(ತಾ. 10 ರ ಸಂಚಿಕೆಯಿಂದ)

ಒಂದೋ ಹೂಮಳೆ ಸರಿಯಾದ ಸಮಯಕ್ಕೆ ಬಾರದೆ ಇಳುವರಿ ಕೊರತೆಯಾದರೆ, ಹೂಮಳೆಯಾದರೂ ಜುಲೈ - ಆಗಸ್ಟ್ ತಿಂಗಳಲ್ಲಿ ಸುರಿಯುವ ಭಾರೀ ಮಳೆಗೆ ಕಾಫಿ ಕಾಯಿಗಳು ಉದುರಿ ನೆಲಕಚ್ಚುವ ಆತಂಕ 2018, 2019 ಮತ್ತು ಇದೀಗ 2020 ರ ಅವಧಿಯಲ್ಲಿ ಸುರಿಯುತ್ತಿರುವ ಮಳೆಗೆ ಪ್ರಕೃತಿಯೇ ಮುನಿದು ಇರುವ ಅಷ್ಟೋ ಇಷ್ಟೋ ತೋಟಗಳನ್ನು ಭೂಕುಸಿತದ ಪರಿಣಾಮ ಕಳೆದುಕೊಂಡು ಬದುಕು ಮೂರಾಬಟ್ಟೆಯಾಗಿದೆ. ಮುಂಬರುವ ವರ್ಷಗಳು ಮತ್ತಷ್ಟು ಆತಂಕ ಸೃಷ್ಟಿಸುವುದೋ ಎಂಬ ಭಯದಲ್ಲೇ ಬೆಳೆಗಾರ ದಿನ ಕಳೆಯುತ್ತಿದ್ದಾನೆ. ಇಷ್ಟೆಲ್ಲಾ ಅವಾಂತರಗಳಿದ್ದರೂ ತೋಟ ಮಾಲೀಕರ ಮನಸ್ಥಿತಿಯನ್ನು ಪರಿಗಣಿಸದೇ ಕಾರ್ಮಿಕ ವರ್ಗ ತಾವೇ ನಿರ್ಧರಿಸಿಕೊಳ್ಳುವ ಕೂಲಿಯನ್ನು ಮುಲಾಜಿಲ್ಲದೆ ಪಡೆದುಕೊಳ್ಳುವ ಧಾವಂತ. ಉದಾಸೀನ ಮಾಡಿದರೆ ಇರುವ ತೋಟ ಹಾಳಾಗುವುದಲ್ಲಾ ಎಂಬ ಕಾಳಜಿಯಿಂದ ಇರುವ ನೋವನ್ನೆಲ್ಲ ತನ್ನ ಒಡಲೊಳಗೆ ಅದುಮಿಟ್ಟುಕೊಂಡೇ ತೋಟ ನಿರ್ವಹಣೆ ಮಾಡಿಕೊಂಡು ಬರುತ್ತಿದ್ದಾರೆ. ಇವೆಲ್ಲವುಗಳ ಜೊತೆಗೆ ಬೆಳೆಗಾರರಿಗೆ ಬಲು ದೊಡ್ಡ ದುರಂತವಾಗಿ ಕಾಡುತ್ತಿರುವುದು ಕಾಡು ಪ್ರಾಣಿಗಳ ದಾಂಧಲೆ. ಕಾಡಿನಲ್ಲಿರಬೇಕಾದ ಪ್ರಾಣಿಗಳು ಈಗ ಕಾಫಿ ತೋಟಗಳಿಗೆ ನುಗ್ಗಿ ದಾಂಧಲೆ ಮಾಡುವುದು, ತೋಟದೊಳಗೆ ಗುಂಪು ಗುಂಪಾಗಿ ಬೀಡು ಬಿಡುವುದು, ಮನೆಯಂಗಳಕ್ಕೆ ದಾಳಿ ಇಡುವುದು ಇವೆಲ್ಲಾ ಇಂದಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಇದರಿಂದ ಅದೆಷ್ಟೋ ಸಾವು ನೋವುಗಳೂ ಸಂಭವಿಸಿಬಿಟ್ಟಿದೆ.

