ಕಣಿವೆ, ಅ. 17: ಕಾವೇರಿ ನದಿ ದಂಡೆಯ ಕುಶಾಲನಗರದ ಮಾರುಕಟ್ಟೆಯ ಆವರಣದಲ್ಲಿ ಹತ್ತಕ್ಕು ಹೆಚ್ಚು ಕುಟುಂಬಗಳು ಸಮಸ್ಯೆಗಳ ಕೊಳಚೆಯಲ್ಲಿ ವಾಸವಿದ್ದು ಸ್ಥಳೀಯ ಪಂಚಾಯಿತಿ ಈ ನಿರ್ಗತಿಕ ಮಂದಿಯನ್ನು ಇಲ್ಲಿಂದ ಬದಲೀ ಸ್ಥಳಕ್ಕೆ ತುರ್ತಾಗಿ ಸ್ಥಳಾಂತರಿಸ ಬೇಕಿದೆ. ಇಲ್ಲಿ ಹಳೆಯ ವಸ್ತುಗಳನ್ನು ತಂದು ಹಾಸು ಹೊದಿಕೆಗಳಾಗಿ ಮಾಡಿಕೊಂಡು ವಾಸವಿರುವ ಈ ಮಂದಿಯ ಸೂರು ಮಳೆಗೆ ಸೋರುತ್ತಿದೆ. ಇನ್ನು ಸೂರಿನ ಮೇಲೆ ಹಾಯ್ದು ಹೋಗಿರುವ ಹೈಟೆನ್ಷನ್ ವಿದ್ಯುತ್ ಮಾರ್ಗದ ನೂರಾರು ಲೇನ್‍ಗಳು ಈ ಮಂದಿಯ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿವೆ. ಕೊಳಚೆ ತುಂಬಿದ ಕೊಳಕು ಪ್ರದೇಶದಲ್ಲಿ ಇಲ್ಲಿ ವಾಸವಿರುವ ಹತ್ತಾರು ಕುಟುಂಬಗಳ ಅಷ್ಟೂ ಜನರು, ಮಹಿಳೆಯರು ಮಕ್ಕಳೆನ್ನದೆ ರಸ್ತೆ ಬದಿಯಲ್ಲಿ ಚಿಂದಿ ಆಯುವ ಮತ್ತು ಕೆಲವು ಮನೆಗಳ ಮನೆಗೆಲಸ ಮಾಡಿಕೊಂಡು ಜೀವಿಸುತ್ತಿದ್ದಾರೆ. ಇಲ್ಲಿನ ಕೊಳಚೆ ಪ್ರದೇಶದ ಈ ಮಂದಿಗೆ ಮಾರಕವಾದ ರೋಗ- ರುಜಿನಗಳು ಬಾಧಿಸಿದರೆ ಅದು ಇತರರಿಗೂ ಬಾಧಿಸುವ ಅಪಾಯವೂ ಇರುವುದರಿಂದ, ಕೂಡಲೇ ಪಂಚಾಯತಿ ಅಧಿಕಾರಿಗಳ ಈ ಕೊಳಚೆ ನಿವಾಸಿಗಳಿಗೆ ಕನಿಷ್ಟ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕಿದೆ. ಅದಕ್ಕೂ ಮಿಗಿಲಾಗಿ ಇಲ್ಲಿ ಮುಖ್ಯವಾಗಿ ಶುಚಿತ್ವವನ್ನು ನಿರ್ವಹಿಸಬೇಕಿದೆ.

ವಾಸವಿರುವ ಈ ಹತ್ತು ನಿರ್ಗತಿಕ ಕುಟುಂಬಗಳಲ್ಲಿ ಓದು - ಬರಹ ಕಲಿಯುತ್ತಿರುವ ಪ್ರಾಥಮಿಕ ಶಾಲಾ ಹಂತದ ಪುಟ್ಟ ಮಕ್ಕಳಿದ್ದಾರೆ. ಭವಿಷ್ಯದಲ್ಲಿ ಈ ಮಕ್ಕಳನ್ನು ಉತ್ತಮ ಪ್ರಜೆಗಳಾಗಿ ರೂಪುಗೊಳಿಸಬೇಕಾದ ಕಾರಣ, ಪಂಚಾಯತಿ ಆಡಳಿತ ಕೂಡಲೇ ಮಾನವೀಯ ನೆಲೆಯಲ್ಲಿ ತಾತ್ಕಾಲಿಕವಾಗಿಯಾದರೂ ಬೇರೆಡೆಗೆ ಕುಟುಂಬಗಳನ್ನು ಸ್ಥಳಾಂತರಿಸಲು ಮುಂದಾಗಬೇಕಿದೆ.

