(ನಿನ್ನೆಯ ಸಂಚಿಕೆಯಿಂದ)

ಐತಿಹಾಸಿಕವಾಗಿ ಈ ಅವತಾರ - ಅವಕರಣಗಳನ್ನು ಸ್ವರ್ಗ - ನರಕಗಳನ್ನೂ ಜನ ಒಪ್ಪದೆ ಇರಬಹುದು. ಆದರೆ ಮಾನವನಾಗಿ ಹುಟ್ಟಿ ಮರಣ ಹೊಂದಿದ ನಂತರ ಆತ್ಮ ಶರೀರದಿಂದ ಬೇರೆ ಯಾಗುತ್ತದೆ. ಶರೀರ ಪಂಚಭೂತಗಳಲ್ಲಿ ಸೇರುತ್ತದೆ ಎಂದು ನಂಬುತ್ತಾರೆ. ಆತ್ಮ ಪರಮಾತ್ಮ ಸಂಬಂಧ ಬಗ್ಗೆಯೂ ದ್ವೈತ, ಅದ್ವೈತ, ವಿಶಿಷ್ಟಾ ದ್ವೈತಗಳೆಂಬ ಸಿದ್ಧಾಂತಗಳು ನಮ್ಮ ಮುಂದಿವೆ. ಜ್ಞಾನಿಗಳು, ಋಷಿಗಳು ಕಂಡುಕೊಂಡಂತೆ ಆತ್ಮದ ಇರುವಿಕೆಯನ್ನು ನಂಬುತ್ತೇವೆ. ಆತ್ಮ ಶರೀರದಿಂದ ಬೇರ್ಪಟ್ಟು ಇರಲು ಸ್ಥಳವಿಲ್ಲದೆ, ಉಣ್ಣಲು ದೇಹವಿಲ್ಲದೆ ಅಲೆದಾಡುತ್ತಿರುತ್ತವೆ. ಅವುಗಳ ಹಿಂದಿನ ಹಿರಿ ಜೀವಾತ್ಮಗಳು ಅವುಗಳನ್ನು ಪಿತೃಲೋಕಕ್ಕೆ ಕರೆದೊಯ್ಯುತ್ತದೆ. ವರ್ಷಕ್ಕೊಮ್ಮೆ ಭೂಮಿಗೆ ಬರುತ್ತಾರೆ ಎಂಬ ವಾದವನ್ನು ನಂಬುತ್ತೇವೆ. ಅದಕ್ಕಾಗಿ ಅಗಲಿದ ಆತ್ಮಗಳಿಗೆ ತಿಥಿ ಕರ್ಮಾಂತರ, ಪಿಂಡ ಪ್ರದಾನ ಇತ್ಯಾದಿ ಸಂಸ್ಕಾರಗಳು. ಇದಕ್ಕೆ ಪಿತೃಪಕ್ಷ ಎಂದೂ ಸಮಯ ನಿಗದಿಯಾಗಿದೆ. ಪಿತೃ ಪಕ್ಷದ ಅಮಾವಾಸ್ಯೆಯನ್ನು ಮಹಾಲಯ ಅಮವಾಸ್ಯೆ ಎನ್ನಲಾಗಿದೆ. ಖಗೋಳ ವಿಜ್ಞಾನ ಪ್ರಕಾರ ಭೂಮಿ, ಸೂರ್ಯ, ಚಂದ್ರ ಇವುಗಳ ಭ್ರಮಣೆ, ಪರಿಭ್ರಮಣೆ ಈ ಬ್ರಹ್ಮಾಂಡದಲ್ಲಿ ನಡೆಯುತ್ತಿರುತ್ತದೆ. ಭೂಮಿಯ ಭ್ರಮಣೆ ತನ್ನ ಅಕ್ಷದ ಒಂದು ಸುತ್ತು ಸುತ್ತುವ ಕಾಲಮಾನ ಒಂದು ದಿನ. ಅಂದರೆ ಅಹೋರಾತ್ರಿ ಒಂದು ಹಗಲು - ಒಂದು ರಾತ್ರಿ. ಆದರೆ ಚಂದ್ರ ತನ್ನ ಅಕ್ಷದ ಒಂದು ಸುತ್ತು ತಿರುಗುವ ಕಾಲಮಾನ ಭೂಮಿಯ ಒಂದು ತಿಂಗಳು. ಇದು ಚಂದ್ರನ ಒಂದು