ಕುಶಾಲನಗರ, ಅ. 8: ಉತ್ತರ ಪ್ರದೇಶದ ಹತ್ರಾಸ್ನಲ್ಲಿ ನಡೆದ ಅತ್ಯಾಚಾರ ಪ್ರಕರಣ ಖಂಡಿಸಿ ಕುಶಾಲನಗರ ತಾಲೂಕು ಜೆಡಿಎಸ್ ಅಲ್ಪಸಂಖ್ಯಾತ ಘಟಕದ ವತಿಯಿಂದ ಕುಶಾಲನಗರದಲ್ಲಿ ಪ್ರತಿಭಟನೆ ನಡೆಯಿತು.
ಅಲ್ಪಸಂಖ್ಯಾತ ಘಟಕದ ತಾಲೂಕು ಅಧ್ಯಕ್ಷ ಅಬ್ದುಲ್ ಕರೀಂ ಅಧ್ಯಕ್ಷತೆಯಲ್ಲಿ ಕುಶಾಲನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾರ್ಯಕರ್ತರು ಕೇಂದ್ರ ಹಾಗೂ ಉತ್ತರಪ್ರದೇಶ ಸರಕಾರದ ವಿರುದ್ಧ ಧಿಕ್ಕಾರ ಕೂಗಿದರು. ದೇಶದಲ್ಲಿ ಅತ್ಯಾಚಾರ ಪ್ರಕರಣಗಳನ್ನು ತಡೆಗಟ್ಟುವಲ್ಲಿ ಬಿಜೆಪಿ ಸರಕಾರ ವಿಫಲವಾಗಿದೆ ಎಂದು ಆರೋಪಿಸಿದರು.
ಈ ಸಂದರ್ಭ ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಕೆಎಂಬಿ ಗಣೇಶ್, ದಲಿತ ಮಹಿಳೆ ಮೇಲೆ ನಡೆದ ಅತ್ಯಾಚಾರ ಹಾಗೂ ಪ್ರಕರಣ ಮುಚ್ಚಿಹಾಕಲು ನಡೆಸಿದ ಕುತಂತ್ರ ಅತ್ಯಂತ ಖಂಡನೀಯ ವಿಚಾರ ಎಂದರು.
ಜಿಲ್ಲಾ ಅಲ್ಪಸಂಖ್ಯಾತ ಮಹಿಳಾ ಘಟಕದ ಅಧ್ಯಕ್ಷೆ ರುಬೀನಾ ಮಾತನಾಡಿ, ಅತ್ಯಾಚಾರ ಆರೋಪಿಗಳಿಗೆ ಗಲ್ಲುಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಇಸಾಖ್ ಖಾನ್, ಜಿಲ್ಲಾ ಯುವ ಘಟಕದ ಅಧ್ಯಕ್ಷ ಸಿ.ಎಲ್.ವಿಶ್ವ, ಕುಶಾಲನಗರ ಪಪಂ ಸದಸ್ಯರಾದ ಸುರಯ್ಯ ಭಾನು, ಎಂ.ಬಿ. ಸುರೇಶ್, ಮಾಜಿ ಸದಸ್ಯ ಎಚ್.ಡಿ. ಚಂದ್ರು, ವಿವಿಧ ಘಟಕಗಳ ಪದಾಧಿಕಾರಿಗಳಾದ ಪಿ.ಎ. ಬಷೀರ್ ಅಲಿ, ಸೈಫ್ ಅಲಿ, ಸುನಿಲ್, ಡೆನ್ನಿ ಬರೋಸ್, ಶಬ್ಬೀರ್, ಎಚ್.ಎಸ್. ವೆಂಕಟೇಶ್, ಜಾಶಿರ್ ಮತ್ತಿತರರು ಇದ್ದರು.