ವೀರಾಜಪೇಟೆ, ಅ. 8: ವೀರಾಜಪೇಟೆ ತಾಲೂಕು ಕಚೇರಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದ್ದು ರೈತರ ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ ಎಂದು ಆರೋಪಿಸಿ ಸಾರ್ವಜನಿಕ ಹಿತರಕ್ಷಣಾ ಸಮಿತಿ ವತಿಯಿಂದ ತಹಶೀಲ್ದಾರ್ ನಂದೀಶ್ ಅವರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ತಹಶೀಲ್ದಾರ್ ಬಹುತೇಕ ಮೇಲ್ನೋಟದ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಇತ್ಯರ್ಥ ಪಡಿಸಿದರು.

ಸಂಘಟನೆಯ ಜಿಲ್ಲಾ ಅಧ್ಯಕ್ಷ ಕಟ್ಟಿ ಮಂದಯ್ಯ ಮಾತನಾಡಿ ತಾಲೂಕು ಕಚೇರಿಯಲ್ಲಿ ರೈತರ ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಹಣ ನೀಡದಿದ್ದರೆ ಯಾವುದೇ ಕಡತ ವಿಲೇವಾರಿ ಆಗುವುದಿಲ್ಲ. ಸಿಬ್ಬಂದಿಗಳು ಅನವಶ್ಯಕ ಕಾಲಹರಣ ಮಾಡಿ ನಿರ್ಲಕ್ಷ್ಯದಿಂದ ವರ್ತಿಸುತ್ತಾರೆ ಎಂದು ಆರೋಪಿಸಿದರು.

ಸಂಘಟನೆಯ ಪ್ರಧಾನ ಕಾರ್ಯದರ್ಶಿ ಅರಮಾಣಮಾಡ ಸತೀಶ್ ದೇವಯ್ಯ ಮಾತನಾಡಿ ಆರ್‍ಟಿಸಿಯಲ್ಲಿ ಪೌತಿ ಖಾತೆಯಲ್ಲಿ ಸಮಸ್ಯೆ ಉಂಟಾಗಿದ್ದು ಜಾಗ ನಮ್ಮ ಸ್ವಾಧೀನಲ್ಲಿದ್ದರೂ ಕೂಡ ಕುಟುಂಬದ ಪಟ್ಟೆದಾರರ ಹೆಸರಿನಲ್ಲಿ ಆರ್‍ಟಿಸಿ ಇರುತ್ತದೆ. ಅವರು ಮರಣ ಹೊಂದಿದ್ದರೆ ಅವರ ಮರಣ ಪ್ರಮಾಣ ಪತ್ರ ನೀಡಿದರೂ ಖಾತೆ ಅವರ ರಕ್ತ ಸಂಬಂಧಿಗಳ ಹೆಸರಿಗೆ ಬರುತ್ತದೆ ಅದನ್ನು ಕೂಡಲೇ ಸರಿ ಪಡಿಸಬೇಕು ಎಂದು ಆಗ್ರಹಿಸಿ ಕೋವಿಡ್-19 ಮುಗಿದ ನಂತರ ಪೌತಿಖಾತೆ ಆಂದೋಲನ ನಡೆಸಲಾಗುವುದು ಎಂದು ಹೇಳಿದರು.

