ಕೃಷಿ ಫಸಲು ಸಹಿತ ತೋಟದ ಬೆಳೆಗಳಿಗೆ ಕೊಡಗಿನಲ್ಲಿ ಕೊಳೆರೋಗ
ಮಡಿಕೇರಿ, ಅ. 16: ಕೊಡಗಿನ ಕಾಫಿ ಬೆಳೆಗಾರರ ಸಹಿತ ಭತ್ತ ಹಾಗೂ ತೋಟಗಾರಿಕಾ ಬೆಳೆಗಳಿಗೆ ತಗಲುತ್ತಿರುವ ಕೊಳೆರೋಗದಿಂದ ಆತಂಕಗೊಂಡಿದ್ದಾರೆ, ಮಾತ್ರವಲ್ಲದೆ ಕಾಫಿ ಹಾಗೂ ಒಳ್ಳೆಮೆಣಸು ಫಸಲು ಮತ್ತು ಏಲಕ್ಕಿ ಹೂವುಗಳು ಕಾಯಿಕಟ್ಟುವ ಮುನ್ನ ಉದುರು ವದರೊಂದಿಗೆ ತೀವ್ರ ತೊಂದರೆ ಎದುರಾಗಿದೆ ಎಂದು ಅಸಹಾಯಕತೆ ತೋಡಿಕೊಂಡಿದ್ದಾರೆ.
ದಕ್ಷಿಣ ಕೊಡಗಿನ ಬಲ್ಯಮಂಡೂರುವಿನ ರೈತ ಮಾಚಿಮಾಡ ಮಾಚಯ್ಯ ಅವರು ‘ಶಕ್ತಿ’ಯೊಂದಿಗೆ ಮಾತನಾಡಿ, ಈತನಕ ಕಾಫಿ ಇತ್ಯಾದಿ ಉತ್ತಮ ಫಸಲು ಕಾಣುವಂತಾಗಿದ್ದು, ಇದೀಗ ಎದುರಾಗಿರುವ ತೀವ್ರ ಚಳಿ ಹಾಗೂ ಮಳೆಯಿಂದ ಫಸಲು ಉದುರುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಕೊಡಗಿನ ಬಿರುನಾಣಿ, ಶ್ರೀಮಂಗಲ, ಹುದಿಕೇರಿ, ಕಾನೂರು, ಕುಟ್ಟ ವ್ಯಾಪ್ತಿಯಲ್ಲಿ ಮಳೆಯಿಂದ ಈ ಪರಿಸ್ಥಿತಿಯನ್ನು ಬಹುತೇಕ ರೈತರು ಅನುಭವಿಸುವಂತಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ವೀರಾಜಪೇಟೆ ತಾಲೂಕಿನ ಬಹುತೇಕ ಕಡೆಗಳಲ್ಲಿ ನಿರಂತರ ಮೋಡದೊಂದಿಗೆ ಮಳೆಯ ವಾತಾವರಣ ರೈತರ ದೃತಿಗೆಡಿಸಿದ್ದು, ವಿವಿಧೆಡೆ ಕಾಡಾನೆಗಳಿಂದಲೂ ಕೃಷಿಕರು ತೊಂದರೆ ಎದುರಿಸು ವಂತಾಗಿದೆ ಎಂದು ಕೃಷಿಕರೂ ಆಗಿರುವ ರಾಜಕೀಯ ಪ್ರಮುಖರಾದ ನೆಲ್ಲೀರ ಚಲನ್, ಅರುಣ್ ಭೀಮಯ್ಯ ಹಾಗೂ ತಿತಿಮತಿಯ ಬೆಳೆಗಾರ ಚಕ್ಕೇರ ಮನು ಕಾವೇರಪ್ಪ ಕಳವಳ ವ್ಯಕ್ತಪಡಿಸಿದ್ದಾರೆ.
