ಇತ್ತೀಚಿನ ಕೆಲವು ವರ್ಷಗಳಿಂದ ಜಿಲ್ಲೆಯ ಕಾಫಿ ಬೆಳೆಗಾರರು ಹೇಳತೀರದ ಸಮಸ್ಯೆಗಳಿಂದ ನಲುಗುತ್ತಿದ್ದಾರೆ. ಹವಾಮಾನದ ಏರಿಳಿತ, ಪ್ರಾಕೃತಿಕ ವೈಪರೀತ್ಯ, ಇಳುವರಿ ಕುಂಠಿತ, ಬೆಲೆ ಕುಸಿತ, ತೋಟ ನಿರ್ವಹಣೆಗೆ ಅವಷ್ಯವಿರುವ ಪೂರಕ ಅಂಶಗಳ ಬೆಲೆ ಏರಿಕೆ, ಕಾರ್ಮಿಕ ವೇತನ ಹೆಚ್ಚಳ... ಹೀಗೆ ಪಟ್ಟಿ ಮಾಡುತ್ತಾ ಹೋದಲ್ಲಿ ಹತ್ತು ಹಲವು ಸಮಸ್ಯೆಗಳ ಸುಳಿಯಲ್ಲಿ ಸಿಕ್ಕ ಬೆಳೆಗಾರ ಅತಂತ್ರ ಸ್ಥಿತಿಯತ್ತ ಸಾಗುತ್ತಿದ್ದಾನೆ.

ಭತ್ತದ ಕೃಷಿ ನಾನಾ ಕಾರಣಗಳಿಂದ ಹಿನ್ನಡೆಯಾಗಿ ಕಾಫಿ, ಕಾಳುಮೆಣಸು, ಏಲಕ್ಕಿ ಬೆಲೆಯನ್ನೇ ನಂಬಿ ಬದುಕುವ ಪರಿಸ್ಥಿತಿ ಇಂದು ಜಿಲ್ಲೆಯಲ್ಲಿದೆ. ಹಿಂದೊಮ್ಮೆ ಏಲಕ್ಕಿ ಬೆಳೆಯ ತೀವ್ರ ಬೆಲೆ ಕುಸಿತದಿಂದಾಗಿ ಇಂದು ಏಲಕ್ಕಿ ಅಪರೂಪದ ಕೃಷಿಯಾಗಿ ಮತ್ತೆ ಬೆಲೆ ಬಂದಾಗ ಪುನಶ್ಚೇತನಗೊಳ್ಳುತ್ತಿದೆ.

ಕಾಳುಮೆಣಸು ದರ ಇತ್ತೀಚಿನ ವರ್ಷಗಳಲ್ಲಿ ಪಾತಾಳಕ್ಕಿಳಿದು ಸೂಕ್ತ ನಿರ್ವಹಣೆಯನ್ನು ಮಾಡಲಾಗದೆ ಸಿಕ್ಕಿದಷ್ಟನ್ನು ಕುಯಿಲು ಮಾಡುವ ಸ್ಥಿತಿ ಬಂದೊದಗಿದೆ. ಇನ್ನು ಉಳಿದಿರುವುದು ಪ್ರಮುಖ ಬೆಳೆಯಾದ ಕಾಫಿ ಮಾತ್ರ.

ಕೆಲ ವರ್ಷಗಳಿಂದ ಮುಂಗಾರು ಮಳೆಯ ಕಾಲಮಾನದ ಬದಲಾವಣೆ ಕಾಫಿ ಬೆಳೆಗೆ ಪೂರಕವಾಗಿಲ್ಲ.

(ಮುಂದುವರಿಯುವುದು) - ಮಾದೇಟಿರ ಬೆಳ್ಯಪ್ಪ.