ಶನಿವಾರಸಂತೆ, ಅ. 16: ಪಟ್ಟಣ ಹಾಗೂ ಹೋಬಳಿ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಮಳೆ ಕಾಫಿ ಬೆಳೆಗಾರರು ಹಾಗೂ ರೈತರಲ್ಲಿ ಆತಂಕ ಮೂಡಿಸಿದೆ. ಕಾಫಿ ಹಣ್ಣು ಉದುರಿ ನೆಲಕಚ್ಚುತ್ತಿದೆ. ಕೆಲವೆಡೆ ಗದ್ದೆಗಳಲ್ಲಿ ಭತ್ತದ ತೆನೆ ಹೊಡೆದು ಹೊರಟು ಕಾಳು ಜೊಳ್ಳಾಗುವ ಭೀತಿ ಉಂಟಾಗಿದೆ. ಶನಿವಾರಸಂತೆ ಹಾಗೂ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಬೆಳೆಗಾರರು ಸತತ 3 ವರ್ಷಗಳಿಂದ ಅತಿವೃಷ್ಟಿಯಿಂದ ಕಂಗಾಲಾಗಿದ್ದಾರೆ. ನೋಟ್ ಬ್ಯಾನ್‍ನಿಂದ ತತ್ತರಿಸಿದ್ದ ರೈತರು ಇದೀಗ ಕೋವಿಡ್-19ನಿಂದ ಹತಾಶರಾಗಿದ್ದಾರೆ. ಆಗಸ್ಟ್ - ಸೆಪ್ಟೆಂಬರ್ ತಿಂಗಳಿನಿಂದಲೇ ಕಾಫಿ ತೋಟಗಳಲ್ಲಿ ಕಟುವಾಯಿ ಕಾಫಿ ಮತ್ತು ರೋಬಸ್ಟ್ ಕಾಫಿ ಹಣ್ಣಾಗಿದೆ. 1 ಟಿನ್ ಹಣ್ಣು ಕೊಯ್ಯಲು ರೂ. 250 ರಿಂದ 300 ಸಂಬಳ ಕೂಲಿ ಕಾರ್ಮಿಕರಿಗೆ ಕೊಡಬೇಕು. ಕೊಯ್ದರೂ ಸೋನೆಯಾಗಿ ಸುರಿಯುತ್ತಿರುವ ಮಳೆಯಲ್ಲಿ ಕಾಫಿ ಹಣ್ಣು ಒಣಗಿಸುವುದಾದರೂ ಹೇಗೆ? ಎಂಬ ಚಿಂತೆ ಕಾಡುತ್ತಿದೆ ಎಂದು ದುಂಡಳ್ಳಿ ಗ್ರಾಮದ ಬೆಳೆಗಾರ ನಿವೃತ್ತ ಯೋಧ ಕೆ.ಟಿ. ಹರೀಶ್ ಅಳಲು ತೋಡಿಕೊಂಡರು.

ನವೆಂಬರ್‍ನಲ್ಲಿ ಅರೇಬಿಕಾ ಕಾಫಿ ಹಣ್ಣು ಕುಯ್ಯಲು ಆರಂಭಿಸುವುದು ವಾಡಿಕೆ. ಆದರೆ ಅಕ್ಟೋಬರ್ ತಿಂಗಳಲ್ಲಿ ಸುರಿಯುತ್ತಿರುವ ಮಳೆಗೆ ಕಾಫಿ ಹಣ್ಣು ಉದುರಿ ಮಣ್ಣಾಗುವುದನ್ನು ತಡೆಯಲು ಕುಯ್ಯದೆ ಬೆಳೆಗಾರರಿಗೆ ಬೇರೆ ದಾರಿಯಿಲ್ಲವಾಗಿದೆ. ಕುಯ್ಯದಿದ್ದರೆ ಮಣ್ಣುಪಾಲು. ಕುಯ್ದರೆ ಒಣಗಿಸುವ ಸಮಸ್ಯೆ. ವರ್ಷಾರಂಭದಲ್ಲಿ ಮಳೆಯಾಗಲಿಲ್ಲ. ವರ್ಷಾಂತ್ಯದಲ್ಲಿ ಸುರಿಯುತ್ತಾ ಬೆಳೆ ಹಾನಿಯಿಂದ ರೈತರ, ಬೆಳೆಗಾರರ ಬದುಕಿನಲ್ಲಿ ಹತಾಶೆ ಮೂಡಿಸುತ್ತಿದೆ.

- ನರೇಶ್ಚಂದ್ರ.