ಕೆಲವು ವರ್ಷಗಳ ಹಿಂದೆ ‘ಆನೆ-ಮಾನವ ಸಂಘರ್ಷ’ ಎಂಬ ವಿಷಯ ಮಹತ್ವ ಪಡೆದುಕೊಂಡಿತ್ತು. ಒಂದಷ್ಟು ವ್ಯಕ್ತಿಗಳು, ಒಂದಷ್ಟು ಸಂಘಟನೆಗಳು ಈ ವಿಷಯವನ್ನು ಬಂಡವಾಳವಾಗಿಸಿಕೊಂಡು ಒಂದಷ್ಟು ದಿನ ಬೀದಿಗಿಳಿದದ್ದೂ ಆಯಿತು. ಕಾಡಿನಲ್ಲಿರಬೇಕಾದ ಆನೆ ತೋಟಕ್ಕೆ ನುಗ್ಗಿ ಕಾಫಿ ಗಿಡಗಳನ್ನು ನಾಶಪಡಿಸುವುದು, ಅಮಾಯಕ ಜನರ ಮೇಲೆ ದಾಳಿ ನಡೆಸಿ ಸಾವು-ನೋವುಗಳಾದಾಗ ಪ್ರತಿಭಟನೆ, ಹೋರಾಟದ ಅಬ್ಬರ ಕೇಳಿ ಸಂಬಂಧಪಟ್ಟ ಅರಣ್ಯ ಇಲಾಖೆ, ಸರಕಾರ ಒಂದಷ್ಟು ಪರಿಹಾರ ನೀಡಿ, ಮಾಡಲಾಗದ ಆಶ್ವಾಸನೆಗಳನ್ನು ನೀಡಿ ಕೈತೊಳೆದುಕೊಂಡು ಬೀಸೊ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಪರಿಹಾರವೂ ಸರ್ವೇ ಸಾಮಾನ್ಯವಾಗಿಬಿಟ್ಟಿದೆ.

ಈ ಆನೆ-ಮಾನವ ಸಂಘರ್ಷವನ್ನು ಇಲ್ಲವಾಗಿಸುವ ನಿಟ್ಟಿನಲ್ಲಿ ಸರಕಾರಗಳು, ಅಧಿಕಾರಿಗಳು ಒಂದಷ್ಟು ಯೋಜನೆಗಳನ್ನು ರೂಪಿಸಿ ಎಲ್ಲೋ ಒಂದಷ್ಟು ಕಡೆ ಕಂದಕ, ಸೋಲಾರ್ ವಿದ್ಯುತ್ ಬೇಲಿ, ರೈಲು ಕಂಬಿ ಬೇಲಿ ಹಾಕಿ ಪ್ರಯೋಗ ನಡೆಸಿದ್ದೂ ಆಯ್ತು. ಆದರೆ ಇದಕ್ಕೆಲ್ಲಾ ‘ಕ್ಯಾರೇ’ ಎನ್ನದ ಕಾಡಿನ ಆನೆಗಳು ತಮ್ಮ ಬುದ್ಧಿಶಕ್ತಿಯಿಂದ ಅವನ್ನೆಲ್ಲಾ ದಾಟಿ ಬಂದು ‘ನೀವಿನ್ನೂ ನಮ್ಮನ್ನು ಕಾಡಿನೊಳಗೇ ತಡೆಯುವಂತಹ ಶಾಶ್ವತ ಉಪಾಯ ಕಂಡುಹಿಡಿದಿಲ್ಲಾ...’ ಎಂದು ಅಣಕಿಸುತ್ತಾ ‘ನಾವು ನಡೆದದ್ದೇ ದಾರಿ’ ಎಂದು ದಿನೇ ದಿನೇ ತಮ್ಮ ಹಾವಳಿಯನ್ನು ಹೆಚ್ಚಿಸುತ್ತಲೇ ಇವೆ.

