ಮಡಿಕೇರಿ, ಅ. 10: ಸುಳ್ಯದ ಶಾಂತಿನಗರದಲ್ಲಿ ತಾ. 8 ರಂದು ಬೆಳ್ಳಂಬೆಳಿಗ್ಗೆ ಕಲ್ಲುಗುಂಡಿಯ ಸಂಪತ್ ಕುಮಾರ್ ಹತ್ಯೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ಠಾಣೆಯ ಪೊಲೀಸರು ಶಂಕಿತ ಐವರು ಆರೋಪಿಗಳ ಸುಳಿವು ಪಡೆಯುವುದ ರೊಂದಿಗೆ ದುಷ್ಕøತ್ಯಕ್ಕೆ ಬಳಸಲಾಗಿದ್ದ ಕಾರೊಂದನ್ನು ವಶಪಡಿಸಿ ಕೊಂಡಿದ್ದಾರೆ. ಈ ಕಾರು ಸುಳ್ಯ ಸಮೀಪದ ಚೊಕ್ಕಾಡಿಯ ಕೃಷಿಕ ಪದ್ಮನಾಭ ಎಂಬವರಿಗೆ ಸೇರಿದ್ದಾಗಿದೆ ಎಂದು ಅಲ್ಲಿನ ಪೊಲೀಸ್ ಠಾಣಾಧಿಕಾರಿ ಎಂ.ಆರ್. ಹರೀಶ್ ಖಚಿತಪಡಿಸಿದ್ದಾರೆ.ಈ ದುಷ್ಕøತ್ಯದ ಪ್ರಮುಖ ಆರೋಪಿಯೆಂದು ಶಂಕಿಸಲಾಗಿರುವ ಕಲ್ಲುಗುಂಡಿಯ ಮನೋಹರ ಅಲಿಯಾಸ್ ಮನು (36) ಎಂಬಾತ ಹತ್ತು ದಿನಗಳ ಹಿಂದೆ (ಸೆ. 30) ಪದ್ಮನಾಭ ಅವರ ಮನೆಗೆ ತೆರಳಿ ತನಗೆ ಸ್ನೇಹಿತರೊಂದಿಗೆ ಸಿನಿಮಾ ಶೂಟಿಂಗ್ ನೋಡಲು ತೆರಳುವ ಸಲುವಾಗಿ ಕಾರು ಬೇಕೆಂದು ಕೇಳಿದ್ದನೆನ್ನಲಾಗಿದೆ. ಆ ಮೇರೆಗೆ ಪದ್ಮನಾಭ ಅವರು ತಮ್ಮ ಹಸಿರು ಬಣ್ಣದ ಟೊಯಾಟ ಕ್ವಾಲೀಸ್ ಕಾರನ್ನು (ಕೆಎ 19 ಎಂಎಫ್ 789) ನಂಬಿಕೆಯ ಮೇರೆಗೆ ಕೊಟ್ಟಿದ್ದಾರೆ ಎಂದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ. ಕಾರು ಪಡೆದಿರುವ ಶಂಕಿತ ಆರೋಪಿ ಹಾಗೂ ಇತರರು ಕಲ್ಲುಗುಂಡಿ ಸಂಪತ್ ಚಲನ ವನಲನದ ಮೇಲೆ ಕಣ್ಣಿಡುವುದ ರೊಂದಿಗೆ ಸಮಯ ಸಾಧಿಸಿ ತಾ. 8 ರಂದು ಬೆಳ್ಳಂಬೆಳಿಗ್ಗೆ ಕೊಲೆಗೈದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.ಶಾಂತಿ ನಗರದಲ್ಲಿ ಕೊಲೆ ಸಂಭವಿಸಿದ ಬೆನ್ನಲ್ಲೇ ಹಂತಕರು ಹಸಿರು ಕಾರೊಂದರಲ್ಲಿ ಪರಾರಿಯಾಗಿ ದ್ದಾಗಿ ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ಸುಳಿವು ನೀಡಿದ್ದರು. ಆ ಮೇರೆಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ಅವರು, ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕ ನವೀನ್ ಕುಮಾರ್ ಜೋಗಿ ನೇತೃತ್ವದಲ್ಲಿ 2 ಪ್ರತ್ಯೇಕ ತನಿಖಾ ತಂಡ ರಚಿಸಿದ್ದರು. ತೋಟದೊಳಗೆ ಕಾರು: ಈ ನಡುವೆ ಅರಂತೋಡುವಿನ ಕಳುಬೈಲು ನಿವಾಸಿ ಮನೀಸ್ ಬಾಬುಗೌಡ ಎಂಬವರಿಗೆ ಸೇರಿದ ರಬ್ಬರ್ ತೋಟದೊಳಗೆ, ಕರ್ತವ್ಯ ನಿಮಿತ್ತ ನಿನ್ನೆ ತೆರಳಿದಾಗ ಸಂಬಂಧಿಸಿದ ಕಾರು ಗೋಚರಿಸಿದೆ. ತಮ್ಮ ತೋಟವನ್ನು ಗುತ್ತಿಗೆಗೆ ನಿರ್ವಹಣೆಗಾಗಿ ಪಡೆದುಕೊಂಡಿರುವ ಕಲ್ಲುಗುಂಡಿಯ ಮಧು ಎಂಬಾತನಿಗೆ ಮೊಬೈಲ್ ಕರೆ ಮಾಡಲಾಗಿ ಅದು ಸ್ಥಗಿತ ಗೊಂಡಿರುವುದು ಖಚಿತವಾಗಿದೆ. ಅಲ್ಲದೆ ಸಂಪತ್ ಹತ್ಯೆ ವಿಚಾರ ಕೂಡ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದ ಕಾರಣ, ಈ ಕೃತ್ಯದಲ್ಲಿ ಮಧುವಿನ ಕೈವಾಡವೂ ಇರಬಹುದೆಂಬ ಸಂಶಯದೊಂದಿಗೆ ತೋಟ ಮಾಲೀಕರು ಸುಳ್ಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತನಿಖಾ ತಂಡ ಹಾಗೂ ಬೆರಳಚ್ಚು ತಜ್ಞರು ಧಾವಿಸಿ ಪರಿಶೀಲನೆ ನಡೆಸುವುದ ರೊಂದಿಗೆ, ಆರೋಪಿಗಳು ಕಾರು ಲಾಕ್ ಮಾಡಿ ಪರಾರಿಯಾಗಿರುವ ಕಾರಿನ ಬಾಗಿಲುಗಳನ್ನು ಬದಲಿ ವ್ಯವಸ್ಥೆಯೊಂದಿಗೆ ತೆರೆಸಿ ತಮ್ಮ ಸ್ವಾಧೀನಕ್ಕೆ ಹೊಂದಿಕೊಂಡಿದ್ದಾರೆ.

