*ಗೋಣಿಕೊಪ್ಪಲು, ಅ. 12 : ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಭಂವರ್ ಸಿಂಗ್ ಮೀನ ಸೋಮವಾರ ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಕಾಮಗಾರಿಗಳನ್ನು ವೀಕ್ಷಿಸಿದರು.
ಮಜ್ಜಿಗೆಹಳ್ಳದ ಅಂಗನವಾಡಿಗೆ ಭೇಟಿ ನಿಡಿದ ಸಿಇಒ ಕಟ್ಟಡದ ಸುರಕ್ಷತೆ ಬಗ್ಗೆ ಪರಿಶೀಲನೆ ನಡೆಸಿದರು. ಬಳಿಕ ಮರೂರಿನ ಗಿರಿಜನ ಮಕ್ಕಳ ಆಶ್ರಮ ಶಾಲೆಗೆ ಭೇಟಿ ನೀಡಿ ಶಾಲೆ ಹೊಂದಿರುವ ಮೂಲ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು. ವಿದ್ಯಾರ್ಥಿಗಳು ಇಲ್ಲದೇ ಇದ್ದರೂ ಶಾಲೆಯ ಆವರಣವನ್ನು ಸ್ವಚ್ಚವಾಗಿಡಬೇಕು. ಅಡುಗೆ ಕೋಣೆ, ಶಾಲಾ ಕೊಠಡಿಗಳ ಸ್ವಚ್ಚತೆ ಬಗ್ಗೆ ನಿತ್ಯ ಗಮನ ಹರಿಸಬೇಕು ಎಂದು ಅಲ್ಲಿನ ಸಿಬ್ಬಂದಿಗಳಿಗೆ ಸೂಚಿಸಿದರು.
ಬಳಿಕ ಹಾಡಿಗಳಲ್ಲಿ ನಡೆಯುತ್ತಿ ರುವ ಸ್ವಚ್ಚ ಶೌಚಾಲಯವನ್ನು ವೀಕ್ಷಿಸಿ ಕಾಮಗಾರಿಯ ಗುಣಮಟ್ಟವನ್ನು ಪರೀಕ್ಷಿಸಿದರು. ಯಾವುದೇ ಕಾಮಗಾರಿಗಳನ್ನು ನಿಗದಿತ ಸಮಯದ ಒಳಗೆ ಮುಗಿಸಬೇಕು. ಗುತ್ತಿಗೆದಾರರಿಗೆ ಈ ಬಗ್ಗೆ ಕಟ್ಟು ನಿಟ್ಟಾಗಿ ಆದೇಶಿಸಬೇಕು ಎಂದು ಪಿಡಿಒ ಮಮತಾ ಜಗದೀಶ್ ಅವರಿಗೆ ಸೂಚಿಸಿದರು.
ಬಳಿಕ ತಿತಿಮತಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಆಸ್ಪತ್ರೆಯ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಆಸ್ಪತ್ರೆಯ ಕುಂದು ಕೊರತೆಗಳನ್ನು ವಿಚಾರಿಸಿ ಅಗತ್ಯ ಸೌಲಭ್ಯಗಳನ್ನು ಕೂಡಲೆ ಒದಗಿಸಿಕೊಡಲಾಗುವುದು ಎಂದರು. ಆಸ್ಪತ್ರೆಗೆ ಬರುವ ರೋಗಿಗಳೊಂದಿಗೆ ಸಿಬ್ಬಂದಿಗಳು ಅನ್ಯೊನ್ಯವಾಗಿ ವರ್ತಿಸಬೇಕು ಎಂದು ಸೂಚಿಸಿದರು. ಪಿಡಿಒ ಮಮತಾ ಜಗದೀಶ್ ಇದ್ದರು.