ವೀರಾಜಪೇಟೆ, ಅ. 16: ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿರುವÀವರು ಹಿರಿಯರೇ ಹೊರತು ಕಿರಿಯರಲ್ಲ. ಹಿರಿಯರ ದೇಹಕ್ಕೆ ವಯಸ್ಸಾಗುತ್ತಿದೆ ವಿನಃ ಮನಸ್ಸಿಗಲ್ಲ. ಒಳ್ಳೆಯ ಕೆಲಸ ಮಾಡಲು ವಯಸ್ಸಿನ ಬೇಧಭಾವ ಸರಿಯಲ್ಲ ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಎಂ.ಜಿ. ಲೋಕೇಶ್ ಹೇಳಿದರು.

ವೀರಾಜಪೇಟೆ ಪುರಭವನದಲ್ಲಿ ಇಲ್ಲಿನ ಹಿರಿಯ ನಾಗರಿಕರ ವೇದಿಕೆ ಮತ್ತು ವೀರಾಜಪೇಟೆ ಕಾನೂನು ಸಲಹೆಗಾರರು ಇವರ ಸಂಯುಕ್ತ ಆಶ್ರಯದಲ್ಲಿ “ವಿಶ್ವ ನಾಗರಿಕರ ದಿನಾಚರಣೆ” ಪ್ರಯುಕ್ತ ಬೇಡಿಕೆ ಮತ್ತು ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹಿರಿಯ ನಾಗರಿಕರನ್ನು ಪ್ರೀತಿ, ವಾತ್ಸಾಲ್ಯದಿಂದ ನೋಡಿಕೊಳ್ಳಬೇಕು ಎಂದರು.

ಕಿರಿಯ ಶ್ರೇಣಿ ಪ್ರಧಾನ ಸಿವಿಲ್ ನ್ಯಾಯಾಧೀಶ ಎನ್.ವಿ. ಕೋನಪ್ಪ ಮಾತನಾಡಿ, ಯುವ ಜನಾಂಗ ಇಂದು ದಾರಿ ತಪ್ಪುತ್ತಿದ್ದು ತಂದೆ-ತಾಯಿ ಹಾಗೂ ಹಿರಿಯರನ್ನು ವೃದ್ಧಾಶ್ರಮಕ್ಕೆ ಸೇರಿಸಲಾಗುತ್ತಿದೆ. ಇದು ಸರಿಯಲ್ಲ. ಸಮಸ್ಯೆಗಳನ್ನು ಯುವ ಜನಾಂಗ ಹಿರಿಯರ ಮಾರ್ಗದರ್ಶನ, ಆಶೀರ್ವಾದ ಪಡೆದು ಸನ್ನಡೆತೆಯಲ್ಲಿ ನಡೆದರೆ ಭವಿಷ್ಯದಲ್ಲಿ ಉತ್ತಮ ಜೀವನ ನಡೆಸಬಹುದು ಎಂದರು.

ಸಿವಿಲ್ ಅಪರ ನ್ಯಾಯಾಧೀಶೆ ಮಹಾಲಕ್ಷ್ಮಿ ಮಾತನಾಡಿ, ಹಿರಿಯರನ್ನು ಗೌರವದಿಂದ ಕಾಣುವಂತೆ ಹಿಂದಿನ ವೇದ ಪುರಾಣದಲ್ಲಿಯೇ ಉಲ್ಲೇಖವಾಗಿದೆ. ಇಂದಿನ ಯುವ ಜನಾಂಗ ಹಿರಿಯರಿಗೆ ಗೌರವ ಕೊಟ್ಟು ಸನ್ಮಾರ್ಗ ದಲ್ಲಿ ನಡೆಯುವಂತಾಗಬೇಕು. ಹಿರಿಯರ ಮೇಲೆ ದೌರ್ಜನ್ಯ ನಡೆದರೆ ಜಿಲ್ಲಾ ಹಾಗೂ ತಾಲೂಕು ಕಾನೂನು ಪ್ರಾಧಿಕಾರಕ್ಕೆ ದೂರು ನೀಡಬಹುದು ಜೊತೆಗೆ ಪತ್ರವನ್ನು ಬರೆಯಬಹುದು ಎಂದು ಹೇಳಿದರು.

ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಮುಲ್ಲೆಂಗಡ ಶಂಕರಿ ಪೊನ್ನಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ವೀರಾಜಪೇಟೆ ವಕೀಲರ ಸಂಘದ ಅಧ್ಯಕ್ಷ ಮಾಳೇಟಿರ ನಂಜಪ್ಪ, ಉದ್ಯಮಿ ಕೂತಂಡ ನಾಣಯ್ಯ, ನಿವೃತ್ತ ಪ್ರಾಧ್ಯಾಪಕ ಪುಟ್ಟಿಚಂಡ ಅಯ್ಯಣ್ಣ, ಹಿರಿಯ ನಾಗರಿಕರ ವೇದಿಕೆಯ ಮಾಜಿ ಅಧ್ಯಕ್ಷ ಬಿ.ಬಿ. ನಾಣಯ್ಯ ಉಪಸ್ಥಿತರಿದ್ದರು.