ಮಡಿಕೇರಿ, ಅ. 10: ತಲಕಾವೇರಿ ತುಲಾ ಸಂಕ್ರಮಣ ತೀರ್ಥೋದ್ಭವ ತಾ. 17 ರಂದು ಜರುಗಲಿದ್ದು ಪೂಜಾ ಕಾರ್ಯದಲ್ಲಿ ಯಾವುದೇ ಚ್ಯುತಿಯುಂಟಾಗದಂತೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಶಾಸಕ ಕೆ.ಜಿ ಬೋಪಯ್ಯ ಸೂಚನೆ ನೀಡಿದರು.ಭಾಗಮಂಡಲ ಸಂಗಮದ ಬಳಿಯ ಸಭಾಂಗಣದಲ್ಲಿ ನಡೆದ ತುಲಾ ಸಂಕ್ರಮಣ ತೀರ್ಥೋದ್ಭವ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರುಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಹೆಚ್ಚಳವಾಗುತ್ತಿದ್ದು, ಈ ಹಿನ್ನೆಲೆ ಬಹಳ ಎಚ್ಚರಿಕೆಯಿಂದ ಜನ ದಟ್ಟಣೆ ಹೆಚ್ಚಾಗದೆ ಸರ್ಕಾರದ ನಿಯಮದಂತೆ ಜಾತ್ರಾ ಮಹೋತ್ಸವ ವನ್ನು ಸಾಂಪ್ರದಾಯಿಕವಾಗಿ ಆಚರಿಸಬೇಕಿದೆ ಎಂದರು. ಮಡಿಕೇರಿ-ಭಾಗಮಂಡಲ-ತಲಕಾವೇರಿ, ಕರಿಕೆ-ಭಾಗಮಂಡಲ, ವೀರಾಜಪೇಟೆ-ನಾಪೆÇೀಕ್ಲು ರಸ್ತೆ ಗುಂಡಿ ಮುಚ್ಚುವ ಕೆಲಸವಾಗಬೇಕು. ಸದ್ಯ 2-3 ದಿನಗಳ ಕಾಲ ವ್ಯಾಪಕವಾಗಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಅದನ್ನು ಗಮನಿಸಿ ತಾ. 15ರ ಒಳಗೆ ಗುಂಡಿ ಮುಚ್ಚುವ ಕಾರ್ಯವನ್ನು ಕೈಗೊಳ್ಳುವಂತೆ ಲೋಕೋಪಯೋಗಿ ಇಲಾಖೆಗೆ ಸೂಚಿಸಿದರು. ಭಾಗಮಂಡಲದಿಂದ ತಲಕಾವೇರಿವರೆಗೆ ಬೀದಿ ದೀಪ ಅಳವಡಿಸುವಂತೆ ಸೆಸ್ಕ್‍ಗೆ ಸೂಚನೆ ನೀಡಿದರು.

