ಸಿದ್ದಾಪುರ, ಅ. 9: ಸಿದ್ದಾಪುರದ ಪ್ರವಾಹಪೀಡಿತ ಪ್ರದೇಶಗಳಿಗೆ ಸಿ.ಪಿ.ಐ ಪಕ್ಷದ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು ಕಳೆದ ಸುಮಾರು ವರ್ಷಗಳಿಂದ ನದಿ ತೀರದಲ್ಲಿ ವಾಸ ಮಾಡಿಕೊಂಡಿರುವ ನಿವಾಸಿಗಳು ಪ್ರವಾಹದ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಸರ್ಕಾರವು ಸಂತ್ರಸ್ತರಿಗೆ ಶಾಶ್ವತ ಸೂರು ಕಲ್ಪಿಸದೇ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಕೊಡಗು ಜಿಲ್ಲೆಯಲ್ಲಿ ನಿವೇಶನ ರಹಿತ ಹಾಗೂ ಸೂರು ಇಲ್ಲದವರ ಸಮಸ್ಯೆಗಳಿಗಾಗಿ ಪಕ್ಷವು ಹೋರಾಟ ನಡೆಸುತ್ತಿದೆ. ರಾಜ್ಯದಲ್ಲಿ 50 ಲಕ್ಷ ಕುಟುಂಬಗಳು ಸೂರು ಇಲ್ಲದೇ ಅತಂತ್ರ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಿ.ಪಿ.ಐ. ಪಕ್ಷದ ಜಿಲ್ಲಾಧ್ಯಕ್ಷ ಹೆಚ್.ಎಂ ಸೋಮಪ್ಪ ಮಾತನಾಡಿ ಗ್ರಾ.ಪಂ. ವ್ಯಾಪ್ತಿಗಳಲ್ಲಿ ಸಾವಿರಾರು ಕುಟುಂಬಗಳು ಸ್ವಂತ ಸೂರು ಇಲ್ಲದೆ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಇವರುಗಳಿಗೆ ಸರ್ಕಾರವು ಸೂರು ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದರು.
ಸಿ.ಪಿ.ಐ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ವಿ ಸುನಿಲ್ ಮಾತನಾಡಿ ಜಿಲ್ಲೆಯಾದ್ಯಂತ ಸಾವಿರಾರು ಕುಟುಂಬಗಳು ಸೂರಿ ಲ್ಲದೇ ತೋಟದ ಲೈನ್ ಮನೆಗಳಲ್ಲಿ ಹಾಗೂ ಬಾಡಿಗೆ ಮನೆಗಳಲ್ಲಿ ವಾಸ ಮಾಡಿಕೊಂಡಿದ್ದಾರೆ. ಇಂತಹ ಬಡ ಕುಟುಂಬಗಳನ್ನು ಸರ್ಕಾರವು ಗುರುತಿಸಿ ಶಾಶ್ವತ ಸೂರು ಕಲ್ಪಿಸಿಕೊಡ ಬೇಕು ಎಂದು ಆಗ್ರಹಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಿ.ಪಿ.ಐ. ಪಕ್ಷದ ಪದಾಧಿಕಾರಿಗಳಾದ ವಿ.ಆರ್ ರಜಿನಿಕಾಂತ್, ಹೆಚ್.ಟಿ ಗೋಪಾಲ, ಎಂ.ಎ ಕೃಷ್ಣ ಇನ್ನಿತರರು ಹಾಜರಿದ್ದರು.