ಅಚ್ಚುತನ ಅಚ್ಚುಮೆಚ್ಚಿನ ಹಸು ಕಾಣೆಯಾಗಿ ನಾಲ್ಕು ದಿನಗಳು ಕಳೆದಿದ್ದವು. ಅಚ್ಚುತ ಹಸು ಕಾಣೆಯಾದ ಚಿಂತೆಯಲ್ಲಿ ಸರಿಯಾಗಿ ಊಟ ಮಾಡದೆ ಚಿಂತಾಕ್ರಾಂತನಾಗಿ ಊರೂರು ಅಲೆಯುತ್ತಿದ್ದ.
ಹಸುವನ್ನು ಹುಡುಕಿಕೊಂಡು ಹೊರಟಾಗ ಅವನಿಗೆ ಎದುರಿನಿಂದ ಓರ್ವ ವ್ಯಕ್ತಿ ತನ್ನ ಹಸುವಿನೊಂದಿಗೆ ಬರುತ್ತಿರುವುದು ಕಾಣಿಸಿತು. ಅಚ್ಚುತನಿಗೆ ಎಲ್ಲಿಲ್ಲದ ಕುಶಿ ಆಯಿತು.
ಓ... ನನ್ನ ಹಸು ಸಿಕ್ಕಿತು. ನನ್ನ ಹಸು ಸಿಕ್ಕಿತು ಎಂದು ಜೋರಾಗಿ ಕೂಗಿದ. ಅವನು ಕೂಗಿದ್ದು ಕೇಳಿ ಸುತ್ತಮುತ್ತ ಇದ್ದವರು ಹತ್ತಿರಕ್ಕೆ ಹೋದರು. ಈ ಹಸು ಎಲ್ಲಿ ಸಿಕ್ಕಿತು ಇದು ನನ್ನ ಹಸು ಎಂದು ಅಚ್ಚುತ ಆಗಂತುಕನೊಂದಿಗೆ ಹೇಳಿದ.
ಹಸುವನ್ನು ಹಿಡಿದುಕೊಂಡಿದ್ದಾತ ಇದು ನನ್ನ ಹಸು ನಿನ್ನದಲ್ಲ. ಕಳೆದ ಎರಡು ವರ್ಷಗಳಿಂದ ಇದನ್ನು ನಾನು ಸಾಕುತ್ತಿದ್ದೇನೆ ಎಂದ. ಇಲ್ಲ ನೀನು ಸುಳ್ಳು ಹೇಳ್ತಿದ್ದೀಯ. ಇದು ಕಾಣೆಯಾಗಿ ನಾಲ್ಕೈದು ದಿನಗಳು ಮಾತ್ರ ಆಗಿವೆ ಎಂದು ಅಚ್ಚುತ ಹೇಳಿದ.
ಆಗಂತುಕ ಒಪ್ಪುತ್ತಿಲ್ಲ. ಇಬ್ಬರೂ ನನ್ನದು ನನ್ನದು ಎಂದು ಹೇಳುವುದನ್ನು ಕೇಳಿ ನೆರೆದವರು ಏನು ಮಾಡಬೇಕೆಂದು ತೋಚದೆ ನೋಡುತ್ತಾ ನಿಂತರು. ಅಷ್ಟರಲ್ಲಿ ಅಚ್ಚುತ ಒಂದು ತಂತ್ರ ಹೆಣೆದ. ತನ್ನ ಹಸುವಿನ ಎರಡೂ ಕಣ್ಣುಗಳನ್ನು ಮುಚ್ಚಿ ಹೇಳಿದ. ಈ ಹಸು ಕಳೆದ ಎರಡು ವರ್ಷಗಳಿಂದ ನಿಮ್ಮ ಬಳಿ ಇದೆ ಎಂದಿರಲ್ಲ ಹಾಗಿದ್ದರೆ ಇದರ ಯಾವ ಕಣ್ಣು ಕಾಣಿಸುತ್ತಿಲ್ಲ ಎಂಬದನ್ನು ಹೇಳಿ ಎಂದ.
ಅದರ ಎಡಗಣ್ಣು ಕಾಣಿಸುತ್ತಿಲ್ಲ ಎಂದು ಆಗಂತುಕ ಸರಾಗವಾಗಿ ಹೇಳಿದ. ಅಲ್ಲ ಇದರ ಬಲಗಣ್ಣಿಗೆ ದೃಷ್ಟಿ ಇಲ್ಲ ಎಂದು ಅಚ್ಚುತ ಹೇಳಿದ.
ಈಗ ಕಳ್ಳನಿಗೆ ಏನು ಹೇಳಬೇಕೆಂದು ತೋಚದಾಯಿತು. ಅವನು ಹೇಳಿದ.
‘ಹೌದು, ಹೌದು ಅದರ ಬಲಗಣ್ಣು ಕಾಣಿಸುತ್ತಿಲ್ಲ. ನಾನು ಗಾಬರಿಯಿಂದ ಎಡಗಣ್ಣು ಅಂದು ಬಿಟ್ಟೆ.’
‘ಓಹೋ ನೀನೊಬ್ಬ ಕಳ್ಳ ಮಾತ್ರ ಅಲ್ಲ ಸುಳ್ಳ ಕೂಡ. ನನ್ನ ಹಸುವಿನ ಎರಡೂ ಕಣ್ಣುಗಳೂ ಕಾಣಿಸುತ್ತಿವೆ. ನಿನ್ನನ್ನು ಪರೀಕ್ಷಿಸುವ ಸಲುವಾಗಿ ನಾನು ಹಾಗೆ ಹೇಳಿದೆ’ ಎಂದ ಅಚ್ಚುತ. ನೆರೆದಿದ್ದವರು ಅಚ್ಚುತನ ಹಸು ಎಂಬ ತೀರ್ಪನ್ನು ಕೊಟ್ಟು ಕಳ್ಳನನ್ನು ಆಡಳಿತಾಧಿಕಾರಿಗೆ ಹಿಡಿದುಕೊಟ್ಟರು.
ಅಚ್ಚುತ ಸಂತೋಷದಿಂದ ತನ್ನ ಹಸುವನ್ನು ಮನೆಗೆ ತಂದ.
- ಅಶ್ರಫ್, ಮಡಿಕೇರಿ.