ಪರೀಕ್ಷಾ ವರದಿ ಕಡ್ಡಾಯ: ಕೆಜಿಬಿ

ಕಾವೇರಿ ತೀರ್ಥೋದ್ಭವ ಸಂದರ್ಭ ಧಾರ್ಮಿಕ ಪೂಜಾ ವಿಧಿವಿಧಾನಗಳಿಗೆ ಯಾವುದೇ ಚ್ಯುತಿ ಬಾರದ ರೀತಿಯಲ್ಲಿ ಅಚ್ಚುಕಟ್ಟಾಗಿ ಆಚರಣೆ ಮಾಡಲು ಸರ್ವರ ಸಹಕಾರ ಅಗತ್ಯ ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು. ಕೊರೊನಾ ಹಿನ್ನೆಲೆಯಲ್ಲಿ ಜನ ಹೆಚ್ಚಿನ ಸಂಖ್ಯೆಯಲ್ಲಿ ಬರುವುದನ್ನು ನಿಯಂತ್ರಿಸಬೇಕಿದೆ. ವಿಕೋಪ ನಿರ್ವಹಣಾ ಕಾಯ್ದೆಯ ಉಲ್ಲಂಘನೆಯಾಗದಂತೆ ಎಚ್ಚರ ವಹಿಸಬೇಕಿದೆ. ಹೊರ ರಾಜ್ಯದಿಂದ ಬರುವವರು ಕಡ್ಡಾಯವಾಗಿ ಕೊರೊನಾ ಪರೀಕ್ಷೆ ವರದಿ ತರಬೇಕು. ನಮ್ಮ ಜಿಲ್ಲೆಯ ಗಡಿಯಲ್ಲಿ ವರದಿ ಪರಿಶೀಲಿಸಿ ಅವರನ್ನು ಒಳಬಿಡುವಂತಹ ಕೆಲಸವಾಗಬೇಕು. ಸ್ಥಳೀಯರು ಮಕ್ಕಳು ಹಾಗೂ ವೃದ್ಧರನ್ನು ತೀರ್ಥೋದ್ಭವದಂದು ಕಾವೇರಿ ಕ್ಷೇತ್ರಕ್ಕೆ ಕರೆ ತರದಿದ್ದರೆ ಒಳಿತು. ಶೀತ ವಾತಾವರಣದಲ್ಲಿ ಕೊರೊನಾ ಹೆಚ್ಚಾಗಿ ಹರಡುತ್ತದೆ ಎಂದು ತಜ್ಞರು ತಿಳಿಸಿರುವ ಹಿನ್ನೆಲೆಯಲ್ಲಿ ತೀರ್ಥೋದ್ಭವದ ದಿನ ಒಂದು ದಿನದಮಟ್ಟಿಗೆ ಹೊರ ಜಿಲ್ಲೆ, ಹೊರ ರಾಜ್ಯದವರು ಸ್ವಯಂ ನಿಯಂತ್ರಣದೊಂದಿಗೆ ಸಹಕರಿಸ ಬೇಕಿದೆ. ನಂತರದ ಒಂದು ತಿಂಗಳ ಕಾಲ ಮಾತೆ ಕಾವೇರಿಯ ದರ್ಶನಕ್ಕೆ ಎಲ್ಲರಿಗೂ ಅವಕಾಶ ಸಿಗಲಿದೆ

ಎಂದು ಬೋಪಯ್ಯ ಹೇಳಿದರು. ಈ ಬಾರಿ ಯಾವುದೇ ವಾಹನಗಳಿಗೆ ವಿಶೇಷ ಪಾಸ್ ವ್ಯವಸ್ಥೆ ಇರುವುದಿಲ್ಲ ಎಂದರು.

ದುರ್ವರ್ತನೆ ವಿರುದ್ಧ

ದೂರು ದಾಖಲಿಸಿ

ತಲಕಾವೇರಿ-ಭಾಗಮಂಡಲ ಪವಿತ್ರ ಕ್ಷೇತ್ರವಾಗಿದ್ದು, ಇಲ್ಲಿಗೆ ಬರುವವರು ಸಭ್ಯತೆಯೊಂದಿಗೆ ‘ಭಕ್ತಿ ಪೂರ್ವಕವಾಗಿ ನಡೆದುಕೊಳ್ಳಬೇಕು. ಒಂದು ವೇಳೆ ದುರ್ವರ್ತನೆ ತೋರಿದರೆ ಮುಲಾಜಿಲ್ಲದೆ ಅಂತವರ ವಿರುದ್ಧ ದೂರು ದಾಖಲಿಸಿ ಕ್ರಮಕೈಗೊಳ್ಳಬೇಕು. ಇದು ಪ್ರವಾಸಿ ತಾಣವಲ್ಲ; ಪುಣ್ಯಕ್ಷೇತ್ರ ಎಂಬದನ್ನು ಎಲ್ಲರೂ ಅರಿತುಕೊಳ್ಳಬೇಕು. ಈ ನಿಟ್ಟಿನಲ್ಲಿ ಪೊಲೀಸರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗುವಂತೆ ಡಿವೈಎಸ್‍ಪಿ ದಿನೇಶ್ ಕುಮಾರ್ ಅವರಿಗೆ ಕೆ.ಜಿ. ಬೋಪಯ್ಯ ಸೂಚನೆ ನೀಡಿದರು.

