ಮಡಿಕೇರಿ, ಅ. 17: ಕೊಡಗು ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಸಂಭವಿಸುತ್ತಿರುವ ಪ್ರಾಕೃತಿಕ ದುರಂತಗಳನ್ನು ಗಂಭೀರವಾಗಿ ಪರಿಗಣಿಸಿರುವ ಅಗ್ನಿ ಶಾಮಕ ಇಲಾಖೆಯು, ಜಿಲ್ಲೆಯಲ್ಲಿ ಖಾಯಂ ಆಗಿ ವಿಪತ್ತು ನಿರ್ವಹಣಾ ಕಾರ್ಯಪಡೆಯೊಂದನ್ನು ಸ್ಥಾಪಿಸಲು ಮುಂದಾಗಿದೆ.

ಈ ಸಲುವಾಗಿ ಕೊಡಗಿನ ಮಾಜಿ ಸೈನಿಕರಿಗೆ ಜಿಲ್ಲೆ ಅಥವಾ ರಾಜ್ಯದಲ್ಲಿ ಅಗತ್ಯಕ್ಕೆ ಅನುಸಾರ ಸೇವೆಗೆ ಅವಕಾಶದೊಂದಿಗೆ ಉತ್ತಮ ಸಂಭಾವನೆ ನೀಡಲಾಗುತ್ತದೆ. ಆ ದಿಸೆಯಲ್ಲಿ ಪ್ರಥಮವಾಗಿ ಕೊಡಗು ಜಿಲ್ಲೆ ಎದುರಿಸುತ್ತಿರುವ ಪ್ರಾಕೃತಿಕ ದುರಂತಗಳ ಸಂದರ್ಭ ಇಲ್ಲಿನ ನಿವೃತ್ತ ಯೋಧರಿಗೆ ಅಗ್ನಿ ಶಾಮಕ ಇಲಾಖೆಯು ಆಹ್ವಾನ ನೀಡಿದೆ.

ಆಸಕ್ತ ಮಾಜಿ ಯೋಧರು 45 ವರ್ಷ ವಯೋಮಾನದೊಂದಿಗೆ ನಿವೃತ್ತಿ ಪಡೆದು ಉದ್ಯೋಗಾಕಾಂಕ್ಷಿಗಳಿದ್ದರೆ ಅಗ್ನಿಶಾಮಕ ದಳ ಜಿಲ್ಲಾ ಅಧಿಕಾರಿಗಳ ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ. ಈ ಬಗ್ಗೆ ಜಿಲ್ಲಾ ಅಗ್ನಿ ಶಾಮಕ ದಳ ಅಧಿಕಾರಿ ಚಂದನ್ ಅವರನ್ನು ನೇರವಾಗಿ ಅಥವಾ ದೂರವಾಣಿ 08272- 229299ಗೆ ಸಂಪರ್ಕಿಸಬಹುದಾಗಿದೆ.

ಕೊಡಗಿನಲ್ಲಿ ನಿರಂತರ ವಿಪತ್ತು ಎದುರಾಗುತ್ತಿರುವ ಕಾರಣಕ್ಕಾಗಿ ಮೇಲಧಿಕಾರಿಗಳ ಅನುಮತಿ ಮೇರೆಗೆ ಈ ಘಟಕ ಸ್ಥಾಪಿಸಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳ ಆಯ್ಕೆಯೊಂದಿಗೆ ಅವರಿಗೆ ಅಗತ್ಯ ತರಬೇತಿ ನೀಡಲಾಗುವದು ಎಂದು ಅಧಿಕಾರಿ ಚಂದನ್ ‘ಶಕ್ತಿ’ ಸಂದರ್ಶನದಲ್ಲಿ ವಿವರಿಸಿದರು.

ತಕ್ಷಣದಿಂದ ಆಸಕ್ತರು ಅರ್ಜಿ ಸಲ್ಲಿಸಿದರೆ, ಸಂದರ್ಶನ ಮೂಲಕ ಆಯ್ಕೆಯೊಂದಿಗೆ ತರಬೇತಿ ಹಮ್ಮಿಕೊಳ್ಳಲಾಗುವದು ಎಂದು ವಿವರಿಸಿದ ಅವರು, ಮಾಜಿ ಯೋಧರು ಶಾರೀರಿಕವಾಗಿ ದೃಢಕಾಯರಿದ್ದು, ಈ ಕಾರ್ಯಪಡೆಯಲ್ಲಿ ಸೇರ್ಪೆಡಗೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂಬದಾಗಿ ಮಾಹಿತಿ ನೀಡಿದರು.