ಕರ್ನಾಟಕದಲ್ಲಿ ಕೋವಿಡ್‍ಗೆ 73 ಬಲಿ

ಬೆಂಗಳೂರು, ಅ. 16: ರಾಜ್ಯದಲ್ಲಿ ಕೊರೊನಾ ವೈರಸ್ ವ್ಯಾಪಿಸುತ್ತಿದ್ದು, ಶುಕ್ರವಾರ 7,542 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 7,51,390ಕ್ಕೆ ಏರಿಕೆಯಾಗಿದೆ. ಕೊರೊನಾ ವೈರಸ್ ನಿಂದಾಗಿ ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 73 ಮಂದಿ ವೈರಸ್‍ಗೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 10,356ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಇಂದು ಬೆಂಗಳೂರು ನಗರವೊಂದರಲ್ಲೆ ಅತಿ ಹೆಚ್ಚು ಅಂದರೆ 3,441 ಹೊಸ ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ ಸಿಲಿಕಾನ್ ಸಿಟಿಯ ಸೋಂಕಿತರ ಸಂಖ್ಯೆ 3,00,634ಕ್ಕೆ ಏರಿಕೆಯಾಗಿದೆ. ನಗರದಲ್ಲಿ ಇಂದು 24 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ.

80 ಕೋಟಿ ಬಡ ಜನರಿಗೆ ಪಡಿತರ

ನವದೆಹಲಿ, ಅ. 16: ಕೋವಿಡ್ ಸಾಂಕ್ರಾಮಿಕ ರೋಗದ ನಡುವೆ ಕಳೆದ ಏಳೆಂಟು ತಿಂಗಳಲ್ಲಿ 80 ಕೋಟಿ ಬಡ ಜನರಿಗೆ ಉಚಿತವಾಗಿ ಪಡಿತರವನ್ನು ಪೂರೈಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ. ಆಹಾರ ಮತ್ತು ಕೃಷಿ ಸಂಸ್ಥೆ(ಎಫ್‍ಎಒ)ಯ 75ನೇ ವಾರ್ಷಿಕೋತ್ಸವದ ಅಂಗವಾಗಿ 75ರ ಮುಖಬೆಲೆಯ ನಾಣ್ಯವನ್ನು ಬಿಡುಗಡೆ ಮಾಡಿ ಮಾತನಾಡಿದ ಪ್ರಧಾನಿ, ಕೊರೊನಾ ವೈರಸ್ ಬಿಕ್ಕಟ್ಟಿನ ನಡುವೆ ಹಸಿವು ಮತ್ತು ಅಪೌಷ್ಟಿಕತೆ ಬಗ್ಗೆ ಜಗತ್ತಿನಾದ್ಯಂತ ವಿವಿಧ ಚರ್ಚೆಗಳು ನಡೆಯುತ್ತಿದ್ದು, ದೇಶದಲ್ಲಿ ರೂ. 1.5 ಲಕ್ಷ ಕೋಟಿ ಮೊತ್ತದ ಆಹಾರ ಧಾನ್ಯಗಳನ್ನು ಬಡಜನರಿಗೆ ವಿತರಿಸಲಾಗಿದೆ ಎಂದು ತಿಳಿಸಿದರು. ಅಪೌಷ್ಟಿಕತೆಯನ್ನು ನಿಭಾಯಿಸುವ ನಿಟ್ಟಿನಲ್ಲಿ ಪ್ರೋಟೀನ್, ಕಬ್ಬಿಣ ಮತ್ತು ಸತುವುಗಳಂತಹ ಪೌಷ್ಟಿಕ ಪದಾರ್ಥ ಹೆಚ್ಚಾಗಿರುವ ಆಹಾರ ಬೆಳೆಗಳನ್ನು ದೇಶದಲ್ಲಿ ಪ್ರೋತ್ಸಾಹಿಸಲಾಗುತ್ತಿದೆ. ವಿಶ್ವ ಆಹಾರ ಕಾರ್ಯಕ್ರಮಕ್ಕೆ ನೊಬೆಲ್ ಶಾಂತಿ ಪ್ರಶಸ್ತಿ ಸಂದಿದ್ದು, ದೊಡ್ಡ ಸಾಧನೆಯಾಗಿದೆ. ಅದರೊಂದಿಗಿನ ನಮ್ಮ ಚಾರಿತ್ರಿಕ ಒಡನಾಟ ಹಾಗೂ ಕೊಡುಗೆಗೆ ಸಾಕಷ್ಟು ಸಂತೋಷವಾಗುತ್ತಿದೆ ಎಂದರು.