ಮಡಿಕೇರಿ ತಾಲೂಕು: ಮಡಿಕೇರಿ ತಾಲೂಕಿನ ಭಾಗಮಂಡಲ, ತಣ್ಣಿಮಾನಿ, ಕೋರಂಗಾಲ, ಚೇರಂಗಾಲ, ಅಯ್ಯಂಗೇರಿ ಸೇರಿದಂತೆ ನಾಪೋಕ್ಲು, ಸಂಪಾಜೆ ಹೋಬಳಿಗಳಲ್ಲಿ ಇದೇ ಪರಿಸ್ಥಿತಿಯೊಂದಿಗೆ ಕಾಫಿ, ಏಲಕ್ಕಿ, ತೆಂಗು, ಅಡಿಕೆ ಮುಂತಾದ ಬೆಳೆಗಳಿಗೂ ಹಾನಿ ಎದುರಾಗಿದೆ ಎಂದು ಕೃಷಿಕರಾದ ಅಶೋಕ್, ಜಯಂತ್, ಅರಂಬೂರು ವಸಂತ್ ಮುಂತಾದವರು ಅಸಹಾಯಕತೆ ಹೊರಗೆಡವಿದ್ದಾರೆ.
ಇನ್ನು ಮಡಿಕೇರಿ ಸುತ್ತಮುತ್ತಲಿನ ಮಕ್ಕಂದೂರು, ಹಾಲೇರಿ, ಗಾಳಿಬೀಡು ಇತರ ಗ್ರಾಮೀಣ ಭಾಗಗಳಲ್ಲಿ ರೈತರು ಮಳೆ-ಗಾಳಿಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಆರ್ಎಂಸಿ ಅಧ್ಯಕ್ಷ ಬೆಪ್ಪುರನ ಮೇದಪ್ಪ, ಮರಗೋಡುವಿನ ರೈತ ಕಾಂಗೀರ ಸತೀಶ್ ಮುಂತಾದವರು ಬೊಟ್ಟು ಮಾಡಿದ್ದಾರೆ.
ಮಳೆ ಕಡಿಮೆಯಾಗದಿದ್ದರೆ ಇದುವರೆಗೆ ಫಸಲು ಕಂಡಿರುವ ಬಹುತೇಕ ಬೆಳೆಗಳು ರೈತನ ಕೈಗೆಟುಕದೆ ತೀರಾ ಉದುರುವಂತಾಗಿದೆ ಎಂದು ವಿವರಿಸಿರುವ ಪ್ರಮುಖರು, ಗಿಡಗಳಿಗೆ ಕೊಳೆರೋಗದಿಂದ ಮಣ್ಣು ಸಡಿಲವಾಗಿ ಎಡೆಬಿಸಿಲಿನ ವೇಳೆ ಒಣಗುವ ಆತಂಕ ಕಾಡುತ್ತಿರುವುದಾಗಿ ನೆನಪಿಸಿದ್ದಾರೆ.
ಸೋಮವಾರಪೇಟೆ ತಾಲೂಕು: ಸೋಮವಾರಪೇಟೆ ತಾಲೂಕಿನ ಗರ್ವಾಲೆ ಗ್ರಾ.ಪಂ. ವ್ಯಾಪ್ತಿಯ ಹಳ್ಳಿಗಳು, ಶಾಂತಳ್ಳಿ ಹೋಬಳಿಯ ಬಹುತೇಕ ಗ್ರಾಮಗಳಲ್ಲಿ ವಿಪರೀತ ಮಳೆ-ಗಾಳಿಯ ಪರಿಣಾಮ ದಿನಗಳೆದಂತೆ ಫಸಲು ಉದುರುವದರೊಂದಿಗೆ ಕೊಳೆರೋಗ ಹೆಚ್ಚಾಗಿದೆ ಎಂದು ಪುಷ್ಪಗಿರಿ ತಪ್ಪಲಿನ ವಿಜಯಕುಮಾರ್, ಲಕ್ಷ್ಮಣ, ಬೆಟ್ಟದಳ್ಳಿ ಶಿವಣ್ಣ ಮತ್ತಿತರರು ಮಾಹಿತಿ ನೀಡಿದ್ದಾರೆ.