ಶಾಲೆಗಳಿಗೆ ರಜೆ ಘೋಷಿಸಿದ ಸಿಎಂ ಬೆಂಗಳೂರು, ಅ. 11: ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಆರೋಗ್ಯದ ಹಿತದೃಷ್ಟಿಯಿಂದ ಶಾಲೆಗಳಿಗೆ ತಾ. 12 ರಿಂದ ಮೂರು ವಾರಗಳ ಕಾಲ ರಜೆ ಘೋಷಿಸಲು ಮುಖ್ಯಮಂತ್ರಿ ಆದೇಶಿಸಿದ್ದಾರೆ. ಕೋವಿಡ್ 19 ಸೋಂಕಿನ ಹಿನ್ನೆಲೆ ಸದ್ಯಕ್ಕೆ ಶಾಲೆಗಳನ್ನು ಪ್ರಾರಂಭಿಸದಿರಲು ಮತ್ತು ವಿದ್ಯಾಗಮ ಕಾರ್ಯ ಕ್ರಮವನ್ನು ಸಹ ಸ್ಥಗಿತಗೊಳಿಸಲು ಈಗಾಗಲೇ ಆದೇಶಿಸಲಾಗಿದೆ. ಹಲವಾರು ಶಿಕ್ಷಕರು ಸಹ ಕೋವಿಡ್-19 ಸೋಂಕಿಗೆ ಒಳಗಾಗಿರುವುದನ್ನು ಮಾಧ್ಯಮದ ಮೂಲಕ ಗಮನಿಸಿದ್ದೇನೆ. ಆದ್ದರಿಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಆರೋಗ್ಯದ ಹಿತದೃಷ್ಟಿಯಿಂದ ಶಾಲೆಗಳಿಗೆ ತಾ. 12 ರಿಂದ ಮೂರು ವಾರಗಳ ಕಾಲ ಅಂದರೆ ತಾ. 30 ರವರೆಗೆ ಮಧ್ಯಂತರ ರಜೆ ಘೋಷಿಸಿ ಆದೇಶ ಹೊರಡಿಸಲು ಹಿರಿಯ ಅಧಿಕಾರಿಗಳಿಗೆ ಈಗಾಗಲೇ ನಿರ್ದೇಶನ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆದೇಶದಲ್ಲಿ ತಿಳಿಸಿದ್ದಾರೆ.
ಆಸ್ತಿ ಕಾರ್ಡ್ ವಿತರಣೆಗೆ ಚಾಲನೆ
ನವದೆಹಲಿ, ಅ. 11: ಗ್ರಾಮ ಪ್ರದೇಶಗಳಲ್ಲಿ ಸುಧಾರಿತ ತಂತ್ರಜ್ಞಾನದ ಸ್ವಾಮಿತ್ವ ಯೋಜನೆಯ ಮೂಲಕ ಆಸ್ತಿ ಕಾರ್ಡ್ ವಿತರಣೆಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಚಾಲನೆ ನೀಡಿದ್ದಾರೆ. ಈ ಕಾರ್ಡ್‍ಗಳು ಹಳ್ಳಿಗರ ಮನೆಗಳು ಮತ್ತು ಅವರು ಹೊಂದಿರುವ ಸುತ್ತಮುತ್ತಲಿನ ಪ್ರದೇಶಗಳ ಆಸ್ತಿ ಹಕ್ಕುಪತ್ರಗಳ ಭೌತಿಕ ಪ್ರತಿಗಳಾಗಲಿವೆ. ಏಪ್ರಿಲ್‍ನಲ್ಲಿ ಆರಂಭಿಸಿದ ಸ್ವಾಮಿತ್ವ ಯೋಜನೆ ಗ್ರಾಮೀಣ ಜನರು ಆಸ್ತಿಯನ್ನು ಆರ್ಥಿಕ ಆಸ್ತಿಯಾಗಿ ಬಳಸಲು ಅವಕಾಶ ನೀಡಲಿದೆ. ಯೋಜನೆಯಿಂದ 6.62 ಲಕ್ಷ ಗ್ರಾಮಗಳಿಗೆ ಲಾಭವಾಗಲಿದ್ದು, ಯೋಜನೆಯಡಿಯಲ್ಲಿ ರೈತರ ಜಮೀನುಗಳು ಸಂಪೂರ್ಣ ಡಿಜಿಟಲೀಕರಣಗೊಳ್ಳಲಿದೆ. ಯೋಜನೆಯಲ್ಲಿ ಉತ್ತರಪ್ರದೇಶದ 346, ಹರಿಯಾಣದ 221, ಮಹಾರಾಷ್ಟ್ರದ 100, ಮಧ್ಯಪ್ರದೇಶದ 44, ಉತ್ತರಾಖಂಡದ 50 ಮತ್ತು ಕರ್ನಾಟಕದ 2 ಗ್ರಾಮಗಳು ಸೇರಿ ಒಟ್ಟು 763 ಗ್ರಾಮಗಳು ಫಲಾನುಭವಿಸಿಗಳು ಯೋಜನೆಯ ಲಾಭವನ್ನು ಪಡೆಯಲಿದ್ದಾರೆ.