ವಿಶೇಷ ಬಸ್‍ಗಳಿಗೆ

ಅನುಮತಿ ಕೊಡಬೇಡಿ

ಈ ಬಾರಿ ಕಾವೇರಿ ಜಾತ್ರೆಯನ್ನು ಕೊರೊನಾ ಹಿನ್ನೆಲೆಯಲ್ಲಿ ಹೆಚ್ಚಿನ ಜನಸಾಂದ್ರತೆ ಉಂಟಾಗದ ರೀತಿಯಲ್ಲಿ ಆಚರಣೆ ಮಾಡಬೇಕಿದೆ. ಆದ್ದರಿಂದ ಈ ಬಾರಿ ಯಾವುದೇ ಕಾರಣಕ್ಕೂ ವಿಶೇಷ ಬಸ್‍ಗಳಿಗೆ ಅನುಮತಿ ನೀಡಬಾರದು. ಈ ಬಗ್ಗೆ ಪ್ರಾದೇಶಿಕ ಸಾರಿಗೆ

(ಮೊದಲ ಪುಟದಿಂದ) ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ಸೂಚಿಸಿದ ಬೋಪಯ್ಯ, ಸಾರಿಗೆ ಇಲಾಖೆಯಿಂದ ಅನಗತ್ಯ ಬಸ್‍ಗಳನ್ನು ಬಳಸುವ ಅಗತ್ಯವಿಲ್ಲ. ಇರುವ ವ್ಯವಸ್ಥೆಯನ್ನೇ ಸಮರ್ಪಕವಾಗಿ ನಿಭಾಯಿಸುವಂತೆ ಡಿಪೋ ವ್ಯವಸ್ಥಾಪಕಿ ಗೀತಾ ಅವರಿಗೆ ಸೂಚಿಸಿದರು.

ಹೆಚ್ಚಿನ ಜನ ಬಾರದಂತೆ ಪ್ರಚಾರವಾಗಲಿ

ಕಾವೇರಿ ಜಾತ್ರೆಗೆ ಬರುವವರನ್ನು ಕೊರೊನಾ ನಿಯಮದಡಿ ನಿಯಂತ್ರಿಸುವುದು ಅಷ್ಟೊಂದು ಸುಲಭವಲ್ಲ. ಭಕ್ತಿಯಿಂದ ಬರುವ ಭಕ್ತಾದಿಗಳನ್ನು ಕೊರೊನಾ ಹೆಸರಿನಲ್ಲಿ ನಿಯಂತ್ರಣಕ್ಕೆ ತರುವ ಕೆಲಸದಿಂದ ಭಕ್ತರು ಹಾಗೂ ಪೊಲೀಸರ ನಡುವೆ ಸಂಘರ್ಷಕ್ಕೆ ದಾರಿಯಾಗುತ್ತದೆ. ಆದ್ದರಿಂದ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಈ ಬಾರಿ ಸಾಂಪ್ರದಾಯಿಕವಾಗಿ ಕಾವೇರಿ ಜಾತ್ರೆ ಆಚರಿಸಲ್ಪಡುತ್ತಿರುವು ದರಿಂದ ಭಕ್ತರು ಹೊರಗಿನಿಂದ ಅಧಿಕ ಸಂಖ್ಯೆಯಲ್ಲಿ ಬರುವುದು ಬೇಡ ಎಂಬದಾಗಿ ಹೆಚ್ಚಿನ ಪ್ರಚಾರ ಮಾಡುವ ಕೆಲಸವಾದರೆ ಉತ್ತಮ ಎಂದು ಡಿವೈಎಸ್ಪಿ ದಿನೇಶ್ ಕುಮಾರ್ ಸಲಹೆಯಿತ್ತರು. ಈ ಬಾರಿ ಕಾವೇರಿ ಜಾತ್ರೆ ವೇಳೆ ಡಿಎಆರ್, ಕೆಎಸ್‍ಆರ್‍ಪಿ ತುಕಡಿ, ಅಪರಾಧ ಪತ್ತೆ ಸಿಬ್ಬಂದಿ, ಸಿವಿಲ್ ಪೊಲೀಸ್, ಬಾಂಬ್ ನಿಷ್ಕ್ರಿಯದಳ, ಗೃಹರಕ್ಷಕದಳ ಇವುಗಳ ಜೊತೆಗೆ ನುರಿತ ಈಜುಗಾರರನ್ನು ಕೂಡ ಕಾವೇರಿ ಕ್ಷೇತ್ರದಲ್ಲಿ ಭದ್ರತೆಗೆ ನಿಯೋಜಿಸಲಾಗುವುದು ಎಂದು ಅವರು ಮಾಹಿತಿಯಿತ್ತರು.

