ಮಲೆನಾಡು ಭಾಗದಲ್ಲಿ ಭಾರೀ ಮಳೆ ಸಾಧ್ಯತೆ
ಬೆಂಗಳೂರು, ಅ. 9: ದಕ್ಷಿಣ ಒಳನಾಡು ಮತ್ತು ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಶುಕ್ರವಾರ ತಿಳಿಸಿದೆ. ಉತ್ತರ ಒಳನಾಡಿನಲ್ಲಿ ಹಗುರ, ಕರಾವಳಿ ವಲಯದಲ್ಲಿ ಸಾಧಾರಣಾ ಮಳೆ ಬೀಳುವ ಸಂಭವವಿರುವುದಾಗಿ ಹೇಳಿದೆ. ಬೆಂಗಳೂರು ನಗರ, ಗ್ರಾಮಾಂತರ, ತುಮಕೂರು, ಚಿತ್ರದುರ್ಗ, ಕೋಲಾರ, ಮೈಸೂರು, ಮಂಡ್ಯ ಮತ್ತು ರಾಮನಗರ ಜಿಲ್ಲೆಗಳಲ್ಲಿ ವ್ಯಾಪಕ ರೀತಿಯಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಯಾದಗಿರಿ, ಬೀದರ್, ಕಲಬುರಗಿ, ವಿಜಯಪುರ, ಹಾವೇರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ವ್ಯಾಪಕ ರೀತಿಯಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿರುವುದಾಗಿ ತಿಳಿಸಲಾಗಿದೆ.
ಟಿವಿ ಚಾನಲ್‍ಗಳು ನಿಂದಿಸುವಂತಿಲ್ಲ
ನವದೆಹಲಿ, ಅ. 9: ಎಲ್ಲಾ ಖಾಸಗಿ ಟಿವಿ ಚಾನೆಲ್‍ಗಳು ಕಾರ್ಯಕ್ರಮ ಸಂಹಿತೆಯನ್ನು ಪಾಲಿಸಬೇಕು ಮತ್ತು ಯಾವುದೇ ವ್ಯಕ್ತಿ ಅಥವಾ ಕೆಲವು ಗುಂಪುಗಳನ್ನು ನಿಂದಿಸಬಾರದು ಅಥವಾ ಅಪಪ್ರಚಾರ ಮಾಡಬಾರದೆಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಒತ್ತಿ ಹೇಳಿದೆ. ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ಡ್ರಗ್ಸ್ ತನಿಖೆಗೆ ಸಂಬಂಧಿಸಿದಂತೆ ತನ್ನ ವಿರುದ್ಧ ಮಾನಹಾನಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಆರೋಪಿಸಿ ನಟ ರಕುಲ್ ಪ್ರೀತ್ ಸಿಂಗ್ ದೆಹಲಿ ಹೈಕೋರ್ಟ್‍ನಲ್ಲಿ ಸಲ್ಲಿಸಿರುವ ಅರ್ಜಿಯ ಹಿನ್ನೆಲೆ ಈ ಸಲಹೆ ನೀಡಲಾಗಿದೆ. ಕೇಬಲ್ ಟೆಲಿವಿಷನ್ ನೆಟ್‍ವಕ್ರ್ಸ್ (ನಿಯಂತ್ರಣ) ಕಾಯ್ದೆ 1995 ಮತ್ತು ನಿಯಮಗಳ ಪ್ರಕಾರ ನಿಗದಿಪಡಿಸಿದಂತೆ ಕಾರ್ಯಕ್ರಮ ಮತ್ತು ಜಾಹೀರಾತು ಸಂಹಿತೆಗಳಿಗೆ ಕಟ್ಟುನಿಟ್ಟಾಗಿ ಅಂಟಿಕೊಂಡಿರುವ ಅಂಶಗಳ ಬಗ್ಗೆ ಪ್ರಸಾರ ಮಾಡಲು ಖಾಸಗಿ ಉಪಗ್ರಹ ಟಿವಿ ಚಾನೆಲ್‍ಗಳಿಗೆ ಈ ಹಿಂದೆ ವಿವಿಧ ಸಂದರ್ಭಗಳಲ್ಲಿ ಸಲಹೆ ನೀಡಲಾಗಿದೆ ಎಂದು ಸಚಿವಾಲಯ ತನ್ನ ಸಲಹೆಯಲ್ಲಿ ತಿಳಿಸಿದೆ. ಅದರ ಮೇಲೆ ರಚಿಸಲಾಗಿದೆ. ಮಾನಹಾನಿಕಾರ, ದುರುದ್ದೇಶಪೂರಿತ, ಸುಳ್ಳು ಅಥವಾ ಅರ್ಧ ಸತ್ಯದಿಂದ ಕೂಡಿರುವ ವಿಷಯಗಳ ಬಗ್ಗೆ ಪ್ರಸಾರ ಮಾಡದಂತೆ ಕಾರ್ಯಕ್ರಮ ಸಂಹಿತೆಯಲ್ಲಿರುವ ವಿನಾಯಿತಿಯತ್ತ ಗಮನ ನೀಡುವಂತೆ ಸಲಹೆ ನೀಡಲಾಗಿದೆ.
ಶಾಲೆ ಆರಂಭವಾದರೆ ಕೊರೊನಾ ಸ್ಫೋಟ
ಬೆಂಗಳೂರು, ಅ. 9: ಕೊರೊನಾ ಸೋಂಕು ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೆ ಶಾಲೆಗಳನ್ನು ಯಾವುದೇ ಕಾರಣಕ್ಕೂ ತೆರೆಯಬಾರದು. ರಾಜ್ಯದ ಎಲ್ಲಾ ಮಕ್ಕಳಿಗೂ ಆನ್‍ಲೈನ್ ತರಗತಿಗಳನ್ನು ಪ್ರಾರಂಭಿಸುವುದು ಈಗಿನ ಪರಿಸ್ಥಿತಿಯಲ್ಲಿ ಅತ್ಯಗತ್ಯ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಈ ಸಂಬಂಧ ಶಿಕ್ಷಣ ಸಚಿವ ಎಸ್. ಸುರೇಶ್‍ಕುಮಾರ್ ಅವರಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ, ಶಾಲೆಗಳನ್ನು ಆರಂಭಿಸಿದರೆ ಕೊರೊನಾ ಸೋಂಕು ಸ್ಫೋಟಗೊಂಡು ಸುನಾಮಿ ಸ್ವರೂಪದ ಸಾವು ನೋವುಗಳನ್ನು ಸಮಾಜ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಈಗಾಗಲೇ ಅಮೇರಿಕಾ ಮತ್ತು ಯುರೋಪಿನ ಕೆಲವು ದೇಶಗಳು ಶಾಲೆಗಳನ್ನು ತೆರೆದು ಸಮಸ್ಯೆಗಳನ್ನು ಮೈಮೇಲೆ ಹಾಕಿಕೊಂಡಿರುವ ಉದಾಹರಣೆಗಳು ಕಣ್ಣ ಮುಂದೆ ಇವೆ ಎಂದಿದ್ದಾರೆ. ಬಾಲ್ಯ ವಿವಾಹ ಮತ್ತು ಬಾಲ ಕಾರ್ಮಿಕ ಪದ್ಧತಿಯಂತಹ ಸಾಮಾಜಿಕ ಪಿಡುಗುಗಳು ಹೆಚ್ಚುತ್ತಿವೆ ಎಂಬ ನಿಮ್ಮ ಮಾತಿನಲ್ಲಿ ಅನುಮಾನಗಳಿಲ್ಲ. ಆದರೆ ಜಿಲ್ಲಾಡಳಿತಗಳು ನಿದ್ದೆಯಿಂದ ಎಚ್ಚೆತ್ತು ಕ್ರಿಯಾಶೀಲವಾದರೆ. ಕುಟುಂಬಗಳಿಗೆ ದುಡಿಯುವ ಅವಕಾಶಗಳನ್ನು ಸರ್ಕಾರವು ಹೆಚ್ಚಿಸಿ ಅವರ ಕೈತುಂಬಾ ಹಣ ಇರುವಂತೆ ನೋಡಿಕೊಂಡರೆ ಈ ಸಮಸ್ಯೆಗಳನ್ನು ನಿಯಂತ್ರಿಸಬಹುದಾಗಿದೆ ಎಂದಿದ್ದಾರೆ.
