ನಾಪೆÇೀಕ್ಲು, ಅ. 16: ಕಾವೇರಿ ತೀರದ ಪವಿತ್ರ ಕ್ಷೇತ್ರಗಳಲ್ಲಿ ಒಂದಾದ ಬಲಮುರಿಯಲ್ಲಿ ತಾ. 18ರಂದು ಕಾವೇರಿ ಜಾತ್ರೆ ಮತ್ತು ತೀರ್ಥ ಸ್ನಾನ ನಡೆಯಲಿದೆ.
ತಲಕಾವೇರಿಯಲ್ಲಿ ತುಲಾ ಸಂಕ್ರಮಣ ಜಾತ್ರೆ ನಡೆದ ಮರುದಿನ ಭಕ್ತರು ಅಧಿಕ ಸಂಖ್ಯೆಯಲ್ಲಿ ಬಲಮುರಿ ಕ್ಷೇತ್ರಕ್ಕೆ ಬಂದು ಕಾವೇರಿ ತೀರ್ಥಸ್ನಾನ ಮಾಡಿ ತೆರಳುವರು. ಪ್ರತಿವರ್ಷ ಕಾವೇರಿ ತೀರ್ಥೋದ್ಭವದ ಮರುದಿನ ಬಲಮುರಿ ಜಾತ್ರೆ ನಡೆಯುವದು. ತಲಕಾವೇರಿಯಂತೆ ಬಲಮುರಿಯೂ ಕೂಡ ಬಲು ಪಾವಿತ್ರ್ಯದ ಪುಣ್ಯಸ್ಥಳ ಆಗಿದೆ. ಬಲಮುರಿಯಲ್ಲಿ ಕಣ್ಣೇಶ್ವರ ಹಾಗೂ ಅಗಸ್ತ್ಯೇಶ್ವರ ದೇವಾಲಯಗಳಿವೆ. ಕಾವೇರಿ ನದಿಯ ಎಡಭಾಗದಲ್ಲಿ ಕಣ್ಣೇಶ್ವರ ಹಾಗೂ ಬಲಭಾಗದಲ್ಲಿ ಅಗಸ್ತ್ಯೇಶ್ವರ ದೇವಾಲಯಗಳಿದ್ದು ಸುಂದರವಾದ ಪರಿಸರದಿಂದ ಕೂಡಿದೆ. ಪಿತೃಗಳಿಗೆ ಪಿಂಡ ಪ್ರದಾನ ಮಾಡಲು ತಲಕಾವೇರಿಗೆ ಹೋಗಲಾಗದ ಮಂದಿ ಇಲ್ಲಿ ಪಿಂಡ ಪ್ರದಾನ ಮಾಡುತ್ತಾರೆ.
ಪುರಾಣದ ಪ್ರಕಾರ ಕಾವೇರಿ ಮಾತೆಯು ತಾನು ಹರಿದು ಇಲ್ಲಿಗೆ ಬರುವುದಾಗಿ ದೇವಕಾಂತ ಮಹಾರಾಜನಿಗೆ ಸೂಚನೆ ನೀಡಿದ್ದಳು. ತನ್ನ ಮಾತಿನಂತೆ ಕಾವೇರಿ ನದಿಯಾಗಿ ಒಲಂಪುರಿಗೆ ಹರಿದು ಬರುವಾಗ ರಭಸದ ಪ್ರವಾಹ ಏರ್ಪಟ್ಟಿತು. ಕಾವೇರಿಯನ್ನು ತಡೆಯಲು ಬಂದ ಮಹಿಳೆಯರ ಸೀರೆ ನೆರಿಗೆಗಳು ಹಿಂದಕ್ಕೆ ಸರಿದವು. ಹಿಂದಕ್ಕೆ ಹೋದ ಸೀರೆಯ ಸೆರಗನ್ನು ಬಲಭಾಗಕ್ಕೆ ಗಂಟು ಹಾಕಿ ಮಹಿಳೆಯರು ಉಟ್ಟುಕೊಂಡಿದ್ದರಿಂದ ಇಲ್ಲಿಗೆ ಬಲಮುರಿ ಎಂಬ ಹೆಸರು ಬಂತು ಎಂಬ ಪ್ರತೀತಿ ಇದೆ. ಕಾವೇರಿಯನ್ನು ಹಿಂಬಾಲಿಸಿ ಬಂದ ಅಗಸ್ತ್ಯ ಮುನಿಗಳು ನದಿತೀರದಲ್ಲಿ ಶಿವಲಿಂಗವೊಂದನ್ನು ಪ್ರತಿಷ್ಠೆ ಮಾಡಿದ್ದಾರೆ ಎನ್ನಲಾಗಿದೆ.
ಅನ್ನದಾನ ಇಲ್ಲ: ಪ್ರತೀ ವರ್ಷ ಇಲ್ಲಿ ನೆರೆದ ಭಕ್ತಾದಿಗಳಿಗೆ ಅನ್ನಸಂತರ್ಪಣೆಯನ್ನು ದೇವಳದ ವತಿಯಿಂದ, ದಾನಿಗಳಿಂದ ಏರ್ಪಡಿಸಲಾಗುತ್ತಿತ್ತು. ಆದರೆ, ಈ ಬಾರಿ ಅನ್ನದಾನ ಇರುವದಿಲ್ಲ ಎಂದು ದೇವಳ ಸಮಿತಿ ತಿಳಿಸಿದೆ.
ಉಳಿದಂತೆ ಅಗಸ್ತ್ಯೇಶ್ವರ ದೇವಾಲಯದಲ್ಲಿ ಬೆಳಗ್ಗೆ 5 ಗಂಟೆಯಿಂದ ಧಾರ್ಮಿಕ ಕೈಂಕರ್ಯಗಳು ಆರಂಭಗೊಳ್ಳುತ್ತದೆ. ದೇವರಿಗೆ ಕರ್ಪೂದಾರತಿ, ರುದ್ರಾಭಿಷೇಕ, ಕುಂಕುಮಾರ್ಚನೆ, ಮಹಾಪೂಜೆ ನಡೆಸಲಾಗುತ್ತದೆ. ಕಣ್ವ ಮುನೀಶ್ವರ ದೇವಾಲಯದಲ್ಲಿ ಬೆಳಗ್ಗೆಯಿಂದ ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯಲಿದೆ ಎಂದು ದೇವಳದ ತಕ್ಕಮುಖ್ಯಸ್ಥರು ತಿಳಿಸಿದ್ದಾರೆ. -ಪಿ.ವಿ.ಪ್ರಭಾಕರ್