ಚೊಟ್ಟೆಯಾಂಡಮಾಡ ವಿಶ್ವನಾಥ್ ಮಾತನಾಡಿ ಪಡಿತರ ವಿಭಾಗದಲ್ಲಿ 50 ರೂ ನೀಡಿದರೆ ಮಾತ್ರ ಎ.ಪಿ.ಎಲ್ ಹಾಗೂ ಬಿ.ಪಿ.ಎಲ್. ಕಾರ್ಡ್‍ಗಳನ್ನು ನೀಡುತ್ತಾರೆ. ಸರ್ಕಾರದ ನಿಯಮದ ಪ್ರಕಾರ ಯಾವುದೇ ಹಣ ಪಡೆಯುವಂತಿಲ್ಲ ಎಂದು ಆರೋಪಿಸಿದಾಗ ಆಹಾರ ಶಿರಸ್ತೆದಾರ್ ಸತೀಶ್ ಅವರನ್ನು ಕಚೇರಿಗೆ ಕರೆಸಿ ವಿಚಾರಣೆ ನಡೆಸಿದರು. ಸರ್ಕಾರ ಪಡಿತರ ಚೀಟಿಗಳನ್ನು ಉಚಿತವಾಗಿ ನೀಡುತ್ತಿದೆ. ಯಾರಿಗೂ ಹಣ ನೀಡುವ ಅವಶ್ಯಕತೆ ಇಲ್ಲ. ಈ ಸಂಬಂಧದಲ್ಲಿ ಕಚೇರಿ ಮುಂದೆ ನಾಮಫಲಕವನ್ನು ಅಳವಡಿಸುವಂತೆ ಸೂಚಿಸಿದರು.

ಹೋಬಳಿ ಅಧ್ಯಕ್ಷ ಮಾಣೀರ ಮುತ್ತಪ್ಪ ಮಾತನಾಡಿ ಸರ್ವೆ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಚಾರ ನಡೆಯುತ್ತಿದ್ದು ಯಾವುದೇ ಕಡತಗಳು ವಿಲೇವಾರಿ ಆಗುತ್ತಿಲ್ಲ. ಜಾಗದ ಸರ್ವೆ ನಡೆಸಿ ಎಂದರೆ ಕಾರು ಕಳುಹಿಸಿ ಬರುತ್ತೇವೆ ಎಂದು ಹಾರಿಕೆ ಉತ್ತರ ನೀಡುತ್ತಾರೆ. 6 ತಿಂಗಳಾದರು ಸರ್ವೆ ಕಾರ್ಯಕ್ಕೆ ಮುಂದಾಗುವುದಿಲ್ಲ ಎಂದು ದೂರು ನೀಡಿದಾಗ ಎ.ಡಿ.ಎಲ್.ಆರ್ ಮಹೇಶ್ ಕುಮಾರ್ ಹಾಗೂ ಬಾನಂಗಡ ಅರಣ್ ಅವರನ್ನು ಕಚೇರಿಗೆ ಕರಿಸಿ ವಿಚಾರಣೆ ನಡೆಸಿದರು. ಇದೇ ಸಂದರ್ಭ ಎಡಿಎಲ್‍ಆರ್ ಮಹೇಶ್ ಮಾತನಾಡಿ ಹಿಂದೆ ಸರ್ವೆ ಕಾರ್ಯಗಳು ಸರಾಗವಾಗಿ ನಡೆಯುತಿತ್ತು. ಈಗ ಎಲ್ಲಾ ಕಡತಗಳು ಆನ್‍ಲೈನ್ ಮೂಲಕ ನಡೆಯ ಬೇಕಾಗಿರುವುದರಿಂದ ಹಿರಿತನದ ಆಧಾರದಲ್ಲಿ ನಡೆಸಲಾಗುತ್ತಿದೆ. ಇದರಿಂದ ಸ್ವಲ್ಪ ಮಟ್ಟಿಗೆ ವಿಳಂಬವಾಗಲು ಸಾಧ್ಯವಾಗಿದೆ ಎಂದು ಹೇಳಿದರು.

ಇದೇ ಸಂದರ್ಭ ಸಹಕಾರ್ಯದರ್ಶಿ ಪೋಡಮಾಡ ಉತ್ತಪ್ಪ, ಅಜ್ಜಮಾಡ ರಾಜು ನಂಜಪ್ಪ, ಬೊಟ್ಟಂಗಡ ಮಾಚಯ್ಯ, ಮಲ್ಲೆಂಗಡ ಮಣಿ ಉತ್ತಪ್ಪ, ಮಾಣೀರ ಮುತ್ತಪ್ಪ, ಕೋಳೇರ ರಾಜ ನರೇಂದ್ರ, ಮಾಚಿಮಾಡ ನರೇಂದ್ರ, ಕಾಳಿಮಾಡ ತಮ್ಮು ಮುತ್ತಣ್ಣ ಹಾಜರಿದ್ದರು.