ಪರೀಕ್ಷೆ ರಹಿತ ವರ್ಷವೆಂದು ಘೋಷಿಸಿ
ಚಿಕ್ಕಮಗಳೂರು, ಅ. 9: ಕೊರೊನಾ ಹಿನ್ನೆಲೆ ಪ್ರಸಕ್ತ ಶೈಕ್ಷಣಿಕ ವರ್ಷವನ್ನು ಪರೀಕ್ಷೆ ರಹಿತ ವರ್ಷವೆಂದು ಘೋಷಿಸಬೇಕೆಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಒತ್ತಾಯಿಸಿದ್ದಾರೆ. 2020 ಜೀವ ಉಳಿಸುವ ವರ್ಷವಾಗಿದೆ, ಮೊದಲು ಜೀವ ಉಳಿಸೋಣ, ಆಮೇಲೆ ಜೀವನ ನಡೆಸೋಣ ಎಂದು ಪ್ರಧಾನಿ ಮೋದಿ ಹೇಳಿದ್ದರು. ಅದರಂತೆ ಮೊದಲು ಜೀವ ಉಳಿಸೋಣ, ಆಮೇಲೆ ಜೀವನ ಮಾಡೋಣ ಎಂದು ಚಿಕ್ಕಮಗಳೂರಿನಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು. ಸದ್ಯಕ್ಕೆ ಯಾವುದೇ ಕಾರಣಕ್ಕೂ ಶಾಲೆ ಆರಂಭ ಮಾಡುವುದು ಬೇಡ. ಆದರೆ ಆನ್‍ಲೈನ್ ಕ್ಲಾಸ್ ಮುಂದುವರಿಸಬೇಕು. ರಾಜ್ಯ ಸೇರಿ ದೇಶಾದ್ಯಂತ ಶಿಕ್ಷಕರ ಸಾವು ಸಂಭವಿಸುತ್ತಿದೆ. ಶಿಕ್ಷಕರು ದೇಶದ ಆಸ್ತಿ, ಪೆÇೀಷಕರು ಮಕ್ಕಳನ್ನು ಶಾಲೆಗೆ ಕಳಿಸುವ ಸ್ಥಿತಿಯಲ್ಲಿಲ್ಲ. ಮಕ್ಕಳನ್ನು ಖಾಯಿಲೆ ಅಥವಾ ಸಮಸ್ಯೆಗೆ ದೂಡುವ ಮನಸ್ಥಿತಿಯಲ್ಲಿಲ್ಲ ಎಂದರು. ರಾಜ್ಯ ಸರ್ಕಾರ ಶಿಕ್ಷಕರ ಬಗ್ಗೆಯೂ ಕಾಳಜಿ ವಹಿಸಬೇಕು, ಶಿಕ್ಷಕರ ರಕ್ಷಣೆ, ಜೀವ ಉಳಿಸಲು ಆದ್ಯತೆ ನೀಡಬೇಕು ಎಂದು ಸಂಸದೆ ಶೋಭಾ ಹೇಳಿದರು.
ಪಿಯುಸಿ ಪೂರಕ ಪರೀಕ್ಷೆ:ಶೇ.41.28 ಫಲಿತಾಂಶ
ಬೆಂಗಳೂರು, ಅ. 9: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗಳ ಫಲಿತಾಂಶ ಪ್ರಕಟವಾಗಿದ್ದು, ಶೇ. 41.28 ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ರಾಜ್ಯಾದ್ಯಂತ ಒಟ್ಟು 2,12,678 ವಿದ್ಯಾರ್ಥಿಗಳು ಪೂರಕ ಪರೀಕ್ಷೆ ತೆಗೆದುಕೊಂಡಿದ್ದು ಇವರ ಪೈಕಿ 87,784 ವಿದ್ಯಾರ್ಥಿಗಳು ತೇರ್ಗಡೆ ಯಾಗಿದ್ದಾರೆ. ಕಳೆದ ಸೆಪ್ಟೆಂಬರ್ 7 ರಿಂದ 19 ರವರೆಗೆ ಒಟ್ಟು 305 ಪರೀಕ್ಷಾ ಕೇಂದ್ರಗಳಲ್ಲಿ ಈ ಪರೀಕ್ಷೆ ನಡೆದಿತ್ತು. ಫಲಿತಾಂಶ ತಿತಿತಿ.ಞಚಿಡಿಡಿesuಟಣs.ಟಿiಛಿ.iಟಿ ನಲ್ಲಿ ಪ್ರಕಟವಾಗಿದ್ದು ಈ ಪೂರಕ ಪರೀಕ್ಷೆಯಲ್ಲಿ ಸಹ ವಿದ್ಯಾರ್ಥಿಗಳಿಗೆ ಹೋಲಿಸಿದರೆ ವಿದ್ಯಾರ್ಥಿನಿಯರೇ ಹೆಚ್ಚಿನ ಸಂಖ್ಯೆಯಲ್ಲಿ ತೇರ್ಗಡೆಯಾಗಿದ್ದಾರೆ. ಶೇ. 45 ರಷ್ಟು ವಿದ್ಯಾರ್ಥಿನಿಯರು ತೇರ್ಗಡೆಯಾಗಿದ್ದರೆ ಶೇ. 38.30 ರಷ್ಟು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಈರುಳ್ಳಿ ರಫ್ತಿಗೆ ಕೇಂದ್ರ ಅನುಮತಿ
