ಕುಶಾಲನಗರ, ಅ. 17: ಪತ್ರಿಕೆ ಮಾಧ್ಯಮಗಳು ವಸ್ತುನಿಷ್ಠ ವರದಿಗಳನ್ನು ಪ್ರಕಟಿಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತಾಗ ಬೇಕೆಂದು ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಕರೆ ನೀಡಿದ್ದಾರೆ.

ಕುಶಾಲನಗರದಲ್ಲಿ ಕರ್ನಾಟಕ ಸಂಪಾದಕರ ಮತ್ತು ವರದಿಗಾರರ ಸಂಘ ಮತ್ತು ಕುಶಾಲನಗರ ಪ್ರೆಸ್‍ಕ್ಲಬ್ ಟ್ರಸ್ಟ್ ಆಶ್ರಯದಲ್ಲಿ ನಡೆದ ಪತ್ರಿಕಾ ದಿನಾಚರಣೆ ಮತ್ತು ಪ್ರಶಸ್ತಿ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪತ್ರಿಕೆ ಮಾಧ್ಯಮಗಳಲ್ಲಿ ಅತಿ ರಂಜಿತ ಸುದ್ದಿಗಳೊಂದಿಗೆ ಅನಾರೋಗ್ಯಕರ ಪೈಪೋಟಿ ನಡೆದಲ್ಲಿ ಅದರಿಂದ ಸಮಾಜಕ್ಕೆ ತಪ್ಪು ಸಂದೇಶ ಸಾಗುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದರು. ಪ್ರೆಸ್‍ಕ್ಲಬ್ ಟ್ರಸ್ಟ್ ಅಧ್ಯಕ್ಷ ಹೆಚ್.ಎಂ. ರಘು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು. ರಾಷ್ಟ್ರಪತಿ ಪದಕ ವಿಜೇತ ಡಿವೈಎಸ್ಪಿ ಹೆಚ್.ಎಂ. ಶೈಲೇಂದ್ರ, ಮುಖ್ಯಮಂತ್ರಿ ಪದಕ ವಿಜೇತ ವೃತ್ತ ನಿರೀಕ್ಷಕ ಎಂ. ಮಹೇಶ್, ಕುಶಾಲನಗರ ಪ.ಪಂ. ಆರೋಗ್ಯ ನಿರೀಕ್ಷಕ ಎಂ.ಸಿ. ಉದಯಕುಮಾರ್, ನ್ಯೂಸ್ ಚಾನಲ್ ಜಿಲ್ಲಾ ವರದಿಗಾರ ಪ್ರೇಮ್‍ಕುಮಾರ, ಕಿರಿಯ ಮಹಿಳಾ ಆರೋಗ್ಯ ಸಹಾಯಕ ಎಂ.ವಿ. ಸುಮತಿ, ತಾಲೂಕು ಪ್ರ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಎನ್. ಮಂಜುನಾಥ್, ನಾಡಕಚೇರಿಯ ಸಚಿನ್ ಕುಲಕರ್ಣಿ, ಪೊಲೀಸ್ ಸಹಾಯಕ ಠಾಣಾಧಿಕಾರಿ ಹೆಚ್.ಟಿ. ಗೀತಾ, ಉಪ ಅರಣ್ಯ ವಲ ಯಾಧಿಕಾರಿ ಕೂಡಕಂಡಿ ಸುಬ್ರಾಯ, ಪೊಲೀಸ್ ಮುಖ್ಯಪೇದೆ ಎಂ.ಬಿ. ರವೀಂದ್ರ, ಅಂಗನವಾಡಿ ಕಾರ್ಯಕರ್ತೆ ಈ.ಕೆ. ಸರೋಜ ಮತ್ತು ಸಮಾಜ ಸೇವಕರಾದ ನವನೀತ್ ಪೊನ್ನೇಟಿ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭ ವಿಶೇಷ ಆಹ್ವಾನಿತರಾಗಿ ಕುಶಾಲನಗರ ಪ್ರೆಸ್‍ಕ್ಲಬ್ ಟ್ರಸ್ಟ್ ಗೌರವಾಧ್ಯಕ್ಷ ಟಿ.ಆರ್. ಪ್ರಭುದೇವ, ವೃತ್ತ ನಿರೀಕ್ಷಕ ಸಿ.ಪಿ. ಸೋಮೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಪಾಂಡು, ಪ್ರೆಸ್‍ಕ್ಲಬ್ ಟ್ರಸ್ಟ್ ಕಾನೂನು ಸಲಹೆಗಾರ ಆರ್.ಕೆ. ನಾಗೇಂದ್ರ ಬಾಬು ಮತ್ತು ಟ್ರಸ್ಟ್ ಮತ್ತು ಸಂಘದ ಪದಾಧಿಕಾರಿಗಳು ಇದ್ದರು.