ಕಣಿವೆ, ಅ. 17: ಕಳೆದ ಮೂರ್ನಾಲ್ಕು ದಿನಗಳಿಂದ ಸುರಿದ ಮಳೆ ಹಾಗೂ ಮೋಡ ಕವಿದ ವಾತಾವರಣದಿಂದಾಗಿ ಕೂಡಿಗೆ, ಕಣಿವೆ, ಹೆಬ್ಬಾಲೆ, ಕೊಪ್ಪಾ ಮೊದಲಾದ ಕಡೆಗಳಲ್ಲಿ ರೈತರು ಅಪಾರ ಪ್ರಮಾಣದಲ್ಲಿ ಬೆಳೆದಿದ್ದ ಜೋಳದ ಫಸಲು ಹಾಳಾಗುತ್ತಿದೆ.

ರೈತರು ತಮ್ಮ ಹೊಲದಲ್ಲಿ ಬೆಳೆದಿದ್ದ ಜೋಳದ ತೆನೆಗಳನ್ನು ಕಟಾವು ಮಾಡಿ ಅದನ್ನು ಹಲ್ಲಿಂಗ್ ಮಾಡಿಸಲು ಹೊಲದಲ್ಲಿ ಶೇಖರಿಸಿಟ್ಟ ಸಂದರ್ಭದಲ್ಲಿ ಮಳೆ ತಂದಿಟ್ಟ ಎಡವಟ್ಟಿನಿಂದ ಜೋಳದ ತೆನೆಗಳ ರಾಶಿ ಮಳೆಗೆ ನೆನೆದು ಹಾಳಾಗುತ್ತಿದೆ. ಆದರೂ ಈಗಾಗಲೇ ಹಲ್ಲಿಂಗ್ ಮಾಡಿಸಿರುವ ಕೆಲವು ರೈತರು ಜೋಳವನ್ನು ಒಣಗಿಸಲು ಹರಸಾಹಸ ಮಾಡುತ್ತಿರುವುದು ಅಲ್ಲಲ್ಲಿ ಕಂಡುಬರುತ್ತಿದೆ. ಜೋಳದ ಫಸಲಿಗೆ ಈ ಬಾರಿ ಮಾರುಕಟ್ಟೆಯಲ್ಲಿ ದರ ಕುಸಿತವಾಗಿದ್ದು ಒಂದು ಕ್ವಿಂಟಾಲ್ ಹಸಿ ಜೋಳಕ್ಕೆ ರೂ. 800 ಇದೆ. ಅದೇ ಒಣಗಿದ ಜೋಳಕ್ಕೆ ರೂ. 1100 ಇದೆ. ಕಳೆದ ವರ್ಷದಲ್ಲಿ ಇದೇ ಜೋಳದ ಫಸಲಿಗೆ ಒಣ ಜೋಳಕ್ಕೆ 1200 ರೂ ಇದ್ದರೆ, ಒಣ ಜೋಳಕ್ಕೆ 1600 ರೂ ಇತ್ತು. ಈ ಬಾರಿ ರೈತರು ಉತ್ಪಾದಿಸುವ ಜೋಳ, ಶುಂಠಿ, ಗೆಣಸು ಹೀಗೆ ಎಲ್ಲಾ ಬೆಳೆಗಳಿಗೂ ಮಾರುಕಟ್ಟೆಯಲ್ಲಿ ದರ ಕುಸಿತಗೊಂಡಿರುವುದು ರೈತ ರಲ್ಲಿ ಆತಂಕವನ್ನುಂಟು ಮಾಡಿದೆ. ಒಟ್ಟಾರೆ ಈ ಬೆಲೆ ಕುಸಿತಕ್ಕೆ ಕೊರೊನಾ ಭೂತವನ್ನು ತೋರಿಸಿ ರೈತರ ಬಾಯಿ ಮುಚ್ಚಿಸುವ ಕೆಲಸವಾಗುತ್ತಿದೆ.

- ಕೆ.ಎಸ್. ಮೂರ್ತಿ.