ಅದಾಗಲೇ ಕಾರು ಮಾಲೀಕರು ನೀಡಿರುವ ಸುಳಿವಿನ ಮೇರೆ ಮನೋಹರ್ ಎಂಬಾತನೊಂದಿಗೆ ತೋಟ ಮಾಲೀಕರ ಹೇಳಿಕೆಯಂತೆ ಮಧು ಹಾಗೂ ಇತರ ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪ ಡಿಸಲು ಪೊಲೀಸರು ಬಲೆ ಬೀಸಿದ್ದಾರೆ.

ಕಳ್ಳ ಕೋವಿ ಶಂಕೆ: ಇನ್ನೊಂದೆಡೆ ತಾ. 8 ರಂದು ಶಾಂತಿನಗರದಲ್ಲಿ ಕೊಲೆ ಸಂಭವಿಸಿರುವ ಸ್ಥಳದಲ್ಲಿ ಹಂತಕರು ಬಿಟ್ಟು ಹೋಗಿರುವ ಕೋವಿ ಬಗ್ಗೆಯೂ ತನಿಖೆ ಮುಂದುವರಿದಿದೆ.

(ಮೊದಲ ಪುಟದಿಂದ) ಇದು ಕಳ್ಳಕೋವಿ ಎಂಬ ಅನುಮಾನದೊಂದಿಗೆ ಯಾವುದೇ ದಾಖಲಾತಿ ಅಥವಾ ನಿಖರ ಮಾಲೀಕರಿಗೆ ಸೇರಿಲ್ಲ ಎಂಬದಾಗಿ ಮಾತು ಕೇಳಿಬರತೊಡಗಿದೆ.

ಒಟ್ಟಿನಲ್ಲಿ ಸಂಪತ್ ಹತ್ಯೆ ಸಂಬಂಧ ಪೊಲೀಸರಿಗೆ ಲಭಿಸಿರುವ ನಿಖರ ಸುಳಿವು ಹಾಗೂ ಇತರ ಮಾಹಿತಿ ಆಧರಿಸಿ ತನಿಖೆ ಮುಂದುವರಿದಿದೆ. ಸದ್ಯವೇ ಆರೋಪಿಗಳ ಬಂಧನದೊಂದಿಗೆ ಘಟನೆಯ ನೈಜತೆಯನ್ನು ಬಯಲಿಗೆಳೆಯಲಾಗುವುದು ಎಂದು ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ಪ್ರತಿಕ್ರಿಯಿಸಿದ್ದಾರೆ.