ನಾಪೋಕ್ಲು, ಅ. 17: ಕಾಡಾನೆ ಧಾಳಿಗೆ ಭತ್ತದ ಕೃಷಿ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿ ನಷ್ಟ ಸಂಭವಿಸಿರುವ ಕುರಿತು ಸಮೀಪದ ಕೋಕೇರಿ ಗ್ರಾಮದ ಚಂಡೀರ ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ. ಚೆಯ್ಯಂಡಾಣೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಕಕ್ಕಬ್ಬೆ ಚೇಲಾವರ ನರಿಯಂದಡ ಭಾಗಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕೃಷಿ ಭೂಮಿಯನ್ನು ಹಾಳುಮಾಡಿರುವ ಕಾಡಾನೆಗಳು ಕೋಕೇರಿ ಗ್ರಾಮ ವ್ಯಾಪ್ತಿಯಲ್ಲಿ ಇತ್ತೀಚೆಗೆ ಗದ್ದೆ ಮತ್ತು ತೋಟಗಳನ್ನು ಹಾಳುಗೆಡವುತ್ತಿವೆ. ನಾಟಿ ಮಾಡಿದ ಭತ್ತದ ಗದ್ದೆಗಳಲ್ಲಿ ಭತ್ತವನ್ನು ತುಳಿದು ಹಾಳುಮಾಡಿದರೆ ಇನ್ನು ಕೆಲವು ಕಡೆ ಭತ್ತದ ಪೈರುಗಳನ್ನು ಕಿತ್ತು ಹಾಕಿ ನಾಶ ಮಾಡಿವೆ. ಕಳೆದ ಐದಾರು ದಿನಗಳಿಂದ ಸತತ ಧಾಳಿ ಮಾಡುತ್ತಿದ್ದು ಭತ್ತದ ಗದ್ದೆ ಮಾತ್ರವಲ್ಲ. ಕಾಫಿ ತೋಟದಲ್ಲಿನ ಕಾಫಿ ಬಾಳೆ ಅಡಿಕೆ ಮತ್ತಿತರ ಬೆಳೆಗಳನ್ನು ಹಾಳುಗೆಡವಿದೆ ಎಂದು ಕೋಕೇರಿ ಗ್ರಾಮದ ಕೃಷಿಕ ಚಂಡೀರ ಈರಪ್ಪ ಅಳಲು ತೋಡಿಕೊಂಡಿದ್ದಾರೆ.

ಕಷ್ಟಪಟ್ಟು ಭತ್ತದ ಕೃಷಿ ಕೈಗೊಂಡಿದ್ದು, ಇಳುವರಿ ಕೂಡ ಚೆನ್ನಾಗಿತ್ತು. ಆದರೆ ಆನೆಗಳ ಹಿಂಡು ಧಾಳಿ ಮಾಡಿ ಭತ್ತದ ಬೆಳೆಗೆ ಹಾನಿಯಾಗಿದೆ. ಕಾರ್ಮಿಕರ ಕೊರತೆ ಮತ್ತು ಹೆಚ್ಚಿನ ಕೂಲಿ ಹವಾಮಾನ ವೈಪರೀತ್ಯದ ನಡುವೆ ಕಷ್ಟಪಟ್ಟು ಮಾಡಿದ ಕೃಷಿ ಹಾಳಾಗಿದೆ. ಈ ಬಗ್ಗೆ ಅರಣ್ಯಾಧಿಕಾರಿಗಳು ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.