ನವೆಂಬರ್‍ನಲ್ಲಿ ಕಾಲೇಜುಗಳು ಆರಂಭ !

ಬೆಂಗಳೂರು, ಅ. 16: ಪಿಜಿ, ಡಿಗ್ರಿ, ಪಿಯುಸಿ ಕಾಲೇಜುಗಳನ್ನು ನವೆಂಬರ್ 2-3ನೇ ವಾರದಲ್ಲಿ ಆರಂಭಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಕೇಂದ್ರದ ಮಾರ್ಗಸೂಚಿ ಮತ್ತು ಆರೋಗ್ಯ ಇಲಾಖೆ ಮಾರ್ಗಸೂಚಿ ಅನ್ವಯಿಸಿ ಕಾಲೇಜು ಪ್ರಾರಂಭಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಕಾಲೇಜು ಪ್ರಾರಂಭದ ಬಗ್ಗೆ ಡಿಸಿಎಂ ಅಶ್ವಥ್ ನಾರಾಯಣ ಸುಳಿವು ನೀಡಿದ್ದಾರೆ. ಶೀಘ್ರವೇ ಸಿಎಂ ಯಡಿಯೂರಪ್ಪ ಜೊತೆ ಸಭೆ ಮಾಡಿ ಕಾಲೇಜು ಪ್ರಾರಂಭದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳೋದಾಗಿ ಉನ್ನತ ಮೂಲಗಳು ತಿಳಿಸಿವೆ. ಸಿಎಂ ಒಪ್ಪಿದರೆ ಪ್ರಾರಂಭಿಕ ಹಂತವಾಗಿ ಕಾಲೇಜುಗಳನ್ನು ಪ್ರಾರಂಭಿಸಿ, ನಂತರ ಪರಿಸ್ಥಿತಿ ಅವಲೋಕನ ಮಾಡಿಕೊಂಡು ಪ್ರೌಢಶಾಲೆ ತೆರೆಯುವ ಬಗ್ಗೆ ನಿರ್ಧಾರ ಮಾಡುವ ಸಾಧ್ಯತೆ ಇದೆ. ಕಾಲೇಜು ಪ್ರಾರಂಭಿಸಬೇಕು ಎನ್ನುವ ಸರ್ಕಾರದ ನಿರ್ಧಾರಕ್ಕೆ ಕೆಲ ತಜ್ಞರು ಸುತರಾಂ ಒಪ್ಪುತ್ತಿಲ್ಲ. ಈ ವರ್ಷ ಕಾಲೇಜು ತೆರೆಯುವುದು ಬೇಡವೇ ಬೇಡ ಎಂದು ತಜ್ಞರು ಹೇಳಿದ್ರೆ, ಇನ್ನೂ ಕೆಲ ತಜ್ಞರು ಕಾಲೇಜು ಆರಂಭಿಸಿ ಪರವಾಗಿಲ್ಲ. ಆದ್ರೆ ಸರ್ಕಾರ ಕಠಿಣವಾಗಿ ಎಚ್ಚರಿಕೆಯಿಂದ ಮುಂಜಾಗೃತಾ ಕ್ರಮ ವಹಿಸಬೇಕು ಎಂದಿದ್ದಾರೆ.

