ತುಲಾ ಸಂಕ್ರಮಣ ಕಾವೇರಿ ಜಾತ್ರೆ ನಿಮಿತ್ತ ಭಾಗಮಂಡಲ ಸಂಗಮ ಕ್ಷೇತ್ರ ಹಾಗೂ ತಲಕಾವೇರಿಯಲ್ಲಿ ಸ್ನಾನಕ್ಕೆ ಅವಕಾಶವಿರಲಿಲ್ಲ; ಅರ್ಚಕ ಸಮೂಹ ಮಾತ್ರ ಉಷಃಕಾಲದಲ್ಲಿ ತೀರ್ಥೋದ್ಭವ ಮುನ್ನ ಪೂಜಾ ಕೈಂಕರ್ಯ ನೆರವೇರಿಸಲು ಕೊಳದಲ್ಲಿ ಸ್ನಾನ ಪೂರೈಸಿ ಮಹಾ ಸಂಕಲ್ಪ ಆರಂಭಿಸಿದರು. ಇನ್ನೊಂದೆಡೆ ಉಭಯ ಕ್ಷೇತ್ರಗಳಲ್ಲಿ ಬೆಳಕಿನ ವ್ಯವಸ್ಥೆ ಉತ್ತಮವಿತ್ತು. ತಲಕಾವೇರಿ ಮಹಾದ್ವಾರ ಸೇರಿದಂತೆ ದೇವಸನ್ನಿಧಿಗಳಲ್ಲಿ ವಿದ್ಯುತ್ ದೀಪದೊಂದಿಗೆ ಪುಷ್ಪಾಲಂಕಾರ ಹಾಗೂ ದೇವರುಗಳಿಗೆ ಅಲಂಕಾರ ಮಾಡಲಾಗಿತ್ತು.ಇಬ್ಬರು ಡಿವೈಎಸ್‍ಪಿಗಳು, ಆರು ಮಂದಿ ವೃತ್ತ ನಿರೀಕ್ಷಕರು, 12 ಪೊಲೀಸ್ ಉಪ ನಿರೀಕ್ಷಕರು, ಪೊಲೀಸ್ ಹಾಗೂ ಗೃಹರಕ್ಷಕದಳ ಸೇರಿದಂತೆ 300 ರಷ್ಟು ಸಿಬ್ಬಂದಿ ನಿಯೋಜನೆಗೊಂಡು; ಸ್ವತಃ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ ಭದ್ರತಾ ವ್ಯವಸ್ಥೆಯತ್ತ

(ಮೊದಲ ಪುಟದಿಂದ) ಮಾರ್ಗದರ್ಶನ ನೀಡಿದ್ದರು. ಅಗ್ನಿಶಾಮಕ ದಳ ವಾಹನ ಸಹಿತ ಮುಂಜಾಗ್ರತೆ ವಹಿಸಿತ್ತು. ಆರೋಗ್ಯ ಇಲಾಖೆಯಿಂದ ಸುರಕ್ಷಾಕ್ರಮ ರೂಪಿಸಲಾಗಿತ್ತು.

ಯಾವ ಪರೀಕ್ಷೆ ಇರಲಿಲ್ಲ : ಹೀಗಿದ್ದರೂ ಜಿಲ್ಲಾಡಳಿತ ಘೋಷಿಸಿದಂತೆ ಯಾವದೇ ಕೊರೊನಾ ಸೋಂಕಿನ ತಪಾಸಣೆಯಾಗಲಿ, ಪಾಸ್ ಇತ್ಯಾದಿ ಇದ್ದವರಿಗೆ ಮಾತ್ರ ಅವಕಾಶವೆಂಬ ಕ್ರಮವಾಗಲಿ ಇರಲಿಲ್ಲ. ಕ್ಷೇತ್ರಕ್ಕೆ ಬರುತ್ತಿದ್ದ ಎಲ್ಲರಿಗೂ ಅಂತಿಮ ಕ್ಷಣದಲ್ಲಿ; ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಮುಂದಾಳತ್ವದಲ್ಲೇ ಮುಕ್ತ ಪ್ರವೇಶ ಲಭಿಸುವಂತಾಯಿತು. ಆ ಬೆನ್ನಲ್ಲೇ ಸ್ವತಃ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ತಲಕಾವೇರಿ ಸನ್ನಿಧಿಯಿಂದ ಭಾಗಮಂಡಲದತ್ತ ನಿರ್ಗಮಿಸಿದ್ದ ಬೆಳವಣಿಗೆಯೂ ಗೋಚರಿಸಿತ್ತು.

ಬೆಂಗಳೂರು ಸೇರಿದಂತೆ ಜಿಲ್ಲೆಯೆಲ್ಲೆಡೆಯಿಂದ ಸಾಂಪ್ರದಾಯಿಕ ಉಡುಗೆಯಲ್ಲಿ ಪಾದಯಾತ್ರೆ ಮೂಲಕ ಭಾಗಮಂಡಲದಿಂದ ಸಾಗಿಬಂದ ಯುವ ಪಡೆಗೆ ಮಾತ್ರ ಅವಕಾಶವಾದ ಬಗ್ಗೆ ಬಿ.ಎಸ್. ತಮ್ಮಯ್ಯ ತೀವ್ರ ಬೇಸರದೊಂದಿಗೆ, ತಾನು ಅಧ್ಯಕ್ಷನಾಗಿ ಜನತೆಗೆ ಏನು ಉತ್ತರಿಸಲಿ? ಎಂಬ ಪ್ರಶ್ನೆ ಮುಂದಿಟ್ಟು ಹೊರ ನಡೆದರು.