿಕೊಂಡು ಹೋಗುತ್ತಿರುವುದರಿಂದ ಕಾಫಿ ಬೆಳೆಗಾರರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದು ಸಮಿತಿ ಸಂಚಾಲಕ ಹೂವಯ್ಯ ಗೌಡಳ್ಳಿ ಹೇಳಿದರು.

ಸಂಸದ ಪ್ರತಾಪ್‍ಸಿಂಹ, ಶಾಸಕರಾದ ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ ಇನ್ನಿತರ ಜನಪ್ರತಿನಿಧಿಗಳು ಬೆಳೆಗಾರರ ಸಂಕಷ್ಟಗಳನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು. ಮಲತಾಯಿ ಧೋರಣೆ ತೋರುತ್ತಿರುವ ಸರ್ಕಾರ ವಿರುದ್ಧ ಪ್ರತಿಭಟನೆ ಮಾಡಿಯಾದರೂ, ಎಲ್‍ಟಿ4(ಸಿ) ಪಂಪ್‍ಸೆಟ್‍ಗಳಿಗೆ ಉಚಿತ ವಿದ್ಯುತ್ ಕೊಡಿಸಬೇಕು ಎಂದು ಆಗ್ರಹಿಸಿದರು.

ಕಾಫಿ ಬೆಳೆಗಾರರು ಕಾಫಿ ಹೂವಾಗುವ ಸಂದರ್ಭದಲ್ಲಿ ಎರಡು ತಿಂಗಳು ಮಾತ್ರ ಎಲ್‍ಟಿ4(ಸಿ) ಪಂಪ್‍ಸೆಟ್‍ಗಳನ್ನು ಉಪಯೋಗಿಸಿಕೊಳ್ಳುತ್ತಾರೆ. ಆದರೆ, ಉಳಿದ 10 ತಿಂಗಳು ಉಪಯೋಗಕ್ಕೆ ಬರುವುದಿಲ್ಲ. ಆದರೂ, 12 ತಿಂಗಳು ಮಿನಿಮಂ ಕಟ್ಟಲೇಬೇಕು. ಅತೀ ಸಣ್ಣ ಬೆಳೆಗಾರರ ಪಂಪ್‍ಸೆಟ್‍ಗಳಿಗೆ ವಾರ್ಷಿಕ 50 ರಿಂದ 60 ಸಾವಿರ ರೂ. ಬಿಲ್ ಬರುತ್ತಿದೆ ಎಂದು ಸಮಿತಿಯ ಕಾರ್ಯದರ್ಶಿ ಡಿ.ಎಸ್.ಚಂಗಪ್ಪ ಹೇಳಿದರು.

ಕಾಫಿ ಬೆಳೆಗಾರರ 10 ಹೆಚ್.ಪಿ. ಪಂಪ್‍ಸೆಟ್‍ಗಳಿಗೆ ಉಚಿತ ವಿದ್ಯುತ್ ನೀಡುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಅವರು ಮಾತು ಕೊಟ್ಟಿದ್ದಾರೆ. ಮಾತಿನಂತೆ ನಡೆದುಕೊಂಡು ಬೆಳೆಗಾರರನ್ನು ರಕ್ಷಿಸುತ್ತಾರೆ ಎಂದು ನಂಬಿದ್ದೇವೆ ಎಂದು ಆಶಯ ವ್ಯಕ್ತಪಡಿಸಿದರು. ಗೋಷ್ಠಿಯಲ್ಲಿ ಎ.ಬಿ.ಸುಬ್ಬಯ್ಯ ಇದ್ದರು.