ಮೈಸೂರು ದಸರಾಕ್ಕೆ ವಿದ್ಯುಕ್ತ ಚಾಲನೆ

ಮೈಸೂರು, ಅ. 17: ಐತಿಹಾಸಿಕ ಮೈಸೂರು ದಸರಾಗೆ ಇಂದು ಚಾಲನೆ ದೊರೆತಿದೆ. ಖ್ಯಾತ ಹೃದ್ರೋಗ ತಜ್ಞ ಡಾ. ಸಿಎನ್. ಮಂಜುನಾಥ್ ಅವರು ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆಗೈಯುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದರು. ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಗೊಂಡ ಬೆನ್ನಲ್ಲೇ ಆರು ಮಂದಿ ಕೊರೊನಾ ವಾರಿಯರ್ಸ್‍ಗೆ ಸನ್ಮಾನ ಮಾಡಲಾಗಿದೆ. ಪೌರಕಾರ್ಮಿಕರಾದ ಮರಗಮ್ಮ, ವೈದ್ಯಕೀಯ ಅಧಿಕಾರಿ ಡಾ. ನವೀನ್‍ಕುಮಾರ್, ಸ್ಟಾಫ್ ನರ್ಸ್ ರುಕ್ಮಿಣಿ, ಆಶಾ ಕಾರ್ಯಕರ್ತೆಯಾದ ನೂರ್‍ಜಾನ್, ಪೆÇಲೀಸ್ ಕಾನ್ಸ್‍ಸ್ಟೆಬಲ್ ಕುಮಾರ್ ಪಿ., ಸಾಮಾಜಿಕ ಕಾರ್ಯಕರ್ತರಾದ ಆಯೂಬ್ ಅಹಮದ್‍ಗೆ ಗಣ್ಯರ ಸಮ್ಮುಖದಲ್ಲಿ ಸನ್ಮಾನ ಮಾಡಲಾಯಿತು.

ಸರ್ಕಾರ ಇದ್ದರೆಷ್ಟು, ಹೋದರೆಷ್ಟು : ಸಿದ್ದು ಕಿಡಿ

ಬೆಂಗಳೂರು, ಅ. 17: ಬಡವರು, ವಲಸೆ ಕಾರ್ಮಿಕರಿಗೆ ಅನುಕೂಲವಾಗಲಿ ಅಂತ ಜಾರಿಗೆ ತರಲಾಗಿದ್ದ ಇಂದಿರಾ ಕ್ಯಾಂಟೀನ್‍ನನ್ನು ಮುಚ್ಚಲು ಬಿಜೆಪಿ ಸರ್ಕಾರ ಹೊರಟಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ಸಿದ್ದರಾಮಯ್ಯ ಹೇಳಿದ್ದಾರೆ. ದುಡ್ಡಿಲ್ಲ, ಕೊರೊನಾ ಇದೆ ಅಂತ ಜನರ ಎದುರು ಅಸಹಾಯಕತೆ ತೋರುವ ಬದಲು ಅಧಿಕಾರ ಬಿಟ್ಟು ತೊಲಗಲಿ. ಹಸಿದವರಿಗೆ ಅನ್ನ ಹಾಕಲು ಆಗದ ಸರ್ಕಾರ ಇದ್ದರೆಷ್ಟು, ಹೋದರೆಷ್ಟು? ಎಂದಿದ್ದಾರೆ. ಶಿರಾದಲ್ಲಿ ಬಿಜೆಪಿಯವರು ಸಾವಿರಾರು ಜನರನ್ನು ಸೇರಿಸಿ ಮೆರವಣಿಗೆ ಮಾಡಿರುವುದು ಕೋವಿಡ್ ನಿಯಮಗಳಿಗೆ ವಿರುದ್ಧವಲ್ಲವೇ? ತಾವು ಜಾರಿಗೆ ತಂದಿರುವ ನಿಯಮಗಳನ್ನು ತಾವೇ ಧಿಕ್ಕರಿಸಿದ್ದಾರೆ, ಇನ್ನು ಬೇರೆಯವರಿಗೆ ಉಪದೇಶ ನೀಡಲು ಯಾವ ನೈತಿಕತೆ ಇದೆ? ಎಂದು ಅವರು ಪ್ರಶ್ನಿಸಿದ್ದು, ಆರೋಗ್ಯ ಸಚಿವರು ಆಗಾಗ ತಮ್ಮ ಪಕ್ಷದ ಸಭೆ ಸಮಾರಂಭಗಳನ್ನೂ ಗಮನಿಸಲಿ ಎಂದು ಸಲಹೆ ನೀಡಿದ್ದಾರೆ.

ಮಸೀದಿ ಧ್ವಂಸ ಪ್ರಕರಣ : ಮೇಲ್ಮನವಿ ಸಲ್ಲಿಕೆ

ಲಖನೌ, ಅ. 17: ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿದ ಸಿಬಿಐ ವಿಶೇಷ ಕೋರ್ಟ್ ತೀರ್ಪು ಪ್ರಶ್ನಿಸಿ ಹೈಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಲು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ನಿರ್ಧರಿಸಿದೆ. ಸಿಬಿಐ ವಿಚಾರಣಾ ನ್ಯಾಯಾಲಯ ಕಳೆದ ಸೆ. 30 ರಂದು ನೀಡಿದ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವ ನಿರ್ಧಾರವನ್ನು ಶುಕ್ರವಾರ ರಾತ್ರಿ ಮುಕ್ತಾಯಗೊಂಡ ಎಐಎಂಪಿಎಲ್ಬಿಯ ಎರಡು ದಿನಗಳ ಕಾರ್ಯ ಸಮಿತಿ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.