ಕೊಡಗಿನ ಕುಲಮಾತೆ ಕಾವೇರಿಯು ಭರತಭೂಮಿಯ ಸಪ್ತ ಸಿಂಧುವಿನಲ್ಲಿ ಪ್ರಮುಖವೆನಿಸಿದೆ. ಹೀಗಾಗಿ ತಲಕಾವೇರಿ ಕ್ಷೇತ್ರಕ್ಕೆ ಕೊಡಗಿನ ಜನತೆಯಷ್ಟೇ ಶ್ರದ್ಧಾಭಕ್ತಿಯನ್ನು ದೂರದ ತಮಿಳುನಾಡು ಸಹಿತ ಇತರೆಡೆಯ ಯಾತ್ರಾರ್ಥಿಗಳು ಇರಿಸಿಕೊಂಡಿದ್ದಾರೆ. ಹೀಗಾಗಿ ಅಂಥ ಭಕ್ತರ ಸಲುವಾಗಿ ಭಾಗಮಂಡಲ ಕಾಶೀಮಠದಂತೆ, ತಲಕಾವೇರಿಯಲ್ಲಿ ಕೈಲಾಸ ಆಶ್ರಮ ತಲೆಯೆತ್ತಿ ನಿಂತಿದೆ. ಆರು ದಶಕದ ಹಿಂದೆ ಬೆಂಗಳೂರು ಹೊರ ವಲಯದ ಕೆಂಚೇನ ಹಳ್ಳಿಯಲ್ಲಿರುವ ಆಶ್ರಮದ ಸಂತಶ್ರೇಷ್ಠರೊಬ್ಬರು ತಲಕಾವೇರಿ ಸಂದರ್ಶಿಸಿದ ವೇಳೆ ಈ ಕೈಲಾಸ ಆಶ್ರಮ ಶಾಖೆ ಪ್ರಾರಂಭಿಸುವ ಸಂಕಲ್ಪ ಕೈಗೊಂಡಿದ್ದರು. ಅವರೇ ಶ್ರೀರಾಜರಾಜೇಶ್ವರಿ ನಗರ ಎಂಬ ಹೆಗ್ಗಳಿಕೆಯ ಆ ದೇವಸನ್ನಿಧಿ ನಿರ್ಮಾತೃಗಳಾದ ಪೂಜ್ಯ ಶ್ರೀ ಶಿವರತ್ನಪುರಿ ಮಹಾಸ್ವಾಮೀಜಿಗಳಾದ ಇವರು ತಿರುಚ್ಚಿಶ್ರೀಗಳೆಂದೇ ಖ್ಯಾತರಾಗಿದ್ದರು.

ತಲಕಾವೇರಿ ಕ್ಷೇತ್ರದರ್ಶನಕ್ಕೆ ಮುನ್ನ ಅನತಿ ದೂರದಲ್ಲಿ, ಅವರು ಕೈಲಾಸ ಆಶ್ರಮದೊಂದಿಗೆ ಶ್ರೀಮಹಾಗಣಪತಿ ಗುಡಿ ನಿರ್ಮಿಸಿದ್ದಾಗಿದೆ. 1960ರ ದಶಕದಲ್ಲಿ ಈ ಆಶ್ರಮ ನಿರ್ಮಿಸಿದ ಶ್ರೀಗಳು, ಅನಂತರದಲ್ಲಿ 1983ರ ಹೊತ್ತಿಗೆ ತಾಯಿ ಕಾವೇರಿ ಮಾತೆಗೆ ಅಭಿಮುಖವಿರುವಂತೆ ಮಹಾಗಣಪತಿ ಗುಡಿಯನ್ನು ಆಶ್ರಮ ದ್ವಾರದ ಬಳಿ ಪ್ರತಿಪ್ಠಾಪಿಸಿದ್ದಾರೆ.