ಬ್ರಹ್ಮಗಿರಿ ಪ್ರವೇಶ ನಿರ್ಬಂಧ ಮುಂದುವರಿಕೆ

ಕೊರೊನಾ ಹಿನ್ನೆಲೆಯಲ್ಲಿ ಈಗಾಗಲೇ ಬ್ರಹ್ಮಗಿರಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧಿಸಲಾಗಿದ್ದು, ಕಾವೇರಿ ಜಾತ್ರೆ ಸಂದರ್ಭವೂ ಈ ನಿರ್ಬಂಧ ಮುಂದುವರಿಯಲಿದೆ. ಕಾವೇರಿ ಕೊಳದಲ್ಲಿ ತೀರ್ಥ ಸ್ನಾನಕ್ಕೆ ಅವಕಾಶವಿಲ್ಲ. ತೀರ್ಥ ಪ್ರೋಕ್ಷಣೆಗೆ ವ್ಯವಸ್ಥೆ ಮಾಡಲಾಗುವುದು. ತೀರ್ಥ ಕುಂಡಿಕೆ ಸುತ್ತ ಆರು ಅರ್ಚಕರು ಹಾಗೂ ತಕ್ಕರ ಪರವಾಗಿ ಇಬ್ಬರು ಇರುತ್ತಾರೆ. ದಾರಿಯುದ್ದಕ್ಕೂ ತೀರ್ಥ ವಿತರಣೆ ಮಾಡುವಂತಿಲ್ಲ ಎಂದು ತಲಕಾವೇರಿ-ಭಾಗಮಂಡಲ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ ಹೇಳಿದರು.

ಸಂಘ ಸಂಸ್ಥೆಗಳಿಂದ ಅನ್ನದಾನಕ್ಕೆ ಅವಕಾಶವಿಲ್ಲ. ಹೊರ ರಾಜ್ಯಗಳಿಂದ ಬರುವವರನ್ನು ನಿರ್ಬಂಧಿಸುವ ಕೆಲಸವಾಗಬೇಕು. ಈ ಸಂದರ್ಭ ತಾ. 12 ರಂದು ನಡೆಯುವ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಗಮನ ಸೆಳೆಯಲಾಗುವುದೆಂದು ತಮ್ಮಯ್ಯ ಹೇಳಿದರು.

