ಸುಂಟಿಕೊಪ್ಪ,ಅ.12: ರಾಷ್ಟ್ರೀಯ ಹೆದ್ದಾರಿಯಲ್ಲಿ ವ್ಯಕ್ತಿಯೋರ್ವರ ಮೇಲೆ ಕಾಡಾನೆ ಧಾಳಿ ನಡೆಸಿರುವ ಘಟನೆ ಸಂಭವಿಸಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಆನೆಕಾಡು ರಕ್ಷಿತಾರಣ್ಯದ ಬಳಿ ಇಂದು ಮುಂಜಾನೆ 4 ಗಂಟೆ ವೇಳೆಗೆ ಮುಂಬೈ ಮೂಲದ ಅಂದಾಜು (35) ಪ್ರಾಯದ ವ್ಯಕ್ತಿಯೋರ್ವ ನಡೆದುಕೊಂಡು ಬರುತ್ತಿದ್ದ ವೇಳೆ ಒಂಟಿಸಲಗವೊಂದು ಏಕಾಏಕಿ ದಾಳಿ ನಡೆಸಿದೆ ಎನ್ನಲಾಗಿದೆ. ಕೈ ಕಾಲುಗಳಿಗೆ ಗಂಭೀರ ಗಾಯಗೊಂಡ ವ್ಯಕ್ತಿ ಸಲಗದ ದಾಳಿಯಿಂದ ತಪ್ಪಿಸಿಕೊಂಡು 7ನೇ ಹೊಸಕೋಟೆಯ ಮೆಟ್ನಾಳದ ಬಸ್ ತಂಗುದಾಣದಲ್ಲಿ ಬಂದು ನೋವಿನಿಂದ ಕಿರುಚಾಡುತ್ತಿದ್ದರು. ಕಿರುಚುವ ಶಬ್ಧ ಕೇಳಿ ಸ್ಥಳೀಯ ಮಿಥುನ್ ಅವರು ರಸ್ತೆಗೆ ಬಂದಾಗ ಬಸ್ ತಂಗುದಾಣದಲ್ಲಿ ವ್ಯಕ್ತಿಯು ನೋವಿನಿಂದ ಬೊಬ್ಬಿಡುತ್ತಿದ್ದ ಕಂಡು ವಿಚಾರಿಸಿದಾಗ ಮುಂಬೈ ಮೂಲದವರು ಎಂದು ತಿಳಿದು ಬಂದಿದೆ. ಮಿಥುನ್ ಮತ್ತು ಗಂಗಾಧರ್ ಎಂಬವರು ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ಕುಶಾಲನಗರದ ಸಂಚಾರಿ ಪೊಲೀಸ್ ಅವರ ಸಹಾಯದಿಂದ ಕುಶಾಲನಗರ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಯಿತು.