ಗೋಣಿಕೊಪ್ಪಲು, ಅ. 17: ಮಡಿಕೇರಿ ದಸರಾ ಉತ್ಸವದಷ್ಟೇ ವಿಜೃಂಭಣೆಯಿಂದ ಶ್ರೀ ಕಾವೇರಿ ದಸರಾ ಸಮಿತಿ ವತಿಯಿಂದ ಆಚರಿಸಲ್ಪಡುತ್ತಿದ್ದ ಗೋಣಿಕೊಪ್ಪಲು ದಸರಾ ಉತ್ಸವವೂ ಈ ಬಾರಿ ಸರಳ ರೀತಿಯಲ್ಲಿ ನಡೆಯುತ್ತಿದೆ. ಕೊರೊನಾ ಪರಿಸ್ಥಿತಿಯಿಂದಾಗಿ ಕೇವಲ ಸಂಪ್ರದಾಯಕ್ಕೆ ಮಾತ್ರ ಉತ್ಸವ ಸೀಮಿತಗೊಂಡಿದೆ. ಇಂದು ಗೋಣಿಕೊಪ್ಪಲು ದಸರಾ ಉತ್ಸವಕ್ಕೆ ಬೆಳಿಗ್ಗೆ ಚಾಲನೆ ನೀಡಲಾಗಿದ್ದು, ಈ ಬಾರಿಯ ಕಾರ್ಯಕ್ರಮ ಕೇವಲ ಪೂಜಾ-ವಿಧಿ-ವಿಧಾನದೊಂದಿಗೆ ಮಾತ್ರ ಜರುಗಲಿದೆ.ಇಂದು ಬೆಳಿಗ್ಗೆ ಗೋಣಿಕೊಪ್ಪಲು ವಿನ ಸ್ವಾತಂತ್ರ್ಯ ಹೋರಾಟಗಾರರ ಭವನದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ದಸರಾ ಸಮಿತಿ ಅಧ್ಯಕ್ಷ ರಾಮಕೃಷ್ಣ ಅಧ್ಯಕ್ಷತೆಯಲ್ಲಿ ಕ್ಷೇತ್ರದ ಶಾಸಕರಾದ ಕೆ.ಜಿ. ಬೋಪಯ್ಯ ಅವರು ದೇವಿಗೆ ಮಾಲಾರ್ಪಣೆ ಮಾಡಿ ಉತ್ಸವವನ್ನು ವಿಧ್ಯುಕ್ತವಾಗಿ ಉದ್ಘಾಟಿಸಿದರು. ವಿಗ್ರಹ ದಾನಿಗಳಾದ ಕೇಶವ್ ಕಾಮತ್

(ಮೊದಲ ಪುಟದಿಂದ) ಕುಟುಂಬದವರು ಈ ಸಂದರ್ಭ ಹಾಜರಿದ್ದರು. ಬೆಳಗ್ಗೆ 7 ಗಂಟೆಯಿಂದ ಹಲವು ಪೂಜಾ ಕಾರ್ಯಗಳು ಆರಂಭವಾದವು. ಗಣಪತಿ ಹೋಮ ನಡೆಯಿತು. ಚಾಮುಂಡೇಶ್ವರಿ ಪ್ರತಿಷ್ಠಾಪನೆ 8 ಗಂಟೆ ಸುಮಾರಿಗೆ ನಡೆಸಲಾಯಿತು.

ಸರಳ ಹಾಗೂ ಸಾಂಪ್ರದಾಯಿಕ ವಿಧಿ-ವಿಧಾನ, ಪೂಜಾ ಕೈಂಕರ್ಯಗಳಲ್ಲಿ ಶಾಸಕ ಕೆ. ಜಿ. ಬೋಪಯ್ಯ ಸೇರಿದಂತೆ ಸುಮಾರು 50 ಜನರು ಮಾತ್ರ ಹಾಜರಿದ್ದರು.

ಈ ಸಂದರ್ಭ ಕಾವೇರಿ ದಸರಾ ಸಮಿತಿ ಅಧ್ಯಕ್ಷ ರಾಮಕೃಷ್ಣ, ಪ್ರ. ಕಾರ್ಯದರ್ಶಿ ಜಿಮ್ಮ ಸುಬ್ಬಯ್ಯ, ಪ್ರಮುಖರಾದ ಕುಲ್ಲಚಂಡ ಪ್ರಮೋದ್ ಗಣಪತಿ, ಗಿರೀಶ್ ಗಣಪತಿ, ಪೂಜಾ ಸಮಿತಿ ಪ್ರಮುಖರಾದ ಡಾ. ಕಾಳಿಮಾಡ ಶಿವಪ್ಪ, ಡಾ. ಕೆ. ಎನ್. ಚಂದ್ರಶೇಖರ್, ರಾಮಾಚಾರ್, ಸುಮಿ ಸುಬ್ಬಯ್ಯ ಪಾಲ್ಗೊಂಡಿದ್ದರು.

ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಕಾವೇರಿ ತೀರ್ಥೋದ್ಭವ ಸಂದರ್ಭ ಚಾಮುಂಡೇಶ್ವರಿ ದೇವಿ ಪ್ರತಿಷ್ಠಾಪನೆ ಕೂಡ ನಡೆದಿದೆ. ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ಯಾವುದು ನಡೆಸುವುದಿಲ್ಲ. ಪೂಜಾ ಕಾರ್ಯ ಮಾತ್ರ ನಡೆಯಲಿದೆ. ಕೋವಿಡ್ ಹರಡುವಿಕೆ ನಿಯಂತ್ರಿಸಲು ಜನರ ಸಹಕಾರ ಅಗತ್ಯವಿದೆ ಎಂದರು.

ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಮಾರ್ಗಸೂಚಿಯಂತೆ ಚಾಲನೆ ನೀಡಲಾಗಿದೆ. ನವರಾತ್ರಿ ಪೂಜೆ ನಂತರ ವಿಜಯದಶಮಿಯಂದು ತೀರಾ ಸರಳವಾಗಿ ವಿಸರ್ಜನೆ ಕಾರ್ಯಕ್ರಮ ನಡೆಸಲಾಗುವುದು. ಅಲ್ಲಿವರೆಗೂ ಪೂಜೆಗಳು ಮಾತ್ರ ನಡೆಯಲಿವೆ ಎಂದು ಕಾವೇರಿ ದಸರಾ ಸಮಿತಿ ಅಧ್ಯಕ್ಷ ರಾಮಕೃಷ್ಣ ತಿಳಿಸಿದರು.

ಪೂಜೆಗಷ್ಟೆ ಸೀಮಿತ: ಕೊರೊನಾ ಮುಂಜಾಗೃತೆಯಾಗಿ ಪೂಜಾ ಕಾರ್ಯಕ್ರಮಗಳಿಗಷ್ಟೆ ನಿರ್ಧರಿಸಿ ದಸರಾ ಸೀಮಿತಗೊಳಿಸಲಾಗಿದೆ. ಇದರಂತೆ 9 ದಿನ ನಿತ್ಯ ಬೆಳಗ್ಗೆ ಮತ್ತು ರಾತ್ರಿ 7 ಗಂಟೆಗೆ ಚಾಮುಂಡೇಶ್ವರಿಗೆ ಪೂಜೆ ನಡೆಯಲಿದೆ. ಬೆಳಗ್ಗಿನ ಪೂಜೆಯನ್ನು ಗೋಣಿಕೊಪ್ಪ ದಸರಾ ಆಚರಣೆಯ ಮಾತೃಸಂಸ್ಥೆ ಕಾವೇರಿ ದಸರಾ ಸಮಿತಿ ನಡೆಸಲಿದೆ. ರಾತ್ರಿಯ ಪೂಜೆಯನ್ನು ಮಂಟಪ ಸಮಿತಿಗಳು ಆಚರಿಸಲಿವೆ. ವಿಜಯದಶಮಿ ಆಚರಣೆಯ ಅ. 27 ರಂದು ಚಾಮುಂಡೇಶ್ವರಿ ದೇವಿಯನ್ನು ಸೀಗೆತೋಡು ಹರಿಯುವ ನೀರಿನಲ್ಲಿ ವಿಸರ್ಜಿಸಲಾಗುತ್ತದೆ.

ದೇವಿಯ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಸಿ.ಕೆ. ಬೋಪಣ್ಣ, ತಾಲೂಕು ಪಂಚಾಯಿತಿ ಸದಸ್ಯರಾದ ಜಯಪೂವಯ್ಯ, ದಸರಾ ಸಮಿತಿಯ ಪದಾಧಿಕಾರಿಗಳಾದ ಕುಲ್ಲಚಂಡ ಬೋಪಣ್ಣ, ಪ್ರ. ಕಾರ್ಯದರ್ಶಿ ಜಪ್ಪು ಸುಬ್ಬಯ್ಯ, ಕುಲ್ಲಚಂಡ ಚಿಣ್ಣಪ್ಪ, ಮಲ್ಚಿರ ಗಾಂಧಿ ದೇವಯ್ಯ, ಡಾ. ಚಂದ್ರಶೇಖರ್, ಡಾ. ಶಿವಪ್ಪ, ರಮೇಶ್, ಗ್ರಾಮ ಪಂಚಾಯಿತಿ ಪ್ರಬಾರ ಅಧ್ಯಕ್ಷೆ ಕಾವ್ಯ, ಸದಸ್ಯರಾದ ರಾಜಶೇಖರ, ಪ್ರಭಾವತಿ ಮಹೇಶ್, ಸುರೇಶ್ ರೈ, ಕುಲ್ಲಚಂಡ ಪ್ರಮೋದ್ ಗಣಪತಿ, ಸಾವಿತ್ರಿ, ಜೆ.ಕೆ. ಸೋಮಣ್ಣ, ಮುರುಗ, ಯಾಶ್ಮಿನ್, ಎಂ. ಮಂಜುಳ, ರತಿ ಅಚ್ಚಪ್ಪ, ಪಿಡಿಒ ಶ್ರೀನಿವಾಸ್, ಪಂಚಾಯಿತಿ ಸಿಬ್ಬಂದಿಗಳಾದ ಸತೀಶ್, ಸುಬ್ರಮಣಿ, ನವೀನ್, ಮುಂತಾದವರು ಹಾಜರಿದ್ದರು.

-ಸುದ್ದಿಪುತ್ರ, ಜಗದೀಶ್, ದಿನೇಶ್