ಸೋಮವಾರಪೇಟೆ, ಅ. 16: ಸೋಮವಾರಪೇಟೆ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಇದೀಗ ಚನ್ನರಾಯ ಪಟ್ಟಣಕ್ಕೆ ವರ್ಗಾವಣೆಗೊಂಡಿರುವ ಸುನಿಲ್ ಕುಮಾರ್ ಅವರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಿಬ್ಬಂದಿಗಳ ಪರವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಇಲ್ಲಿನ ಸಫಾಲಿ ಹಾಲ್‍ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಿರ್ಗಮಿತ ಅಧಿಕಾರಿಯನ್ನು ಸನ್ಮಾನಿಸಿ ಮಾತನಾಡಿದ ನೂತನ ಕಾರ್ಯನಿರ್ವಹಣಾಧಿಕಾರಿ ಜಯಣ್ಣ ಅವರು, ಜಿಲ್ಲೆಯ 3 ತಾಲೂಕುಗಳ ಪೈಕಿ ಗ್ರಾಮೀಣಾಭಿವೃದ್ದಿ ಇಲಾಖೆಗಳ ಕಾರ್ಯಕ್ರಮಗಳು ಸೋಮವಾರಪೇಟೆಯಲ್ಲಿ ಪರಿಣಾಮಕಾರಿಯಾಗಿ ಜಾರಿಗೊಂಡಿವೆ. ಮುಂದಿನ ದಿನಗಳಲ್ಲೂ ಸಹ ಹೆಚ್ಚಿನ ಕೆಲಸ ನಿರ್ವಹಿಸಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಹಕಾರ ನೀಡಬೇಕೆಂದರು.
ಚನ್ನರಾಯಪಟ್ಟಣಕ್ಕೆ ವರ್ಗಾವಣೆಗೊಂಡ ಕಾರ್ಯನಿರ್ವಹಣಾಧಿಕಾರಿ ಸುನಿಲ್‍ಕುಮಾರ್ ಅವರನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ತಾಲೂಕು ಪಂಚಾಯಿತಿ ಸಿಬ್ಬಂದಿಗಳು, ಅಭಿಯಂತರರು ಸನ್ಮಾನಿಸಿ ಬೀಳ್ಕೊಟ್ಟರು.
ವೇದಿಕೆಯಲ್ಲಿ ತಾ.ಪಂ. ಯೋಜನಾಧಿಕಾರಿ ಆನಂದಮೂರ್ತಿ, ಪಿಡಿಓ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವೀಶ್ ಉಪಸ್ಥಿತರಿದ್ದರು. ಹರದೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ. ಲೋಕೇಶ್, ಮಂಜುಳಾ, ಸಂತೋಷ್‍ಕುಮಾರ್ ಅವರುಗಳು ಕಾರ್ಯಕ್ರಮ ನಿರ್ವಹಿಸಿದರು.