ಸ್ಥಳೀಯರಿಗೆ ಅನ್ಯಾಯ ಮಾಡುವುದು ಬೇಡ: ವೀಣಾ

ಕೊರೊನಾ ಸಮಸ್ಯೆ ಎಲ್ಲದಕ್ಕೂ ಅಡ್ಡಿಯುಂಟು ಮಾಡಿದೆ. ಕಾವೇರಿ ಜಾತ್ರೆಗೂ ಇದರಿಂದ ತೊಂದರೆ ಯಾಗಿದೆ. ಆದ್ದರಿಂದ ತೀರ್ಥೋದ್ಭವದ ದಿನದಂದು ಹೊರಗಿನವರಿಗೆ ಒಂದು ದಿನದ ಮಟ್ಟಿಗೆ ನಿರ್ಬಂಧ ವಿಧಿಸಬೇಕು. ಕೊಡಗಿನವರಿಗೆ ತೀರ್ಥೋದ್ಭವದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವಂತಾಗಲಿ ಎಂದು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಹೇಳಿದರು. ಈ ವಿಚಾರದಲ್ಲಿ ಸ್ಥಳೀಯರಿಗೆ ಅನ್ಯಾಯ ಮಾಡುವುದು ಬೇಡ ಎಂದು ಅವರು ಅಭಿಪ್ರಾಯಿಸಿದರು. ಕೊಡಗಿನ ಹಿತದೃಷ್ಟಿಯಿಂದ ಕೊರೊನಾ ಸಂಬಂಧದ ಸರಕಾರದ ನಿಯಮಗಳನ್ನು ಎಲ್ಲರೂ ಪಾಲಿಸೋಣ ಎಂದು ವೀಣಾ ಸಲಹೆಯಿತ್ತರು. ತೀರ್ಥೋದ್ಭವದ ಮರು ದಿನದಿಂದ ಬೇಕಾದರೆ ಎಲ್ಲರಿಗೂ ಕಾವೇರಿ ಕ್ಷೇತ್ರಕ್ಕೆ ಬರಲು ಅವಕಾಶ ನೀಡುವಂತಾಗಲಿ ಎಂದು ಅಭಿಪ್ರಾಯಿಸಿದರು.

ಮಂಗಳಾರತಿ ಪಡೆಯಲು ಅವಕಾಶ

ತೀರ್ಥೋದ್ಭವದಂದು ಬೆಳಿಗ್ಗೆ 5.30 ಗಂಟೆಯಿಂದ ಸಂಗಮದಲ್ಲಿ ಪಿಂಡ ಪ್ರದಾನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ತೀರ್ಥೋದ್ಭವ ನೆರವೇರಿ ಒಂದು ಗಂಟೆಯ ಬಳಿಕ ಪವಿತ್ರ ಕುಂಡಿಕೆಯ ದರ್ಶನಕ್ಕೆ ಹಾಗೂ ಮಂಗಳಾರತಿ ಪಡೆಯಲು ಅವಕಾಶ ಕಲ್ಪಿಸಲಾಗುವುದು. ತೀರ್ಥ ಪ್ರೋಕ್ಷಣೆ ಹಾಗೂ ತೀರ್ಥ ಪಡೆಯಲು ಪ್ರತ್ಯೇಕ ವ್ಯವಸ್ಥೆಯನ್ನು ಕೈಗೊಳ್ಳಲಾಗುವುದು ಎಂದು ದೇವಾಲಯ ಸಮಿತಿ ಅಧ್ಯಕ್ಷ ತಮ್ಮಯ್ಯ ಹೇಳಿದರು. ತೀರ್ಥೋದ್ಭವ ವೀಕ್ಷಣೆಗೆ ತಲಕಾವೇರಿಯಲ್ಲಿ 2 ಎಲ್‍ಇಡಿ ಪರದೆಗಳನ್ನು ಅಳವಡಿಸಲಾಗುವುದೆಂದರು. ಯಾವುದೇ ಸಾಂಸ್ಕøತಿಕ ಕಾರ್ಯಕ್ರಮಗಳು ಇರುವುದಿಲ್ಲ ಎಂದರು.

ಹಿರಿಯ ಅಧಿಕಾರಿಗಳ ಗೈರು: ಆಕ್ರೋಶ

ಕಾವೇರಿ ತೀರ್ಥೋದ್ಭವ ಪೂರ್ವಭಾವಿ ಸಭೆಯಲ್ಲಿ ಕೆಲ ಇಲಾಖೆಗಳ ಅಧಿಕಾರಿಗಳು ಗೈರು ಹಾಜರಾಗಿದ್ದರು. ಇನ್ನು ಕೆಲ ಪ್ರಮುಖ ಇಲಾಖೆಗಳ ಹಿರಿಯ ಅಧಿಕಾರಿಗಳ ಬದಲು ಕಿರಿಯ ಅಧಿಕಾರಿಗಳು ಪಾಲ್ಗೊಂಡ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಶಾಸಕ ಬೋಪಯ್ಯ, ಅಧಿಕಾರಿಗಳ ಇಂತಹ ವರ್ತನೆಯನ್ನು ಸಹಿಸಲಾಗುವುದಿಲ್ಲ. ಜವಾಬ್ದಾರಿ ಮರೆತು ವರ್ತಿಸುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆಯಿತ್ತರು. ಅಧಿಕಾರಿಗಳು ಗೈರು ಹಾಜರಾಗಿ ರುವುದು ಸರಿಯಲ್ಲ ಎಂದು ಎಂ.ಬಿ. ದೇವಯ್ಯ ಹೇಳಿದರು.