ಚಳಿಗಾಲದಲ್ಲಿ ಹೆಚ್ಚಾಗಲಿದೆ ಕೋವಿಡ್
ನವದೆಹಲಿ, ಅ. 11: ದೇಶದಲ್ಲಿ ಕೋವಿಡ್ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿರುವ ಕುರಿತು ಆತಂಕ ವ್ಯಕ್ತಪಡಿಸಿರುವ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್, ಚಳಿಗಾಲದ ಅವಧಿಯಲ್ಲಿ ಇದು ಇನ್ನೂ ಏರಿಕೆಯಾಗುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ ಎಂದಿದ್ದಾರೆ. ಭಾರತದ ಚಳಿಗಾಲದ ಋತುವಿನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ವಾರದ ಸಾಮಾಜಿಕ ಜಾಲತಾಣಗಳ ಕಾರ್ಯಕ್ರಮ “ಸಂವಾದ”ದಲ್ಲಿ ಪಾಲ್ಗೊಂಡ ಅವರು, ಕೊರೊನಾ ವೈರಸ್ ಶ್ವಾಸಕೋಶದ ವೈರಸ್ ಆಗಿದ್ದು, ತಂಪು ವಾತಾವರಣದಲ್ಲಿ ಉಸಿರಾಟದ ವೈರಸ್ ಹರಡುವುದು ಹೆಚ್ಚಾಗುತ್ತದೆ. ತಂಪು ಹವಾಮಾನ ಮತ್ತು ಕಡಿಮೆ ಆದ್ರ್ರತೆಯ ಸ್ಥಿತಿಯಲ್ಲಿ ಶ್ವಾಸಕೋಶದ ವೈರಸ್‍ಗಳು ಹೆಚ್ಚಾಗುತ್ತದೆ. ನೆನಪಿನಲ್ಲಿಟ್ಟು ಕೊಳ್ಳಬೇಕಾದ ಇನ್ನೊಂದು ಸಂಗತಿಯೆಂದರೆ, ಚಳಿಗಾಲದ ಸಮಯದಲ್ಲಿ, ವಸತಿ ನಿವಾಸಗಳಲ್ಲಿ ಜನದಟ್ಟಣೆ ಹೆಚ್ಚಾಗುವ ಪ್ರವೃತ್ತಿ ಇದೆ. ಇದು ಸೋಂಕಿನ ಪ್ರಸರಣವನ್ನು ಹೆಚ್ಚಿಸಬಹುದು ಎಂದು ಹೇಳಿದ್ದಾರೆ.