ನವದೆಹಲಿ, ಅ. 9: ರಫ್ತು ನಿಷೇಧವನ್ನು ಸಡಿಲಗೊಳಿಸಿದ ಕೇಂದ್ರ ಸರ್ಕಾರ ಕೆಲವು ಷರತ್ತುಗಳೊಂದಿಗೆ ಬೆಂಗಳೂರು ರೋಸ್ ಈರುಳ್ಳಿ ಮತ್ತು ಕೃಷ್ಣಪುರಂ ತಳಿಯ ಈರುಳ್ಳಿ ರಫ್ತು ಮಾಡಲು ಶುಕ್ರವಾರ ಅನುಮತಿ ನೀಡಿದೆ. ದೇಸೀಯ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಏರಿಕೆಯಾಗುತ್ತಿದ್ದ ಹಿನ್ನೆಲೆಯಲ್ಲಿ, ಬೆಲೆ ನಿಯಂತ್ರಿಸುವುದಕ್ಕಾಗಿ ಕೇಂದ್ರ ಸರ್ಕಾರ ಸೆಪ್ಟೆಂಬರ್ 14 ರಂದು ಎಲ್ಲಾ ವಿಧದ ಈರುಳ್ಳಿ ರಫ್ತು ಮಾಡುವುದನ್ನು ನಿಷೇಧಿಸಿತ್ತು. ಈಗ ಬೆಂಗಳೂರು ರೋಸ್ ಮತ್ತು ಕೃಷ್ಣಪುರಂ ತಳಿಯ ಈರುಳ್ಳಿ ರಫ್ತಿಗೆ ಅನುಮತಿ ನೀಡಿರುವ ಕೇಂದ್ರ ಸರ್ಕಾರ, ಮಾರ್ಚ್ 31, 2021ರ ವರೆಗೆ, ಗರಿಷ್ಠ 10 ಸಾವಿರ ಮೆಟ್ರಿಕ್ ಟನ್‍ವರೆಗೆ ರಫ್ತು ಮಾಡಲು ಅವಕಾಶ ನೀಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ನಿರ್ದೇಶನಾಲಯ ಅಧಿಸೂಚನೆ ಹೊರಡಿಸಿದೆ. ಈ ಎರಡು ತಳಿಗಳಿಗೆ ಸ್ಥಳೀಯ ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲದಿದ್ದರೂ, ಪೂರ್ವ ದೇಶಗಳಲ್ಲಿ ಈ ತಳಿಯ ಈರುಳ್ಳಿಗೆ ಬಲು ಬೇಡಿಕೆ ಇದೆ.
ಶ್ರೀಪದ್ಮನಾಭಸ್ವಾಮಿ ದೇವಸ್ಥಾನ ಬಂದ್
ತಿರುವನಂತಪುರಂ, ಅ. 9: ಕೇರಳದ ತಿರುವನಂತಪುರಂನ ಶ್ರೀಪದ್ಮನಾಭಸ್ವಾಮಿ ದೇವಸ್ಥಾನದ 10 ಅರ್ಚಕರಿಗೆ ಕೊರೊನಾ ವೈರಸ್ ಪಾಸಿಟಿವ್ ದೃಢಪಟ್ಟಿದ್ದು, ತಾ. 15 ರವರೆಗೆ ದೇವಸ್ಥಾನ ಬಂದ್ ಮಾಡಲಾಗಿದೆ. ದೇವಾಲಯದ ಅಧಿಕಾರಿಗಳ ಪ್ರಕಾರ, ದೈನಂದಿನ ಪೂಜೆಯನ್ನು ತಂತ್ರಿಗಳು ನಡೆಸುತ್ತಾರೆ. ಆದರೆ ತಾ. 15 ರವರೆಗೆ ದೇವಾಲಯ ಪ್ರವೇಶಿಸಲು ಭಕ್ತರಿಗೆ ಅನುಮತಿ ಇಲ್ಲ. ಲಾಕ್‍ಡೌನ್ ನಂತರ ಆಗಸ್ಟ್ 27 ರಿಂದ ದೇವಾಲಯವನ್ನು ಮತ್ತೆ ತೆರೆಯಲಾಗಿದ್ದು, ಒಂದು ಬಾರಿಗೆ 35 ಭಕ್ತರು ದೇವಾಲಯ ಪ್ರವೇಶಿಸಲು ಅನುಮತಿ ನೀಡಲಾಗಿತ್ತು ಮತ್ತು ಒಂದು ದಿನದಲ್ಲಿ ಒಟ್ಟು 665 ಭಕ್ತರು ದೇವರ ದರ್ಶನ ಪಡೆಯಲು ಅವಕಾಶ ನೀಡಲಾಗಿತ್ತು. ದೇವಾಲಯ ಮತ್ತೆ ತೆರೆದ ನಂತರ ದೇವಸ್ಥಾನದ ಹಲವು ಸಿಬ್ಬಂದಿ ಮತ್ತು ಅರ್ಚಕರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಈಗ ದೇವಸ್ಥಾವನ್ನು ಮತ್ತೆ ಕೆಲವು ದಿನಗಳವರೆಗೆ ಬಂದ್ ಮಾಡಲು ನಿರ್ಧರಿಸಲಾಗಿದೆ.