ಶೌರ್ಯಚಕ್ರ ಪುರಸ್ಕೃತ ಬಲ್ವಿಂದರ್ ಹತ್ಯೆ

ಅಮೃತಸರ, ಅ. 16: ಭಯೋತ್ಪಾದನೆ ವಿರುದ್ಧ ನಿರಂತರವಾಗಿ ಹೋರಾಟ ನಡೆಸಿದ್ದ ಶೌರ್ಯಚಕ್ರ ಪುರಸ್ಕೃತ ಬಲ್ವಿಂದರ್ ಸಿಂಗ್ ಅವರ ಮೇಲೆ ದುಷ್ಕ್ರಮಿಗಳು ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದಾರೆ. ಬಲ್ವಿಂದರ್ ಸಿಂಗ್ (62) ಅವರನ್ನು ಅಪರಿಚಿತ ದುಷ್ಕರ್ಮಿಗಳು ಶುಕ್ರವಾರ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ತಾರನ್ ಭಿಖಿವಿಂಡ್ ಗ್ರಾಮದಲ್ಲಿ ತಮ್ಮ ಮನೆಗೆ ಹೊಂದಿಕೊಂಡಿರುವ ಕಚೇರಿಯಲ್ಲಿದ್ದ ಸಿಂಗ್ ಅವರ ಮೇಲೆ ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳು ಗುಂಡಿನ ಸುರಿಮಳೆ ಗರೆದಿದ್ದಾರೆ. ಈ ವೇಳೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಲ್ವಿಂದರ್ ಸಿಂಗ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಲ್ವಿಂದರ್ ಸಿಂಗ್ ಅವರು ಪಂಜಾಬ್ ರಾಜ್ಯದಲ್ಲಿ ಭಯೋತ್ಪಾದನೆ ವಿರುದ್ಧ ನಿರಂತರವಾಗಿ ಹೋರಾಟ ನಡೆಸುತ್ತಿದ್ದರು. ಈ ಹಿಂದೆ ಅನೇಕ ಬಾರಿ ಅವರ ಮೇಲೆ ಭಯೋತ್ಪಾದಕರು ಹಲ್ಲೆ ನಡೆಸಿದ್ದರು. ಈ ಕಾರಣಕ್ಕಾಗಿ ರಾಜ್ಯ ಸರ್ಕಾರ ಅವರಿಗೆ ಭದ್ರತೆ ಒದಗಿಸಿತ್ತು. ಆದರೆ ತಾರನ್ ಪೊಲೀಸರ ಶಿಫಾರಸ್ಸಿನ ಮೇರೆಗೆ ರಾಜ್ಯ ಸರ್ಕಾರ ಬಲ್ವಿಂದರ್ ಸಿಂಗ್ ಅವರಿಗೆ ನೀಡಿದ್ದ ಭದ್ರತೆಯನ್ನು ವರ್ಷದ ಹಿಂದೆ ಹಿಂತೆಗೆದುಕೊಂಡಿತ್ತು ಎಂದು ಅವರ ಸಹೋದರ ರಂಚಿತ್ ಹೇಳಿದ್ದಾರೆ. ಇದೇ ವೇಳೆ ನಮ್ಮ ಇಡೀ ಕುಟುಂಬ ಭಯೋತ್ಪಾದಕರ ಹಿಟ್‍ಲಿಸ್ಟ್‍ನಲ್ಲಿದೆ. ಹೀಗಾಗಿ ಸರ್ಕಾರ ತಮಗೆ ಹಾಗೂ ಕುಟುಂಬಕ್ಕೆ ಭದ್ರತೆ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಮಹಾರಾಷ್ಟ್ರ ಸಚಿವೆಗೆ ಜೈಲು ಶಿಕ್ಷೆ

ಮುಂಬೈ, ಅ. 16: ಪೊಲೀಸ್ ಪೇದೆ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಯಶೋಮತಿ ಠಾಕೂರ್ ಅವರಿಗೆ ನ್ಯಾಯಾಲಯ ಮೂರು ತಿಂಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಎಂಟು ವರ್ಷಗಳ ಹಿಂದೆ ಪೊಲೀಸ್ ಕಾನ್‍ಸ್ಟೇಬಲ್ ಒಬ್ಬರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಯಶೋಮತಿ ಠಾಕೂರ್ ಅವರಿಗೆ ಮೂರು ತಿಂಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ. ಕಾಂಗ್ರೆಸ್ ಶಾಸಕಿಯಾಗಿರುವ ಠಾಕೂರ್, ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್‍ಸಮಿತಿಯ ಕಾರ್ಯಾಧ್ಯಕ್ಷೆಯೂ ಆಗಿದ್ದಾರೆ. ಉದ್ಧವ್ ಠಾಕ್ರೆ ಅವರ ಮೈತ್ರಿ ಸರ್ಕಾರದಲ್ಲಿ ಅವರು ಪ್ರಸ್ತುತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆಯಾಗಿದ್ದು, ನ್ಯಾಯಾಲಯದ ತೀರ್ಪು ಇದೀಗ ಮೈತ್ರಿ ಸರ್ಕಾರಕ್ಕೆ ತೀವ್ರ ಮುಂಜುಗರವನ್ನುಂಟು ಮಾಡಿದೆ.