ಆರೋಗ್ಯ-ಪೊಲೀಸ್ ಇಲಾಖೆಯ ಸಹಕಾರ ಅಗತ್ಯ

ಕಾವೇರಿ ಜಾತ್ರೆ ವೇಳೆ ಬರುವ ಎಲ್ಲರನ್ನು ಕೊರೊನಾ ಪರೀಕ್ಷೆಗೊಳಪಡಿಸುವುದು ಕಷ್ಟಸಾಧ್ಯ. ಸ್ಥಳೀಯರು ಯಾರು, ಹೊರಗಿನವರು ಯಾರು ಎಂಬದನ್ನು ಪತ್ತೆ ಹಚ್ಚುವುದು ಅಷ್ಟು ಸುಲಭವಲ್ಲ. ಆದ್ದರಿಂದ ಹೊರಗಿನಿಂದ ಬರುವವರು 72 ಗಂಟೆ ಒಳಗಾಗಿ ಮಾಡಿಸಿದ ಕೊರೊನಾ ಪರೀಕ್ಷಾ ವರದಿಯೊಂದಿಗೆ ಬಂದರೆ ಉತ್ತಮ. ಈ ಬಗ್ಗೆ ಸಂಬಂಧಿಸಿದವರು ಗಮನ ಹರಿಸಿದರೆ ಒಳಿತು ಎಂದು ಸ್ಥಳೀಯ ವೈದ್ಯೆ ಡಾ. ಪೊನ್ನಮ್ಮ ಹೇಳಿದರು. ಕೊರೊನಾ ನಡುವೆ ಜಾತ್ರೆ ನಡೆಯುತ್ತಿದ್ದು, ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಹಕಾರ ಅತ್ಯಗತ್ಯವಾಗಿದ್ದು, ನಮ್ಮೊಂದಿಗೆ ಸಹಕರಿಸಿ ಎಂದು ಬಿ.ಎಸ್. ತಮ್ಮಯ್ಯ ಕೋರಿದರು. ತುಲಾಸಂಕ್ರಮಣದ ಒಂದು ತಿಂಗಳ ಕಾಲ ಆರೋಗ್ಯ ಇಲಾಖೆಯವರು ಕಡ್ಡಾಯವಾಗಿ ಕಾವೇರಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಬೇಕೆಂದು ತಮ್ಮಯ್ಯ ಮನವಿ ಮಾಡಿದರು.

ಎರಡು ಕಡೆ ಆ್ಯಂಬ್ಯುಲೆನ್ಸ್

ಕಾವೇರಿ ತೀರ್ಥೋದ್ಭವದಂದು ತಲಕಾವೇರಿ ಹಾಗೂ ಭಾಗಮಂಡಲದಲ್ಲಿ ತಲಾ ಒಂದೊಂದು ಆ್ಯಂಬ್ಯುಲೆನ್ಸ್‍ಗಳನ್ನು ನಿಯೋಜಿಸಲಾಗುವುದು. ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ 72 ಗಂಟೆ ಮುಂಚಿತವಾಗಿ ಆರ್‍ಟಿಪಿಸಿಆರ್ ಮೂಲಕ ಕೊರೊನಾ ಪರೀಕ್ಷೆ ಮಾಡಿಸಲಾಗುವುದು. ಸ್ಥಳೀಯ ನಿವಾಸಿಗಳು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 72 ಗಂಟೆ ಮುಂಚಿತವಾಗಿ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ ಎಂದು ಆರ್‍ಸಿಹೆಚ್ ಅಧಿಕಾರಿ ಡಾ. ಗೋಪಿನಾಥ್ ಸಲಹೆಯಿತ್ತರು.

