ಮಡಿಕೇರಿ, ಅ. 11: ಪ್ರಸ್ತುತ ಭಾರತ ದೇಶದಲ್ಲೇ ಏಕೈಕ ಏಲಕ್ಕಿ ಸಂಶೋಧನಾ ಕೇಂದ್ರ ಆಗಿರುವ ಅಪ್ಪಂಗಳದಲ್ಲಿ ಕೊಡಗು ಸೇರಿದಂತೆ, ಜಿಲ್ಲೆಗೆ ಬರುವ ಪ್ರವಾಸಿ ಬೇಸಾಯಗಾರರನ್ನು ಪ್ರೋತ್ಸಾಹಿಸುವ ಸಲುವಾಗಿ ಉತ್ತಮ ತಳಿಯ ಏಲಕ್ಕಿಯೊಂದಿಗೆ, ಒಳ್ಳೆಮೆಣಸು (ಕಾಳುಮೆಣಸು) ಗಿಡಗಳನ್ನು ಅಭಿವೃದ್ಧಿಗೊಳಿಸಿ ಸೂಕ್ತ ಬೆಲೆಗೆ ಒದಗಿಸಲಾಗುತ್ತಿದೆ. ಪ್ರಸಕ್ತ ಅಪ್ಪಂಗಳದಲ್ಲಿ ನಾಲ್ಕು ರೀತಿಯ ಏಲಕ್ಕಿ ತಳಿಗಳನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ.
ಈ ಪೈಕಿ ರೈತರಿಗೆ ಹೆಚ್ಚು ಅನುಕೂಲಕರವಾಗಿರುವ ಮಲಬಾರ್ ಜಾತಿಯ ಅಪ್ಪಂಗಳ -1 ಸುವಾಸಿನಿ ತಳಿ ಅಭಿವೃದ್ಧಿಗೊಳಿಸಿದ್ದು, ಈ ತಳಿಯನ್ನು ಕರ್ನಾಟಕದ ಏಲಕ್ಕಿ ಬೆಳೆಗೆ ಸೂಕ್ತವಿರುವ ಎಲ್ಲೆಡೆ ಬೆಳೆಯಲು ಅವಕಾಶವಿದ್ದು, ಒಂದು ಹೆಕ್ಟೇರ್‍ನಲ್ಲಿ 745 ಕಿ.ಗ್ರಾಂ. ಇಳುವರಿ ನಿರೀಕ್ಷೆ ಇರುವದಾಗಿ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಸಾಂಬಾರ ರಾಣಿ ಎಂಬ ಹೆಗ್ಗಳಿಕೆ ಇರುವ ಏಲಕ್ಕಿಯ ಫಸಲು ಕೈಗೆ ಎಟಕುವ ತನಕ ಹಾಗೂ ಗಿಡಗಳ ಪೋಷಣೆಗಾಗಿ ವರ್ಷಪೂರ್ತಿ ಗಮನ ಹರಿಸುತ್ತಾ, ಕೊಯಿಲು ಮಾಡಿದ ಕಾಯಿಗಳನ್ನು ಹದ ಬಿಸಿಲು ಅಥವಾ ಬೆಂಕಿ ಶಾಖದಿಂದ ಒಣಗಿಸಬೇಕಾಗುತ್ತದೆ. ಆಗ ಮಾತ್ರ ಏಲಕ್ಕಿ ಸುವರ್ಣ ವರ್ಣದ ಸಿಪ್ಪೆಯೊಂದಿಗೆ ಬೀಜಗಳು ಪರಿಮಳ ಹೊರಸೂಸಲಿವೆ ಎಂದು ಅಪ್ಪಂಗಳದ ತಜ್ಞರ ಅನಿಸಿಕೆಯಾಗಿದೆ.
ಅದೇ ರೀತಿ ಅವಿನಾಶ್ ತಳಿ ಕೂಡ ಮಲಬಾರ್ ಜಾತಿಗೆ ಸೇರಿದ್ದು, ಇದನ್ನು ವಿಶೇಷವಾಗಿ ಕೊಡಗು, ಹಾಸನ, ಚಿಕ್ಕಮಗಳೂರು ಹಾಗೂ ಕೇರಳದ ಉತ್ತರ ವಯನಾಡ್ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ. ಇದು ಕೂಡ ಹೆಕ್ಟೇರ್‍ವೊಂದಕ್ಕೆ ಹವಾಮಾನ ಉತ್ತಮವಿದ್ದರೆ 847 ಕೆ.ಜಿ. ಫಸಲು ನಿರೀಕ್ಷಿಸಬಹುದು. ಅಂತೆಯೇ ಮಲಬಾರ್ ಜಾತಿಯ ವಿಜೇತಾ ತಳಿ ಕಟ್ಟೆರೋಗವನ್ನು ಸಹಿಸುವ ಶಕ್ತಿಯೊಂದಿಗೆ ಕೊಡಗು ಹಾಗೂ ಮಲೆನಾಡು ಜಿಲ್ಲೆಗಳ ಸಹಿತ ಕೇರಳದ ವಯನಾಡ್ ಮುಂತಾದೆಡೆಗಳಲ್ಲಿ ಬೇಡಿಕೆ ಹೊಂದಿದೆ.
