ಮುಳ್ಳೂರು, ಅ. 16: ಶನಿವಾರಸಂತೆ ಪೊಲೀಸ್ ಠಾಣೆ ವ್ಯಾಪ್ತಿಯ ಜನ ಸಂಪರ್ಕ ಸಭೆ ಪಟ್ಟಣದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯಿತು. ಸಭೆಯಲ್ಲಿ ಸೋಮವಾರಪೇಟೆ ವೃತ್ತ ನಿರೀಕ್ಷಕ ಮಹೇಶ್ ಭಾಗವಹಿಸಿದ್ದ ನಾಗರಿಕರಿಗೆ ಕಾನೂನು-ನಿಯಮ ಮುಂತಾದ ಆಗುಹೋಗುಗಳ ಬಗ್ಗೆ ಮಾಹಿತಿ ನೀಡಿದರು.
ಪಟ್ಟಣದ ಕೆಆರ್‍ಸಿ ವೃತ್ತ, ಮಧ್ಯಪೇಟೆ, ಯೂನಿಯನ್ ಬ್ಯಾಂಕ್ ಮುಂತಾದ ಕಡೆಯಲ್ಲಿ ಟ್ರಾಫಿಕ್ ಸಮಸ್ಯೆಯಾಗುತ್ತಿದ್ದು, ಮುಖ್ಯ ರಸ್ತೆಯ ಎರಡೂ ಬದಿಯಲ್ಲಿ ಅಡ್ಡಾದಿಡ್ಡಿ ವಾಹನಗಳನ್ನು ನಿಲ್ಲಿಸುವುದ್ದರಿಂದ ಸಾರ್ವಜನಿಕರಿಗೆ ತುಂಬಾ ಸಮಸ್ಯೆಯಾಗುತ್ತಿರುವುದಾಗಿ ನಾಗರಿಕರು ಸಭೆಯಲ್ಲಿ ದೂರು ನೀಡಿದರು. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಫಾರ್ವಡ್ ಮೆಸೇಜ್ ಹರಿದಾಡುತ್ತಿದ್ದು ಈ ಬಗ್ಗೆ ಪೊಲೀಸರು ಕ್ರಮಕೈಗೊಳ್ಳಬೇಕಾಗಿದೆ ಎಂದು ತಾ.ಪಂ. ಸದಸ್ಯ ಅನಂತ್‍ಕುಮಾರ್ ಗಮನಸೆಳೆದರು.
ಶಾಲಾ-ಕಾಲೇಜು ಮಕ್ಕಳಿಗೆ ಪೋಕ್ಸೋ ಕಾಯಿದೆ ಬಗ್ಗೆ ಮಕ್ಕಳ ಹಕ್ಕು ರಕ್ಷಣೆ ಬಗ್ಗೆ ಪೊಲೀಸರು ಅರಿವು ಮೂಡಿಸುವುದರ ಜೊತೆಯಲ್ಲಿ ಸಾರ್ವಜನಿಕರಿಗೂ ಅರಿವು ಮೂಡಿಸುವುದರಿಂದ ಪೋಕ್ಸೋ ಕೃತ್ಯಗಳು ನಡೆಯುವುದಿಲ್ಲ ಎಂದು ಶಿಕ್ಷಕ ಕೆ.ಪಿ. ಜಯಕುಮಾರ್ ಸಭೆಯಲ್ಲಿ ಸಲಹೆ ನೀಡಿದರು. ಪಟ್ಟಣದಲ್ಲಿ ಹೆಚ್ಚಿನ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದೆ ವಾಹನ ಓಡಿಸುತ್ತಿರುವ ಬಗೆ ಸಭೆಯಲ್ಲಿ ನಾಗರಿಕರಿಂದ ದೂರು ಕೇಳಿ ಬಂದಿತು. ನಾಗರಿಕರ ದೂರುಗಳಿಗೆ ಉತ್ತರಿಸಿದ ಸಿಐ ಮಹೇಶ್, ಪಟ್ಟಣದ ಟ್ರಾಫಿಕ್ ಸಮಸ್ಯೆಗಳನ್ನು ಸರಿಪಡಿಸಲು ಕ್ರಮಕೈಗೊಳ್ಳಲಾಗುವುದು. ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಫಾರ್ವಡ್ ಮೆಸೇಜ್ ಹರಿಬಿಡುತ್ತಿರುವ ಪ್ರಕರಣ ಸೇರಿದಂತೆ ಮಕ್ಕಳ ಮೇಲಿನ ದೌರ್ಜನ್ಯ, ಲೈಂಗಿಕ ಕಿರುಕುಳ ಪ್ರಕರಣ ಕಂಡು ಬಂದ ತಕ್ಷಣ ಸಾರ್ವಜನಿಕರು ಜಾಗೃತ ಗೊಂಡು ಪೊಲೀಸ್ ಠಾಣೆಯಲ್ಲಿ ಕೃತ್ಯ ಕುರಿತು ದೂರು ನೀಡಿದರೆ ಪೊಲೀಸರು ತಕ್ಷಣ ಕ್ರಮ ಕೈಗೊಳ್ಳುತ್ತಾರೆ ಎಂದು ತಿಳಿಸಿದರು. ಕೋವಿಡ್ ಸೋಂಕು ದಿನೇದಿನೇ ಹೆಚ್ಚಾಗುತ್ತಿದ್ದು ಸಾರ್ವಜನಿಕರು ಜಾಗೃತಗೊಳ್ಳಬೇಕು, ಮನೆಯಿಂದ ಹೊರಗಡೆ ಬರುವಾಗ ಪ್ರತಿಯೊಬ್ಬರೂ ಕಡ್ಡಾಯವಾಗಿ ಫೇಸ್ ಮಾಸ್ಕ್ ಧರಿಸಬೇಕು. ಮನೆಗೆ ಬಂದ ಕೂಡಲೇ ಬಿಸಿ ನೀರಿನಿಂದ ಸ್ನಾನ ಮಾಡಿಕೊಂಡು ಮನೆಯಲ್ಲಿ ಮಕ್ಕಳಿದ್ದರೆ ಅವರಿಂದ ಸ್ವಲ್ಪ ಹೊತ್ತು ದೂರ ಇರುವ ಮೂಲಕ ಕೊರೊನಾ ಹರಡುವುದನ್ನು ತಡೆಗಟ್ಟುವಂತೆ ಮಹೇಶ್ ಸಲಹೆ ನೀಡಿದರು,
ಪೊಲೀಸ್ ಜನ ಸಂಪರ್ಕ ಸಭೆಯಲ್ಲಿ ಠಾಣಾಧಿಕಾರಿ ದೇವರಾಜ್, ಶನಿವಾರಸಂತೆ ಮಾಜಿ ಗ್ರಾ.ಪಂ. ಅಧ್ಯಕ್ಷ ಮಹಮದ್ ಗೌಸ್, ದುಂಡಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ಸಿ.ಜೆ. ಗಿರೀಶ್, ವರ್ತಕರ ಸಂಘದ ಅಧ್ಯಕ್ಷ ಸರ್ದಾರ್ ಆಹಮದ್, ವಕೀಲ ಎಸ್.ವಿ. ಜಗದೀಶ್ ಪ್ರಮುಖರಾದ ಹೆಚ್.ಬಿ. ಜಯಮ್ಮ, ಹೆಚ್.ಆರ್. ಹರೀಶ್‍ಕುಮಾರ್, ಯತೀಶ್ ಮುಂತಾದವರು ಭಾಗವಹಿಸಿದ್ದರು.
- ಭಾಸ್ಕರ್ ಮುಳ್ಳೂರು