ಕೂಡಿಗೆ - ಕುಶಾಲನಗರ ಹೆದ್ದಾರಿ ವಿಸ್ತರಣೆಗೂ ಮುನ್ನಾ ಮಾರುಕಟ್ಟೆಯ ರಸ್ತೆಯ ಬದಿಯಲ್ಲಿ ಕಳೆದ ಹತ್ತಾರು ವರ್ಷಗಳಿಂದ ಗುಡಿಸಲು ಹಾಕಿಕೊಂಡು ವಾಸವಿದ್ದ ಈ ಮಂದಿ ಹೆದ್ದಾರಿ ವಿಸ್ತರಣೆ ಸಂದರ್ಭದಲ್ಲಿ ಅಂದರೆ ನಾಲ್ಕು ವರ್ಷಗಳ ಹಿಂದೆ ಮಾರುಕಟ್ಟೆ ಯೊಳಗಿನ ಕೊಳಚೆಯಲ್ಲಿ ಗುಡಿಸಲು ಹಾಕಿಕೊಂಡರು. ಆದರೆ ಚಿಂದಿ ಆಯ್ದು ಬದುಕು ಸವೆಸುವ ಈ ನಿರ್ಗತಿಕ ಮಂದಿಯ ಭವಿಷ್ಯದ ಬಗ್ಗೆ ಯಾರು ಕೂಡ ಧ್ವನಿಯಾಗಲೇ ಇಲ್ಲ.

ಇಲ್ಲಿ ವಾಸವಿರುವ ಮಂದಿಗೆ ಮತದಾನದ ಚೀಟಿಗಳನ್ನು ನೀಡಲಾಗಿದೆ. ಉಚಿತ ಪಡಿತರ ನೀಡುವ ಕಾರ್ಡ್‍ಗಳನ್ನು ನೀಡಲಾಗಿದೆ. ಈ ಸಂದರ್ಭ ಪತ್ರಿಕೆ ಯೊಂದಿಗೆ ದೂರಿಕೊಂಡ ಇಲ್ಲಿನ ನಿರ್ಗತಿಕ ಚಿಂದಿ ಆಯುವ ಗೌರಮ್ಮ, ಕಾವೇರಿ ಮತ್ತಿತರರು, ಕೊಳಚೆಯಲ್ಲಿ ವಾಸವಿರುವ ನಮಗೆ ನದಿಯಂಚಿನ ಚಿತಾಗಾರದಲ್ಲಿ ಬೇಯುವ ಹೆಣಗಳ ವಾಸನೆ ನಮಗೆ ಅನ್ನಾಹಾರ ಸೇವಿಸದಂತೆ ಮಾಡುತ್ತಿದೆ. ಕಳೆದ ಮೂರು ವರ್ಷಗಳಿಂದ ಮಳೆಗಾಲದಲ್ಲಿ ಕಾವೇರಿ ಬರುವ ನದಿ ಪ್ರವಾಹ ಗುಡಿಸಲನ್ನೆಲ್ಲಾ ಹೊತ್ತು ಸಾಗಿದೆ. ನದಿ ನೀರು ಇಳಿದ ಬಳಿಕ ಮತ್ತೆ ನಾವು ಇಲ್ಲಿಯೇ ಬಂದು ಮತ್ತದೇ ಕಿತ್ತು ಹೋದ ಗುಡಿಸಲು ಹಾಕೊಂಡು ವಾಸವಿದ್ದೇವೆ. ಶೌಚಾಲಯ ಇಲ್ಲದ ಕಾರಣ ಹೊಳೆ ಬದಿಯನ್ನು ಅವಲಂಬಿಸಿದ್ದೇವೆ ಎನ್ನುತ್ತಾರೆ.

ಪಂಚಾಯಿತಿ ವತಿಯಿಂದ ಇಂತಹ ನಿರ್ಗತಿಕ ಮಂದಿಯನ್ನು ಗುರುತಿಸಿ ಅವರಿಗೆ ಸರ್ಕಾರದಿಂದ ದೊರಕಬೇಕಾದ ಮೂಲ ಸೌಲಭ್ಯಗಳನ್ನು ಅತೀ ತುರ್ತಾಗಿ ಒದಗಿಸುವತ್ತ ಗಮನ ಹರಿಸಬೇಕಿದೆ.

- ಮೂರ್ತಿ