ಸಿದ್ದಾಪುರ, ಅ. 11: ಪ್ರವಾಹ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಗುರುತಿಸಿರುವ ಜಾಗದಲ್ಲಿ ಇರುವ ಮರಗಳನ್ನು ಕಡಿಯಲು ಒತ್ತಾಯಿಸಿ ನೆಲ್ಯಹುದಿಕೇರಿಯ ಸಂತ್ರಸ್ತರ ಹೋರಾಟ ಸಮಿತಿಯ ವತಿಯಿಂದ ತಾ. 12 ರಂದು (ಇಂದು) ಮಡಿಕೇರಿ ವಿಭಾಗದ ಉಪ ಸಂರಕ್ಷಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೋರಾಟ ಸಮಿತಿಯ ಅಧ್ಯಕ್ಷ ಪಿ.ಆರ್. ಭರತ್ ಹಾಗೂ ಕಾರ್ಯದರ್ಶಿ ಮಣಿ ಮಹಮ್ಮದ್ ಹೇಳಿಕೆ ನೀಡಿದ್ದಾರೆ.
2019ರ ಆಗಸ್ಟ್ ತಿಂಗಳಿನಲ್ಲಿ ಸುರಿದ ಮಹಾಮಳೆಯಿಂದಾಗಿ ಕಾವೇರಿ ನದಿಯಲ್ಲಿ ಪ್ರವಾಹದ ನೀರು ಏರಿಕೆಯಾದ ಹಿನ್ನೆಲೆಯಲ್ಲಿ ಪ್ರವಾಹಕ್ಕೆ ಸಿಲುಕಿ ನೆಲ್ಯಹುದಿಕೇರಿ ಗ್ರಾ.ಪಂ ವ್ಯಾಪ್ತಿಯ ಬೆಟ್ಟದಕಾಡು ಹಾಗೂ ಕುಂಬಾರಗುಂಡಿ ಭಾಗದಲ್ಲಿ ನೂರಾರು ಮನೆಗಳು ಹಾನಿಗೊಳಗಾಗಿತ್ತು. ಈ ಹಿನ್ನೆಲೆಯಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದು ಪುನರ್ವಸತಿ ಕಲ್ಪಿಸಿಕೊಡುವಂತೆ ಒತ್ತಾಯಿಸಿದ್ದರು. ನಂತರ ಸರ್ಕಾರದ ಆದೇಶದ ಮೇರೆಗೆ ಅರೆಕಾಡು ಬಳಿ ಅಭ್ಯತ್‍ಮಂಗಲ ಗ್ರಾಮದ ಸರ್ವೆ ನಂ 87/2ರಲ್ಲಿ 8.22 ಏಕರೆ ಹಾಗೂ ಖಾಸಗಿ ಸಂಸ್ಥೆಯ ಕಾಫಿ ತೋಟದಲ್ಲಿ 1 ಎಕರೆ ಅಧಿಕ ಜಾಗವನ್ನು ಜಿಲ್ಲಾಡಳಿತವು ಒತ್ತುವರಿದಾರರಿಂದ ವಶಕ್ಕೆ ಪಡೆದುಕೊಂಡಿತ್ತು. ಜಿಲ್ಲಾಡಳಿತವು ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಆ ಜಾಗದಲ್ಲಿ 144 ಫಲಾನುಭವಿಗಳಿಗೆ ಲಾಟರಿ ಮುಖಾಂತರ ನಿವೇಶನವನ್ನು ಹಂಚಿಕೆ ಮಾಡಿ ವರ್ಷಗಳೇ ಕಳೆದಿದೆ ಎಂದು ತಿಳಿಸಿದರು.
ಆದರೆ ಆ ಜಾಗದಲ್ಲಿರುವ ಮರಗಳನ್ನು ಅರಣ್ಯ ಇಲಾಖಾ ಅಧಿಕಾರಿಗಳು ಈವರೆಗೂ ಕಡಿಯದೇ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನೆಲ್ಲಿಹುದಿಕೇರಿಯ ಸಂತ್ರಸ್ತರ ಹೋರಾಟ ಸಮಿತಿಯ ವತಿಯಿಂದ ತಾ. 12 ರಂದು ಮಡಿಕೇರಿ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಎದುರು ಬೆ. 11 ಗಂಟೆಗೆ ಪ್ರತಿಭಟನೆ ನಡೆಸಲಾಗುವುದೆಂದು ಭರತ್ ತಿಳಿಸಿದ್ದಾರೆ.