ಈ ದೇವಾಲಯವನ್ನು 2015ರಲ್ಲಿ ಈಗಿನ ಆಶ್ರಮದ ಉತ್ತರಾಧಿಕಾರಿಗಳಾದ ಶ್ರೀ ಜಯೇಂದ್ರಪುರಿ ಸ್ವಾಮೀಜಿ ಪುನರ್‍ನಿರ್ಮಾಣಗೊಳಿಸಿದ್ದಾರೆ. ವಾರ್ಷಿಕ ತುಲಾಸಂಕ್ರಮಣ ಜಾತ್ರೆಯ ಸಂದರ್ಭ ದೂರದಿಂದ ಬರುವ ಯಾತ್ರಾರ್ಥಿಗಳಿಗೆ ಒಂದು ತಿಂಗಳು ಅನ್ನದಾನ ವ್ಯವಸ್ಥೆ ಕೂಡ ಕೈಗೊಳ್ಳಲಾಗುತ್ತಿತ್ತು.

ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯಲ್ಲಿ ಆಸ್ತಿ ಹೊಂದಿರುವ ತಮಿಳುನಾಡು ಮೂಲದ ಕಾಫಿ ಬೆಳೆಗಾರರು; ಉದ್ಯಮಿಗಳು ಆಶ್ರಮದ ಸೇವೆಯಲ್ಲಿ ಕೈಜೋಡಿಸುತ್ತಿದ್ದಾರೆ. ಮಾತ್ರವಲ್ಲದೆ ತಲಕಾವೇರಿ ಕ್ಷೇತ್ರ ದರ್ಶನಕ್ಕೆ ದೂರದಿಂದ ಬರುವ ಸಂತರು ಸೇರಿದಂತೆ ಸಾತ್ವಿಕ ಕುಟುಂಬಗಳಿಗೂ ಈ ಆಶ್ರಮದಲ್ಲಿ ತಂಗುವ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಒಂದೊಮ್ಮೆ ಶ್ರೀಕಾವೇರಿ ಮಾತೆಯ ಬಗ್ಗೆ ಅಪಾರ ಶ್ರದ್ಧೆ-ಭಕ್ತಿಯೊಂದಿಗೆ, ದಕ್ಷಿಣ ಪ್ರಯಾಗ ಕ್ಷೇತ್ರದ ಹೆಗ್ಗಳಿಕೆಯ ಪ್ರಥಮ ಕಾವೇರಿ ಸಂಗಮ ಕ್ಷೇತ್ರ ಭಾಗಮಂಡಲದಲ್ಲಿ ಕುಂಭಮೇಳ ಆಯೋಜಿಸುವ ಕನಸನ್ನು ತಿರುಚ್ಚಿ ಮಹಾಸ್ವಾಮೀಜಿ ಕಂಡಿದ್ದರು.

ಇಲ್ಲಿ ಪೂರಕ ಸ್ಪಂದನ ಲಭಿಸದೆ ಅವರು 1990ರ ದಶಕದಲ್ಲಿ ಕರ್ನಾಟಕದಲ್ಲಿ ಪ್ರಥಮವೆಂಬಂತೆ ತಿರುಮ ಕುಡಲು ನರಸೀಪುರದಲ್ಲಿ ಕಾವೇರಿ-ಕಪಿಲೆ-ಸ್ಫಟಿಕ ಸರೋವರ ಸಂಗಮ ಸ್ಥಳದಲ್ಲಿ ಕುಂಭಮೇಳ ಆಯೋಜಿಸುವದರೊಂದಿಗೆ, ಇಂದಿಗೂ ಆಚರಣೆಗೊಳ್ಳುವಂತಾಗಿದೆ. ಹೀಗಾಗಿ ತಲಕಾವೇರಿ ಕೈಲಾಸ ಆಶ್ರಮಕ್ಕೂ ಅಪಾರ ದೈವೀ ಸಂಬಂಧವಿದೆ.

ಇದೀಗ ಅವರ ಶಿಷ್ಯ ಪರಂಪರೆಯಲ್ಲಿ ಶ್ರೀ ಜಯೇಂದ್ರ ಪುರಿ ಸ್ವಾಮೀಜಿಯವರಿದ್ದಾರೆ.

?ಚಿ. ನಾ. ಸೋಮೇಶ್,

ಮಡಿಕೇರಿ.