ಬೀಚ್‍ಗಳಿಗೆ ಅಂತರರಾಷ್ಟ್ರೀಯ ಮಾನ್ಯತೆ
ಉಡುಪಿ, ಅ. 11: ಉತ್ತರ ಕನ್ನಡ ಜಿಲ್ಲೆ ಹೊನ್ನಾವರದ ಕಾಸರಗೋಡು ಹಾಗೂ ಉಡುಪಿಯ ಪಡುಬಿದ್ರೆಯ ಕಡಲ ತೀರಗಳು (ಬೀಚ್) ಪ್ರತಿಷ್ಠಿತ ಅಂತರರಾಷ್ಟ್ರೀಯ ಬ್ಲೂ ಫ್ಲಾಗ್ ಮಾನ್ಯತೆ ಪಡೆದಿವೆ. ಕಾಸರಕೋಡಿನಲ್ಲಿರುವ ಇಕೋ ಬೀಚ್ ಹಾಗೂ ಪಡುಬಿದ್ರಿಯ ಬೀಚ್‍ಗಳು ತನ್ನ ಮೊದಲ ಪ್ರಯತ್ನದಲ್ಲೇ ಅಂತರರಾಷ್ಟ್ರೀಯ ಮಾನ್ಯತೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಈ ಎರಡೂ ಬೀಚ್‍ಗಳಲ್ಲಿ ಪ್ರವಾಸಿಗರು ಕುಳಿತುಕೊಳ್ಳುವ ಆಸನಗಳಿಂದ ಹಿಡಿದು ಕುಡಿಯುವ ನೀರು, ಮಕ್ಕಳ ಆಟಿಕೆಗಳು, ಜೀವರಕ್ಷಕ ಸಿಬ್ಬಂದಿ ಹಾಗೂ ಮುಖ್ಯವಾಗಿ ಕಡಲತೀರದ ಸ್ವಚ್ಛತೆ ಸೇರಿ ಎಲ್ಲವೂ ಅಚ್ಚುಕಟ್ಟಾಗಿದೆ. ಇನ್ನು ದೇಶದಲ್ಲಿ ಒಟ್ಟಾರೆ ಹನ್ನೆರಡು ಕಡಲ ತೀರಗಳು ಬ್ಲೂ ಫ್ಲಾಗ್ ಮಾನ್ಯತೆ ಪಡೆದಿದ್ದು ಕರ್ನಾಟಕ ಹೊರತುಪಡಿಸಿ ಕೇರಳದ ಕಪ್ಪಾಡ್, ಆಂಧ್ರಪ್ರದೇಶದ ಋಷಿಕೊಂಡ, ಒಡಿಶಾದ ಗೋಲ್ಡನ್ ಮತ್ತು ಅಂಡಮಾನ್‍ದ್ವೀಪದ ರಾಧಾನಗರ, ಗುಜರಾತ್‍ನ ಶಿವರಾಜಪುರ, ಡಿಯುನ ಘೋಗ್ಲಾ, ಬೀಚ್‍ಗಳಿಗೆ ಈ ಗೌರವ ದೊರಕಿದೆ.
ಹತ್ರಾಸ್ ಪ್ರಕರಣ ದಾಖಲಿಸಿದ ಸಿಬಿಐ
ಲಖನೌ, ಅ. 11: ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ಭಾನುವಾರ ಘಾಜಿಯಾಬಾದ್ ಎಸಿಬಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಿದೆ. ಸಿಬಿಐ ಇಂದು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದು, ಪ್ರಕರಣದ ತನಿಖೆಯನ್ನು ವಹಿಸಿಕೊಂಡಿದೆ ಎಂದು ಸಿಬಿಐನ ಪ್ರಕಟಣೆ ತಿಳಿಸಿದೆ. ಈ ಹಿಂದೆ ದೂರಿನ ಆಧಾರದ ಮೇಲೆ ಹತ್ರಾಸ್ ಜಿಲ್ಲೆಯ ಚಂದ್ಪಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಈ ಹಿಂದೆ ಉತ್ತರಪ್ರದೇಶ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿತ್ತು. 2012ರಲ್ಲಿ ದೆಹಲಿಯಲ್ಲಿ ನಡೆದ ನಿರ್ಭಯ ಗ್ಯಾಂಗ್ ರೇಪ್ ಮಾದರಿಯಲ್ಲೇ ಉತ್ತರ ಪ್ರದೇಶದ ಹತ್ರಾಸ್‍ನಲ್ಲಿ ನಡೆದಿದ್ದು, ಸೆ. 14 ರಂದು ಯುವತಿಯು ತಮ್ಮ ಜಮೀನಿನಲ್ಲಿ ತಾಯಿಯೊಂದಿಗೆ ಮೇವು ತರಲು ಹೋಗಿದ್ದಾಗ ನಾಲ್ವರು ಕಾಮುಕರು ಎಳೆದೊಯ್ದು ಅತ್ಯಾಚಾರವೆಸಗಿದ್ದಾರೆ.