ಸಿಬಿಸಿಎಸ್ ಪದ್ಧತಿ ಉದ್ಯೋಗಕ್ಕೆ ಮಾರಕ

ಬೆಂಗಳೂರು, ಅ. 16: ಸಿಬಿಸಿಎಸ್ ಪದ್ಧತಿಯಿಂದಾಗಿ ಕನ್ನಡ ಭಾಷಾ ಬೋಧನೆಯ ಕಾರ್ಯಭಾರ ಕಡಿಮೆಯಾಗಿರುವ ಪರಿಣಾಮ ಕನ್ನಡ ಪ್ರಾಧ್ಯಾಪಕರ ಉದ್ಯೋಗಕ್ಕೆ ಮಾರಕವಾಗಿದ್ದು, ಪೂರಕ ಕ್ರಮಗಳನ್ನು ಕೈಗೊಳ್ಳುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಅವರು ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ ನಾರಾಯಣ ಅವರಲ್ಲಿ ಮನವಿ ಮಾಡಿದ್ದಾರೆ. ಯುಜಿಸಿ ಜಾರಿಗೆ ತರಲಾಗಿರುವ ಸಿಬಿಸಿಎಸ್ ಪದ್ಧತಿಯ ಅನುಷ್ಠಾನ ದಲ್ಲಾದ ಗೊಂದಲಗಳ ಬಗ್ಗೆ ಈಗಾಗಲೇ 2-3 ಬಾರಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಸಂಬಂಧಪಟ್ಟ ಎಲ್ಲಾ ವಿಶ್ವವಿದ್ಯಾಲಯಗಳಿಗೆ ಪತ್ರ ಬರೆಯಲಾಗಿದೆ. ಆದಾಗ್ಯೂ, ರಾಜ್ಯದ ಬಹುತೇಕ ವಿಶ್ವವಿದ್ಯಾಲಯಗಳು ಸಿಬಿಸಿಎಸ್ ಪದ್ಧತಿಯ ಮಾರ್ಗಸೂಚಿ ಮಾದರಿಗಳನ್ನೇ ಕಾನೂನು ಎಂಬ ರೀತಿಯಲ್ಲಿ ಭಾವಿಸಿಕೊಂಡು ಇಂಗ್ಲಿಷ್ ಭಾಷೆಯನ್ನು ಕಡ್ಡಾಯ ಗೊಳಿಸಿ ಕನ್ನಡ ಭಾಷಾ ವಿಷಯದ ಬೋಧನಾ ಕಾರ್ಯಭಾರವನ್ನು ಕಡಿತಗೊಳಿಸಿರುವುದರಿಂದ ಕನ್ನಡ ಪ್ರಾಧ್ಯಾಪಕರು ತೊಂದರೆಗೆ ಸಿಲುಕು ವಂತಾಗಿದೆ ಎಂದು ಉಪಮುಖ್ಯಮಂತ್ರಿಗಳಿಗೆ ಬರೆಯಲಾಗಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪ್ರವಾಹ ಪರಿಸ್ಥಿತಿ ಎದುರಿಸಲು ಸೂಚನೆ

ಬೆಂಗಳೂರು, ಅ. 16: ಪ್ರವಾಹದಿಂದ ಹಾನಿಗೊಳಗಾದ 12 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಗಳೊಂದಿಗೆ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿಗಳು ವೀಡಿಯೋ ಸಂವಾದ ನಡೆಸಿದರು. ರಾಜ್ಯದ ಪ್ರವಾಹ ಪೀಡಿತ ಜಿಲ್ಲೆಗಳಿಗೆ ರೂ. 85.49 ಕೋಟಿಗಳನ್ನು ತುರ್ತು ಪರಿಹಾರಕ್ಕಾಗಿ ಈಗಾಗಲೇ ಬಿಡುಗಡೆ ಮಾಡಲಾಗಿದ್ದು, ರಕ್ಷಣಾ ಕಾರ್ಯಗಳಿಗೆ ಅಗತ್ಯವಿರುವ ಸಂಪನ್ಮೂಲಗಳನ್ನು ಈಗಾಗಲೇ ಜಿಲ್ಲಾಡಳಿತಗಳಿಗೆ ಒದಗಿಸ ಲಾಗಿದೆ. ಪ್ರವಾಹ ಪರಿಸ್ಥಿತಿ ಸಮರ್ಥವಾಗಿ ಎದುರಿಸಲು ಸಮರೋಪಾ ದಿಯಲ್ಲಿ ಸನ್ನದ್ಧರಾಗುವಂತೆ ಈ ಸಂದರ್ಭ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿಗಳು ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ, ವಾಡಿಕೆ ಮಳೆಗಿಂತ ಹೆಚ್ಚು ಮಳೆಯಾಗಿದ್ದು, ತಮಗೆ ವಾಸ್ತವ ಸ್ಥಿತಿಯ ಚಿತ್ರಣ ನೀಡಿ ಎಂದು ಸೂಚಿಸಿದರು.