ಸಮಿತಿ ಸದಸ್ಯರಾದ ಕೋಡಿ ಚಂದ್ರಶೇಖರ್ ಮಾತನಾಡಿ, ಕೋವಿಡ್-19 ಸಂಬಂಧ ಥರ್ಮಲ್ ಸ್ಕ್ಯಾನಿಂಗ್ ಮಾಡಬಹುದು. ಆದರೆ ಪ್ರತಿಯೊಬ್ಬರಿಗೂ ರ್ಯಾಪಿಡ್ ಆಂಟಿಜನ್ ಪರೀಕ್ಷೆ ಮಾಡಲಾಗುವುದಿಲ್ಲ. ಈ ಸಂಬಂಧ ಭಕ್ತಾದಿಗಳಲ್ಲಿ ಜಾಗೃತಿ ಮೂಡಿಸುವಂತೆ ತಿಳಿಸಿದರು.

ಸ್ಥಳೀಯರಾದ ಕೆ.ಜೆ. ಭರತ್ ಮಾತನಾಡಿ, ವಾಹನಗಳ ಪಾರ್ಕಿಂಗ್‍ಗೆ ಅಗತ್ಯ ವ್ಯವಸ್ಥೆ ಕೈಗೊಳ್ಳಬೇಕೆಂದರು.

ಸದಸ್ಯ ಡಾ. ಕಾವೇರಪ್ಪ ಮಾತನಾಡಿ, 60 ವರ್ಷ ಮೇಲ್ಪಟ್ಟವರು ಮತ್ತು ಮಕ್ಕಳು ಬರುವುದನ್ನು ನಿಯಂತ್ರಿಸುವುದು ಅಗತ್ಯ ಎಂದು ಹೇಳಿದರು. ರವೀಂದ್ರ ಹೆಬ್ಬಾರ್ ಹಲವು ಸಲಹೆ ನೀಡಿದರು.

ಅಮಿತ್ ಅವರು ಭಾಗಮಂಡಲದಲ್ಲಿನ ತ್ಯಾಜ್ಯ ಕಾವೇರಿ ನದಿಗೆ ಸೇರುತ್ತಿದ್ದು, ಇದನ್ನು ತಡೆಯಬೇಕಿದೆ ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೆ.ಜಿ. ಬೋಪಯ್ಯ ಅವರು ಈ ಬಗ್ಗೆ ಅಗತ್ಯ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು. ಪಂಚಾಯಿತಿ ಪಿಡಿಓ ಅಶೋಕ್ ಮಾತನಾಡಿ, ಬೀದಿದೀಪ ಅಳವಡಿಕೆ ಕಾರ್ಯ ತಾ. 15 ರಂದು ಮುಕ್ತಾಯಗೊಳ್ಳಲಿದೆ ಎಂದರು.

ಅಮೆ ಬಾಲಕೃಷ್ಣ, ಸಂಘ ಸಂಸ್ಥೆಯ ಪತ್ರಿನಿಧಿಗಳು ಹಲವು ಸಲಹೆ ನೀಡಿದರು. ತಕ್ಕ ಮುಖ್ಯಸ್ಥರಾದ ಕೋಡಿ ಮೋಟಯ್ಯ, ಜಿ.ಪಂ. ಸದಸ್ಯರಾದ ಹೊಸಮನೆ ಕವಿತಾ ಪ್ರಭಾಕರ್, ಬೊಳ್ಳಡ್ಕ ಅಪ್ಪಾಜಿ, ತಹಶೀಲ್ದಾರ್ ಮಹೇಶ್, ಭಾಗಮಂಡಲ-ತಲಕಾವೇರಿ ದೇವಾಲಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ, ಪೆÇನ್ನಣ್ಣ ವಿವಿಧ ಸಂಘ ಸಂಸ್ಥೆಯ ಪ್ರತಿನಿಧಿಗಳು ಅಧಿಕಾರಿಗಳು ಇದ್ದರು.