ಗೋಣಿಕೊಪ್ಪ ವರದಿ, ಅ. 12: ಕೃಷಿ ಮಸೂದೆ ಜಾರಿ ವಿಚಾರವಾಗಿ ಸರ್ಕಾರ ರೈತ ವಿರೋಧಿ ನಿಲುವು ತಳೆದಿಲ್ಲ ಎಂದು ಶಾಸಕ ಕೆ.ಜಿ. ಬೋಪಯ್ಯ ಅಭಿಪ್ರಾಯಪಟ್ಟರು.

ಪೊನ್ನಂಪೇಟೆ ಶಾಸಕರ ಕಚೇರಿ ಆವರಣದಲ್ಲಿ ಕೃಷಿ ಮಸೂದೆ ವಿಚಾರವಾಗಿ ಗೊಂದಲ ನಿವಾರಣೆಗಾಗಿ ಸತ್ಯ-ಮಿಥ್ಯ ಕರಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಈ ಹಿಂದೆ ಜಾರಿಗೆ ತರಲು ಉದ್ದೇಶಿಸಿದ್ದ ಕಾಯ್ದೆಯಲ್ಲಿ ಒಂದಷ್ಟು ತಿದ್ದುಪಡಿ ಮಾಡಿ ಜಾರಿಗೆ ತರಲಾಗಿದೆ. ಸಿದ್ದರಾಮಯ್ಯ ಸರ್ಕಾರವಿದ್ದಾಗ ಕೂಡ ಸಾಕಷ್ಟು ಬದಲಾವಣೆಗೆ ಮುಂದಾಗಿತ್ತು. ಇದರಂತೆ ಶಾಶ್ವತ ನೀರಾವರಿ ಜಮೀನು ಖರೀದಿ ಮಾಡುವವರು ಅಂತಹ ಜಾಗವನ್ನು ಕೃಷಿಗೆ ಮಾತ್ರ ಬಳಕೆ ಮಾಡುವಂತೆ ತಿದ್ದುಪಡಿ ಮಾಡಲಾಗಿದೆ. ಯಾವ ಕಾರಣಕ್ಕೂ ಕೃಷಿ ಭೂಮಿ ಕೃಷಿಯೇತರ ಚಟುವಟಿಕೆಗೆ ಬಳಕೆಯಾಗಲು ಬಿಡುವುದಿಲ್ಲ. ರೈತರು ಗೊಂದಲದಿಂದ ಹೊರಬರಬೇಕಿದೆ. ಈ ಬಗ್ಗೆ ಕಾರ್ಯಕರ್ತರು ಕರಪತ್ರವನ್ನು ಪ್ರಚಾರ ಮಾಡುವ ಮೂಲಕ ಕಾಯ್ದೆ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಎಪಿಎಂಸಿ ಕಾಯ್ದೆ ಜಾರಿಯಿಂದ ಎಪಿಎಂಸಿ ಯನ್ನು ಕೈಬಿಡುವ ವಿಚಾರವಿಲ್ಲ. ರೈತರಿಗೆ ಬೆಂಬಲವಾಗಿ ಜಾರಿ ಮಾಡಲಾಗಿದೆ ಎಂದರು.

ಕೊಡಗು ಜಿಲ್ಲೆಯನ್ನು ಈ ವರ್ಷ ಅತಿವೃಷ್ಠಿ ಪ್ರದೇಶ ಎಂದು ಘೋಷಿಸಲಾಗಿದೆ. ಒಂದಷ್ಟು ಗ್ರಾಮಗಳಲ್ಲಿ ಬೆಳೆ ನಷ್ಟವಾಗಿಲ್ಲ ಎಂದು ಸರ್ಕಾರಕ್ಕೆ ತೋಟಗಾರಿಕಾ ಇಲಾಖೆ ಮತ್ತು ಕಾಫಿ ಮಂಡಳಿ ಅಧಿಕಾರಿಗಳು ಮಾಹಿತಿ ನೀಡಿರುವ ಬಗ್ಗೆ ರೈತರಿಂದ ಆರೋಪಗಳು ವ್ಯಕ್ತವಾಗಿದೆ. ಸರ್ಕಾರ ಕೂಡ ರೈತಪರ ನಿಲುವು ಹೊಂದಿದೆ. ಇದರಂತೆ ಕಾಫಿ ಮಂಡಳಿ, ತೋಟಗಾರಿಕಾ ಇಲಾಖೆ ಅಧಿಕಾರಿ ಗಳಿಗೆ ಎನ್‍ಡಿಆರ್‍ಎಫ್ ಮಾರ್ಗಸೂಚಿ ಅಳವಡಿಸಿಕೊಂಡು ವರದಿ ನೀಡಲು ಸೂಚನೆ ನೀಡಲಾಗಿದೆ. ಪರಿಹಾರದ ವಿಚಾರವಾಗಿ ಜನರು ಗೊಂದಲದಿಂದ ಇರಬಾರದು. ಎನ್‍ಡಿಆರ್‍ಎಫ್ ಮರ್ಗಸೂಚಿಯಂತೆ ಪರಿಹಾರಕ್ಕೂ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ವೀರಾಜಪೇಟೆ ತಾಲೂಕು ಮಹಾಶಕ್ತಿ ಕೇಂದ್ರದ ಹನ್ನೊಂದು ಪ್ರಮುಖರು, ಪದಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ತಾಲೂಕಿನ ಕಾರ್ಯಕರ್ತರು ಪಾಲ್ಗೊಂಡಿದ್ದರು. ಈ ಸಂದರ್ಭ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಞ್ಞಂಗಡ ಅರುಣ್ ಭೀಮಯ್ಯ, ವೀರಾಜಪೇಟೆ ಮಂಡಲ ಬಿಜೆಪಿ ಅಧ್ಯಕ್ಷ ನೆಲ್ಲೀರ ಚಲನ್‍ಕುಮಾರ್, ಕೃಷಿ ಮೋರ್ಚಾ ತಾಲೂಕು ಅಧ್ಯಕ್ಷ ಕಟ್ಟೇರ ಈಶ್ವರ ತಿಮ್ಮಯ್ಯ, ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಅಜ್ಜಿಕುಟ್ಟೀರ ಪ್ರವೀಣ್, ಪ್ರಮುಖರಾದ ಕಾಟಿಮಾಡ ಶರೀನ್ ಮುತ್ತಣ್ಣ, ವಾಟೇರಿರ ಬೋಪಣ್ಣ, ಮತ್ರಂಡ ಕಬೀರ್, ತೊರೀರ ಮಿನು, ಗುಡ್ಡಮಾಡ ಅಪ್ಪಿ, ಚಟ್ಟಮಾಡ ಅನಿಲ್, ಕಾರ್ಯದರ್ಶಿ ನವೀನ್, ಐಪುಮಾಡ ಸಂಜು, ಐಯ್ಯಮಾಡ ಉದಯ, ಮನೆಯಪಂಡ ಮಹೇಶ್, ಕಾಟಿಮಾಡ ಶರೀನ್, ಆದರ್ಶ್, ಸಿಲಾನ್, ಕಟ್ಟೇಂಗಡ ತಮ್ಮಯ್ಯ ಇದ್ದರು.