ಮಡಿಕೇರಿ, ಅ. 16: ದೇಶದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರಕಾರಗಳು ಇದ್ದು, ಜನಪರ ಕಾರ್ಯಕ್ರಮಗಳನ್ನು ಮರೆತಿವೆ ಎಂದು ಟೀಕಿಸಿದ ರಾಜ್ಯ ಜೆಡಿಎಸ್ ರೈತ ಘಟಕ ಅಧ್ಯಕ್ಷೆ ಚೈತ್ರಾಗೌಡ ಅವರು, ಬರುವ ತಿಂಗಳು ಎಲ್ಲೆಡೆ ಪ್ರತಿಭಟನೆ ಮೂಲಕ ಜನಾಂದೋಲನ ಆಯೋಜಿಸಲಾಗುವದು ಎಂದು ನುಡಿದರು. ಇಲ್ಲಿನ ಜೆಡಿಎಸ್ ಕಚೇರಿಗೆ ಭೇಟಿ ನೀಡಿದ ಅವರು, ಸುದ್ದಿಗಾರರೊಂದಿಗೆ ಮಾತನಾಡುತ್ತ, ಯಾವದೇ ಜನಪರ ಕೆಲಸಗಳ ಬಗ್ಗೆ ಬಿಜೆಪಿ ಸರಕಾರಗಳು ಕಾಳಜಿ ಹೊಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೊಡಗಿನಲ್ಲಿ ಇಬ್ಬರು ಬಿಜೆಪಿ ಶಾಸಕರು ಹಾಗೂ ಮೇಲ್ಮನೆ ಸದಸ್ಯರು ಕೊಡವ ಹೆರಿಟೇಜ್ ನಿರ್ಮಾಣ ಕಾಮಗಾರಿ ಸಹಿತ ಯಾವದೇ ಕೆಲಸಗಳನ್ನು ಪೂರ್ಣಗೊಳಿಸಲು ಆಸಕ್ತಿ ಹೊಂದಿಲ್ಲವೆಂದು ಟೀಕಿಸಿದರು. ಜಿಲ್ಲೆಯ ಯಾವ ರಸ್ತೆಗಳು ಜನತೆ ಸಂಚರಿಸುವ ಸ್ಥಿತಿಯಲ್ಲಿಲ್ಲ; ಹಿಂದೆ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ. ಕುಮಾರಸ್ವಾಮಿ ರೈತರು ಮತ್ತು ಬಡವರ ಮೇಲಿನ ಕಾಳಜಿಯಿಂದ ಜಾರಿಗೊಳಿಸಿದ್ದ ಯಾವ ಯೋಜನೆಗಳು ಪೂರ್ಣಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾಧ್ಯಕ್ಷ ಹೇಳಿಕೆ : ಸುದ್ದಿಗಾರರೊಂದಿಗೆ ಈ ವೇಳೆ ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್ ಅವರು, ರಾಜ್ಯ ವಸತಿ ಸಚಿವರು ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ 10 ಸಾವಿರ ಮನೆಗಳನ್ನು ನಿರ್ಮಿಸುವ ಘೋಷಣೆ ಮಾಡಿದ್ದಾರೆ. ಆದರೆ, ಹಿಂದಿನ ಸರಕಾರ ನಿರ್ಮಿಸಿರುವ ವಸತಿಗಳು ಇನ್ನೂ ಪೂರ್ಣಗೊಂಡಿಲ್ಲ ಎಂದು ಟೀಕಿಸಿದರು. ಹೀಗಾಗಿ ನವೆಂಬರ್‍ನಲ್ಲಿ ಇಲ್ಲಿನ ಗಾಂಧಿ ಮಂಟಪ ಎದುರು 10 ದಿನ ಸತ್ಯಾಗ್ರಹ ಆಯೋಜಿಸಲಾಗುವದು ಎಂದರು.

ಈ ದಿಸೆಯಲ್ಲಿ ರಾಜ್ಯ ನಾಯಕರ ಬೆಂಬಲದೊಂದಿಗೆ ನವೆಂಬರ್‍ನಲ್ಲಿ ಆಂದೋಲನ ರೂಪಿಸುವದರೊಂದಿಗೆ, ಅಗತ್ಯ ಬಿದ್ದರೆ ಜಿಲ್ಲೆಯ ಜನತೆಯ ಸಮಸ್ಯೆ ಬಗ್ಗೆ ಗಮನ ಸೆಳೆಯಲು ವಿಧಾನ ಸೌಧ ಚಲೋ ಹಮ್ಮಿಕೊಳ್ಳುವದಾಗಿ ಘೋಷಿಸಿದರು. ಈ ಬಗ್ಗೆ ಸದ್ಯದಲ್ಲೇ ಚರ್ಚಿಸಿ ದಿನಾಂಕ ನಿರ್ಧಾರವನ್ನು ಪ್ರಕಟಿಸಲಾಗುವದು ಎಂದರು. ಗೋಷ್ಠಿಯಲ್ಲಿ ಜೆಡಿಎಸ್ ಪದಾಧಿಕಾರಿಗಳಾದ ಲೀಲಾ ಶೇಷಮ್ಮ, ಗಣೇಶ್, ಸುಖೇಶ್, ಸುನಿಲ್, ಖಲೀಲ್, ರವಿಕುಮಾರ್ ಮತ್ತಿತರರು ಹಾಜರಿದ್ದರು.