ಇನ್ನು ವಿಶೇಷವಾಗಿ ಮಲಬಾರ್ ಜಾತಿಯ ಅಪ್ಪಂಗಳ-2 ತಳಿಯು ಸ್ವಲ್ಪ ಮಟ್ಟಿಗೆ ಕಟ್ಟೆರೋಗ ನಿಯಂತ್ರಣಗೊಳಿಸಿ ಫಸಲು ನೀಡುವ ಸಾಮಥ್ರ್ಯದಿಂದ ಕೂಡಿದ್ದು, ವಿವಿಧೆಡೆ ಬೆಳೆಯಲಾಗುತ್ತಿದೆ. ಒಟ್ಟಿನಲ್ಲಿ ಭಾರತದಲ್ಲಿ ಅಭಿವೃದ್ಧಿಗೊಂಡಿರುವ 16ಕ್ಕೂ ಅಧಿಕ ಜಾತಿಯ ಏಲಕ್ಕಿ ತಳಿಗಳನ್ನು ನಾನಾ ಭಾಗಗಳಲ್ಲಿ ರೈತರು ಬೇಸಾಯ ನಿರತರಾಗಿದ್ದು, ಅಂತಹವರಿಗೆ ಕಾಲಕಾಲಕ್ಕೆ ಸಂಶೋಧನಾ ಕೇಂದ್ರದಿಂದ ಸೂಕ್ತ ಸಲಹೆ ನೀಡಲಾಗುವದು ಎಂದು ಅಪ್ಪಂಗಳದ ತಜ್ಞರುಗಳಾದ ಡಾ. ಅಂಕೇಗೌಡ ಹಾಗೂ ಡಾ. ಹೊನ್ನಪ್ಪ ಮಾಹಿತಿ ನೀಡಿದ್ದಾರೆ.
ಒಳ್ಳೆಮೆಣಸು: ಅಪ್ಪಂಗಳದ ವಿಶಾಲ 42 ಎಕರೆ ಪ್ರದೇಶದಲ್ಲಿ ಏಲಕ್ಕಿಯೊಂದಿಗೆ ಒಳ್ಳೆಮೆಣಸು ಬಳ್ಳಿಗಳನ್ನು ಅಭಿವೃದ್ಧಿಗೊಳಿಸಿ ಕೃಷಿಕರಿಗೆ ಒದಗಿಸುವ ಪ್ರಯತ್ನ ಮುಂದುವರೆದಿದೆ. ಚೆಟ್ಟಳ್ಳಿಯಲ್ಲಿರುವ ಕೇಂದ್ರ ಸರಕಾರದ ತೋಟಗಾರಿಕಾ ಸಸ್ಯಕ್ಷೇತ್ರದ ಒಂದಿಷ್ಟು ಪ್ರದೇಶವನ್ನು ಒಳ್ಳೆಮೆಣಸು ಅಭಿವೃದ್ಧಿಗಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.
ಸರ್ಪಂತಳಿ ಅಭಿವೃದ್ಧಿ: ಅಪ್ಪಂಗಳದಲ್ಲಿ ವಿಶೇಷ ಪ್ರಯತ್ನದಿಂದ ರೈತರು ಬೇಡಿಕೆ ಸಲ್ಲಿಸುವ ಸರ್ಪಂತಳಿಯನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. ಒಳ್ಳೆಮೆಣಸು ಬಳ್ಳಿಯ ಗಂಟಿಯನ್ನು ಒಂದು ತೊಟ್ಟೆಯೊಳಗೆ ಹದಗೊಳಿಸಿದ ಕಾಡುಮಣ್ಣಿನಲ್ಲಿ ನೆಟ್ಟು ಅದು ಚಿಗುರೊಡೆದು ಬೆಳೆಯತೊಡಗಿದಂತೆ, ಪಕ್ಕದಲ್ಲಿ ಮತ್ತೊಂದು ತೊಟ್ಟೆಗೆ ಸಂಪರ್ಕ ಕಲ್ಪಿಸಲಾಗುತ್ತದೆ. ಈ ರೀತಿ ಹತ್ತಾರು ತೊಟ್ಟೆಗಳಿಗೆ ಬಳ್ಳಿಯನ್ನು ವಿಸ್ತರಿಸುತ್ತಾ, ಪ್ರತಿ ತೊಟ್ಟೆಯಲ್ಲಿ ಬಳ್ಳಿಯ ಬೇರು ಹರಡುವಂತೆ ಗಮನ ಕೊಡಲಾಗುತ್ತದೆ. ಬಳಿಕ ಗಿಡಗಳನ್ನು ಪ್ರತ್ಯೇಕ ತುಂಡರಿಸಿ ಬೇರ್ಪಡಿಸುವ ಮೂಲಕ ನೆಡುವ ಸಲುವಾಗಿ ರೈತರಿಗೆ ಒದಗಿಸಲಾಗುತ್ತದೆ.
ಅಲ್ಲದೆ, ಹೂ ಕುಂಡಗಳಲ್ಲಿ ಕೂಡ ಕಾಳುಮೆಣಸು ಬೆಳೆಯುವ ಪ್ರಯತ್ನ ಮುಂದುವರೆದಿದ್ದು, ಇದಕ್ಕೆ ‘ಬುಶ್ ಪೆಪ್ಪರ್’ ಅಥವಾ ಪೊದೆಗಿಡ ಎಂದು ಹೆಸರಿಸಲಾಗಿದೆ. ಸಾಮಾನ್ಯವಾಗಿ ಮನೆಯಲ್ಲಿ ಹೂಕುಂಡಗಳಲ್ಲಿ ಈ ಫಸಲು ಹೊಂದುವ ಅವಕಾಶ ಲಭ್ಯ.