ಕೋವಿಡ್ ಆಸ್ಪತ್ರೆಯಲ್ಲಿ ಗ್ರಂಥಾಲಯ
ಶಿವಮೊಗ್ಗ, ಅ. 11: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕೋವಿಡ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಅನುಕೂಲವಾಗುವ ದೃಷ್ಟಿಯಿಂದ ಕೋವಿಡ್ ವಾರ್ಡ್‍ನಲ್ಲಿ ಪುಟ್ಟ ಗ್ರಂಥಾಲಯದ ವ್ಯವಸ್ಥೆಯನ್ನು ಮಾಡಲಾಗಿದೆ. ಕೊರೊನಾ ಸೋಂಕಿತರಲ್ಲಿ ಆತಂಕ, ಏಕಾಂಗಿತನವನ್ನು ದೂರ ಮಾಡಿ ಮಾನಸಿಕವಾಗಿ ಸದೃಢರಾಗಿರಲು ಸಹಕಾರಿಯಾಗಲೆಂದು ಈ ಗ್ರಂಥಾಲಯ ಪ್ರಾರಂಭಿಸಲಾಗಿದೆ. ಶಿವಮೊಗ್ಗ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಸಿಮ್ಸ್) ಮತ್ತು ಮೆಗ್ಗಾನ್ ಜಿಲ್ಲಾ ಆಸ್ಪತ್ರೆಯ ನಿರ್ದೇಶಕ ಡಾ. ಶ್ರೀಧರ್ ಅವರು ಮಾತನಾಡಿ, ಸೋಂಕಿನಿಂದ ಚೇತರಿಸಿಕೊಳ್ಳುವ ಸಂದರ್ಭದಲ್ಲಿ ರೋಗಿಗಳು ವಿಶ್ರಾಂತಿ ಪಡೆಯಲು ಗ್ರಂಥಾಲಯಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳಿದ್ದಾರೆ. ಸೋಂಕಿಗೆ ಚಿಕಿತ್ಸೆ ಪಡೆಯಲು ಬರುವ ಬಹುತೇಕ ರೋಗಿಗಳು ಆತಂಕ, ಒತ್ತಡದಲ್ಲಿರುತ್ತಾರೆ. ಇಂತಹ ಸಂದರ್ಭದಲ್ಲಿ ಪುಸ್ತಕಗಳನ್ನು ಓದುವುದರಿಂದ ಒತ್ತಡ ದೂರಾಗುತ್ತದೆ ಎಂದು ತಿಳಿಸಿದ್ದಾರೆ.