ಇಲ್ಲಿ ಕೆಲವೊಂದು ಮಾತುಗಳು ಕೇಳಿಬರುವುದೇನೆಂದರೆ, ಜನರು ಕಾಡು ಪ್ರಾಣಿಗಳ ವಾಸಸ್ಥಾನವನ್ನು ಅತಿಕ್ರಮಿಸಿಕೊಂಡಿದ್ದಾರೆ... ಆನೆ ನಡೆದಾಡುವ ಹಾದಿ... ಆನೆ ಕಾರಿಡಾರ್‍ಗಳಿಗೆ ಇದರಿಂದಾಗಿ ತಡೆಮಾಡಲಾಗಿದೆ... ಹೀಗಾಗಿ ಕಾಡು ಪ್ರಾಣಿಗಳು, ಕಾಡಾನೆಗಳು ತೋಟಗಳಿಗೆ, ಜನವಸತಿ ಪ್ರದೇಶಗಳಿಗೆ ಲಗ್ಗೆ ಇಡುವಂತಾಗಿದೆ...’. ಒಪ್ಪುವಂತಹ ಮಾತೇ.

ಆದರೆ ಜಿಲ್ಲೆಯ ಅದೆಷ್ಟು ಪ್ರದೇಶ ಅತಿಕ್ರಮಿಸಲ್ಪಟ್ಟಿದೆ, ಅದೆಷ್ಟು ಆನೆ ಕಾರಿಡಾರ್‍ಗಳಿಗೆ ತಡೆಯೊಡ್ಡಲ್ಪಟ್ಟಿದೆ ಎಂಬ ಪ್ರಶ್ನೆ ಇಲ್ಲಿ ಕಾಡುತ್ತದೆ. ಜಿಲ್ಲೆಯ ಬಹುಪಾಲು ಗಡಿ ಗ್ರಾಮಗಳು ಅರಣ್ಯದಂಚಿನಲ್ಲಿವೆ. ಅಂತಹ ಗ್ರಾಮಗಳ ಮೂಲನಿವಾಸಿಗಳ ಜಮೀನುಗಳೂ ಅರಣ್ಯ ಗಡಿಯಲ್ಲಿವೆ. ಹೀಗಿರುವಾಗ ಆ ಪ್ರದೇಶಗಳ ಸ್ವಲ್ಪ ಅರಣ್ಯ ಭಾಗಗಳು ತಿಳಿದೋ ತಿಳಿಯದೆಯೋ ಅತಿಕ್ರಮಿಸಲ್ಪಟ್ಟಿರುತ್ತದೆ. ಅಂತಹ ಪ್ರದೇಶಗಳಲ್ಲಿ ಆಯಾ ಜಮೀನಿನ ಒಡೆಯರು, ತೋಟ ಮಾಲೀಕರು ಸಹಜವಾಗಿ ತಮ್ಮ ಹದ್ದುಬಸ್ತು ಗುರುತಿಸಿಕೊಳ್ಳಲು ಮತ್ತು ರಕ್ಷಿಸಿಕೊಳ್ಳಲು ಬೇಲಿ ನಿರ್ಮಿಸಿಕೊಳ್ಳುತ್ತಾರೆ. ಹಾಗೆಂದ ಮಾತ್ರಕ್ಕೆ ಇಡೀ ಅರಣ್ಯ ಪ್ರದೇಶವನ್ನೇ ಅತಿಕ್ರಮಿಸಿಕೊಳ್ಳಲಾಗಿದೆ ಎಂದು ಹೇಳುವುದು ಎಷ್ಟರಮಟ್ಟಿಗೆ ಸರಿ?

(ಮುಂದುವರಿಯುವುದು) - ಮಾದೇಟಿರ ಬೆಳ್ಯಪ್ಪ.