ದಿನ. ಒಂದು ತಿಂಗಳಿಗೆ ಎರಡು ಪಕ್ಷ (ಕೃಷ್ಣ ಪಕ್ಷ ಮತ್ತು ಶುಕ್ಲ ಪಕ್ಷ). ಸೂರ್ಯನ ಒಂದು ಸುತ್ತು ಭೂಮಿಗೆ 365 ದಿನಗಳಾದರೆ ಚಂದ್ರನಿಗೆ 12 ದಿನ. ಪಿತೃಲೋಕ ಚಂದ್ರಗ್ರಹಣದ ಹತ್ತಿರ ಇದೆ ಎನ್ನುತ್ತಾರೆ. ಅಲ್ಲಿ ವರ್ಷಕ್ಕೆ 12 ದಿನ. ಬ್ರಹ್ಮಲೋಕದಲ್ಲಿ 1 ವರ್ಷಕ್ಕೆ ಸಾವಿರ ದಿನ ಎನ್ನುತ್ತಾರೆ. ಶವ ಸಂಸ್ಕಾರ 12 ದಿನಗಳು. ತಿಥಿಕರ್ಮಾಂತರ ಎನ್ನುವುದು ಇದೇ ಲೆಕ್ಕ. ನಮ್ಮ ಒಂದು ವರ್ಷ ಎಂದರೆ ಅವುಗಳಿಗೆ ಒಂದು ದಿನ. ಪಿತೃಪಕ್ಷ ಎಂದರೆ ಪಿತೃಗಳು ಭೂಮಿಗೆ ಬರುವ ಸಮಯ. ಅವುಗಳಿಗೆ ವರ್ಷಕ್ಕೊಮ್ಮೆ ಕೊಡುವ ಪಿಂಡ ದಿನದ ಆಹಾರ! ಭಾಗಮಂಡಲ, ತಲಕಾವೇರಿ ಭೇಟಿ ಕೊಡುವುದು, ಪುಣ್ಯ ಸ್ನಾನ, ಪಿಂಡ ಪ್ರದಾನ ಇವುಗಳು ವಿಶೇಷ ಕಾರ್ಯಕ್ರಮಗಳು.

ಕೊಡಗಿನವರು ಹಿಂದಿನಿಂದಲೂ ಧರ್ಮಭೀರುಗಳು. ಧಾರ್ಮಿಕ ಭಾವನೆಯಲ್ಲಿ ವಿಶಾಲ ಮನೋಭಾವ ಇಟ್ಟುಕೊಂಡವರು. ಕುಟುಂಬದ ಹೊರಗೆ ವಸುಧೈವ ಕುಟುಂಬಕಂ ಎನ್ನುವವರು. ಸಾಂಪ್ರದಾಯಿಕವಾಗಿ ಪ್ರಕೃತಿ ಪೂಜಕರು. ವಿಗ್ರಹಗಳ ಆರಾಧನೆ ಇತ್ತೀಚಿನ ಅನುಕರಣೆಗಳು. ಕಾವೇರಿ ಮಾತೆಯನ್ನು ಜಲರೂಪಿಣಿಯಾಗಿ ಪೂಜಿಸುವವರು. ಅಂದು ಸನ್ಯಾಸಿಗಳು ಇದ್ದರು. ಕಾಡುಗಳಲ್ಲಿ ಆಶ್ರಮ ಕಟ್ಟಿಕೊಂಡಿದ್ದು ಯಜ್ಞ ಯಾಗಾದಿಗಳನ್ನು ಲೋಕಕಲ್ಯಾಣಕ್ಕಾಗಿ ಮಾಡುತ್ತಿದ್ದರು. ಭಕ್ತರ ಮನೆಗಳಿಗೆ ಭೇಟಿ ಕೊಡುತ್ತಿದ್ದರು. ಸಾತ್ವಿಕ ಜೀವನ. ಅವರಿಗೆ ಸಸ್ಕಾರವಿತ್ತು. ಈಗ ಅದಲು ಬದಲು. ಗುಡಿಸಲು, ಆಶ್ರಮಗಳು ಮಹಲುಗಳಾಗಿವೆ. ಅವರು ಭಕ್ತರಲ್ಲಿಗೆ ಬರುವ ಬದಲು ಭಕ್ತರು ಅವರ ‘ಆಶ್ರಮ’ಗಳಿಗೆ ಹೋಗುತ್ತಾರೆ. ಜೀವನದಲ್ಲಿ ವೈರಾಗ್ಯ ಬಂದಾಗ! ಕೆಲವರಿಗೆ ಬೇಗ ಬಂದರೆ ಸನ್ಯಾಸಿಗಳೇ ಆಗಿ ಬಿಡುತ್ತಾರೆ! ಅಂದರೆ ಜೀವನದಲ್ಲಿ ಭೌತಿಕ ಸುಖ ಕ್ಷಣಿಕ ಎಂದು ಅರಿವಾದಾಗ ಸಮಯ ಕಳೆದಿರುತ್ತದೆ. ಈಗ ‘ಜ್ಞಾನ’ದ ಅರಿವಾಗುತ್ತದೆ. ಭೌತಿಕ ಸುಖಕ್ಕಿಂತಲೂ ಮಿಗಿಲಾದ ಆನಂದವೊಂದಿದೆ ಎಂಬ ಅರಿವು. ಅದನ್ನು ಪಡೆಯುವ ಮಾರ್ಗವೇ ‘ಧರ್ಮ’. ಇದನ್ನು ಹಿಂದಿನ ಋಷಿ-ಮುನಿಗಳು ಅನುಭವದಿಂದ ಪಡೆದು ಭಕ್ತರಿಗೆ ತಿಳಿಹೇಳುತ್ತಾರೆ. ಸ್ವರ್ಗ-ನರಕ ಇದೆ. ಆದರೆ ಯಾರೂ ಸ್ವರ್ಗದ ಆನಂದ ನೋಡಿ ಬಂದಿದ್ದೇವೆ. ನರಕದಲ್ಲಿ ಬೆಂದು ಬಂದಿದ್ದೇವೆ ಎಂದು ಹೇಳಿದವರಿಲ್ಲ. ಆದರೂ ಪುನರ್ಜನ್ಮದ ಭಯವಿದೆ. ನಾವು ಮಾಡಿದ ಕರ್ಮಕ್ಕನುಸಾರವಾಗಿ ಬೇರೆ ಬೇರೆ ಜನ್ಮ ಎತ್ತುತ್ತೀವಿ ಎಂಬದನ್ನು ನಂಬುತ್ತೇವೆ. ಅಂತಹದರಲ್ಲೂ ಪುಣ್ಯ ಕಾರ್ಯ ಮಾಡಿ ‘ಮಹಾತ್ಮ’ರಾದವರು ನಮ್ಮ ಮಧ್ಯದಲ್ಲಿ ಇದ್ದಾರೆ. ಅಂತಹವರನ್ನು ಗುರುತಿಸುವ ಛಾತಿ ಇರಬೇಕಷ್ಟೆ. ರಾಮಕೃಷ್ಣ ಪರಮಹಂಸ, ವಿವೇಕಾನಂದ, ಉಡುಪಿ ಸ್ವಾಮೀಜಿಗಳಂತಹವರು ಲೋಕಕಲ್ಯಾಣಕ್ಕಾಗಿ ದುಡಿದಿದ್ದಾರೆ. ಭೌತಿಕ ಐಶ್ವರ್ಯ ಭಾಗ್ಯಗಳನ್ನು ತ್ಯಾಗ ಮಾಡಿದವರಿದ್ದಾರೆ. ಆಸ್ತಿಕರು, ನಾಸ್ತಿಕರೂ ನಮ್ಮಲ್ಲಿದ್ದಾರೆ. ಭಗವಂತನ ಕಲ್ಪನೆ, ಅವತಾರಗಳ ಬಗ್ಗೆ ನಂಬಿಕೆ ಇರಬೇಕು. ಸೂರ್ಯ-ಚಂದ್ರರು ಇರುವವರೆಗೂ ಈ ಬಗ್ಗೆ ಅಭಿಪ್ರಾಯ ಬೇಧ ಇರುತ್ತದೆ. ಧರ್ಮ ಮಾರ್ಗ ಬಿಟ್ಟರೆ ಅಲ್ಲಿ ಹಿಂಸೆ, ದ್ವೇಷ, ಪರಸ್ಪರ ನಿಂದನೆಗಳು ಬರುತ್ತದೆ. ಹೀಗಾಗಿ ಪುಣ್ಯಕ್ಷೇತ್ರಗಳನ್ನು ದರ್ಶನ ಮಾಡಿ ಶಾಂತಿಯನ್ನು ಕಾಪಾಡಿಕೊಳ್ಳಬೇಕು.