ಉತ್ತರ ಕೊರಿಯಾ ಕೊರೊನಾ ಮುಕ್ತ
ಪ್ಯೊಂಗ್ಯಾಂಗ್, ಅ. 11: ಇಡೀ ವಿಶ್ವ ಕೊರೊನಾ ವೈರಸ್‍ನಿಂದ ತತ್ತರಿಸುತ್ತಿದ್ದರೆ ಉತ್ತರ ಕೊರಿಯಾ ಮಾತ್ರ ಇದುವರೆಗೆ ಕೊರೋನಾ ಸೋಂಕಿನಿಂದ ಮುಕ್ತವಾಗಿದೆ. ಸಾಂಕ್ರಾಮಿಕದ ಸಂಕಷ್ಟದ ಸಂದರ್ಭದಲ್ಲಿ ದೇಶದ ನಾಗರಿಕರು ಉತ್ತಮ ಆರೋಗ್ಯ ಕಾಳಜಿ ಕಾಪಾಡಿಕೊಂಡಿರುವುದಕ್ಕೆ ಧನ್ಯವಾದ ಹೇಳಲು ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಮಿಲಿಟರಿ ಪರೇಡ್‍ನಲ್ಲಿ ಜನತೆಯನ್ನುದ್ದೇಶಿಸಿ ಮಾತನಾಡಿದರು. ಉತ್ತರ ಕೊರಿಯಾದ ಆಡಳಿತಾರೂಢ ವರ್ಕರ್ಸ್ ಪಾರ್ಟಿಯ 75ನೇ ವರ್ಷಾಚರಣೆ ಆಚರಿಸಿಕೊಳ್ಳುತ್ತಿದ್ದು, ಈ ಸಂದರ್ಭದಲ್ಲಿ ರಾಷ್ಟ್ರದ ವಾಹಿನಿಯನ್ನುದ್ದೇಶಿಸಿ ಮಾತನಾಡಿದ ಕಿಮ್ ಜಾಂಗ್ ಉನ್, ಕೊರೊನಾ ಸೋಂಕಿಗೆ ತುತ್ತಾಗದೆ ಜನರು ಉತ್ತಮ ಆರೋಗ್ಯ ಕಾಪಾಡಿಕೊಂಡಿರುವುದಕ್ಕೆ ನಾನು ಧನ್ಯವಾದ ಹೇಳುತ್ತೇನೆ. ಈ ಯಶಸ್ಸು ನನಗೆ ತೀವ್ರ ಸಂತಸ ತಂದಿದೆ ಎಂದು ಹೇಳಿದರು.
ಗುಂಡು ಹಾರಿಸಿ ಗೋವುಗಳ ರಕ್ಷಣೆ
ಮಂಗಳೂರು, ಅ. 11: ಬೆಳ್ಳಂಬೆಳ್ಳಗೆ ಗಾಳಿಯಲ್ಲಿ ಗುಂಡು ಹಾರಿಸಿ ಅಕ್ರಮವಾಗಿ ಸಾಗಿಸುತ್ತಿದ್ದ ಆರು ಗೋವುಗಳನ್ನು ಪೊಲೀಸರು ರಕ್ಷಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ಶಿರ್ತಾಡಿಯ ಔದಲ್ ಬಳಿ ನಡೆದಿದೆ. ಗೋವುಗಳನ್ನು ಸಾಗಿಸಲಾಗುತ್ತಿದ್ದ ವಾಹನವನ್ನು ನಿಲ್ಲಿಸಲು ಪೊಲೀಸರು ಸೂಚಿಸಿದ್ದಾರೆ. ಆದರೆ, ಆರೋಪಿಗಳು ಪೊಲೀಸರ ಮಾತಿಗೆ ಮನ್ನಣೆ ನೀಡದೇ, ಪೊಲೀಸ್ ಜೀಪಿಗೆ ಡಿಕ್ಕಿ ಹೊಡೆಯಲು ಯತ್ನಿಸಿದ್ದಾರೆ. ತಕ್ಷಣ ಅವರನ್ನು ಬೆನ್ನಟ್ಟಿದ ಪೊಲೀಸ್ ಇನ್ಸ್‍ಪೆಕ್ಟರ್ ಬಿ.ಎಸ್. ದಿನೇಶ್ ಅವರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಗುಂಡಿನ ಸದ್ದು ಕೇಳಿಬರುತ್ತಿದ್ದಂತೆ ಕಾರು, ಗೋವುಗಳನ್ನು ಬಿಟ್ಟು ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಸದ್ಯ ಪೊಲೀಸರು ಕಾರು, ಆರು ಗೋವುಗಳನ್ನು ವಶಕ್ಕೆ ಪಡೆದಿದ್ದಾರೆ.