ತಲಕಾವೇರಿ, ಭಾಗಮಂಡಲಗಳಿಗೆ ಸಂದರ್ಶನಕೊಟ್ಟಾಗ ಮನಃಪರಿವರ್ತನೆ ಆಗುತ್ತದೆ. ಅಲ್ಲಿನ ವಾತಾವರಣ ಮನಸ್ಸಿಗೆ ಶಾಂತಿ ಕೊಡುತ್ತದೆ. ಹಿಂದೆ ಅಲ್ಲಿ ಮಹಾಪುರುಷರು, ಋಷಿಗಳು ಇದ್ದ ಸ್ಥಳಗಳನ್ನು ಗುರುತಿಸಬಹುದು. ಬ್ರಹ್ಮಗಿರಿ, ಗಜರಾಜಗಿರಿ, ಶ್ವೇತಗಿರಿ, ವಾಯುಗಿರಿ, ಸಹ್ಯಾದಿ ಸಾಲುಗಳು ಹಿಂದಿನಿಂದಲೂ ಅವರ ವಾಸಸ್ಥಾನ. ಈಗಲೂ ರಾತ್ರಿ ಅಲ್ಲಿ ತಂಗುವಂತಿಲ್ಲ. ತಿರುಗಾಡುವಂತಿಲ್ಲ. ಪೂಜಾ ಸಂದರ್ಭದಲ್ಲಿ ಗಂಟೆ, ಭಾಜಾ ಭಜಂತ್ರಿ ಶಬ್ದಗಳಿಲ್ಲ. ಎಲ್ಲವೂ ಶಾಂತ, ಮೌನ, ಭಾಗಮಂಡಲ ತ್ರಿವೇಣಿ ಸಂಗಮ ಉತ್ತರದ ತ್ರಿವೇಣಿ ಸಂಗಮವನ್ನು ನೆನಪಿಸುತ್ತದೆ. ಕಾವೇರಿ ಸಂಗಮವನ್ನು ದಕ್ಷಿಣ ಕಾಶಿ ಎನ್ನುತ್ತಾರೆ. ಅಗಸ್ತ್ಯಾಶ್ರಮ, ಭಗಂಡ ದೇವನೆಲೆ, ಪ್ರೇಕವನ, ನಾಗವನ, ಶಕ್ತಿ ದೇವತೆಗಳ ನೆಲೆಗಳು ಅಲ್ಲಲ್ಲಿ ಇವೆ. ಅಗಸ್ತ್ಯ ಸ್ವತಃ ಸ್ಥಾಪಿಸಿದ ಶಿವಲಿಂಗ (ಈಗ ಭಗ್ನಾವಸ್ಥೆಯಲ್ಲಿದ್ದ ವಿಸರ್ಜನೆಯ ಬಗ್ಗೆ ಚಿಂತಿಸಲಾಗುತ್ತಿದೆ). ಇವುಗಳೆಲ್ಲಾ ಹಳೆಯ ನೆನಪುಗಳು. ಪೂರ್ವ ಭಾಗದ ಚೇರಂಗಾಲ ಕಣಿವೆ ಭಾಗದಲ್ಲಿ ‘ಕನ್ನಿಕುಂಡ್’ ಎಂಬದೊಂದು ಕ್ಷೇತ್ರದಲ್ಲಿ ದೇವಸ್ಥಾನಗಳಿದ್ದವೆಂದು ತೂಕ್‍ಬೊಳಕ್ ಪತ್ರಿಕೆ ಸಂಪಾದಕ ಶಂಕರಿ ಪೊನ್ನಪ್ಪ ಸಂಶೋಧನೆಯಲ್ಲಿ ತೊಡಗಿದ್ದಾರೆ. ಅವರ ಪ್ರಯತ್ನದ ಬಗ್ಗೆ ಕಳೆದ ವರ್ಷ ಇದೇ ಸಂದರ್ಭದಲ್ಲಿ ಶಕ್ತಿ ಪತ್ರಿಕೆಯಲ್ಲಿ ಲೇಖನ ಪ್ರಕಟವಾಗಿದೆ. ಅದು ಲೋಪಾಮುದ್ರೆ ಮಗುವಿನ ರೂಪದಲ್ಲಿ ಕವೇರ ಮುನಿಗೆ ದೊರಕಿದ ಸ್ಥಳವೆಂದು ಪ್ರತೀತಿ. ಈ ಬಗ್ಗೆ ಸತ್ಯ ಹೊರತರಬೇಕಷ್ಟೇ. (ಮುಗಿಯಿತು)

(ಸಂಗ್ರಹ)

- ಸಿ.ಎಂ. ಭೀಮಯ್ಯ, ವೀರಾಜಪೇಟೆ.

ಮೊ. 9972255154