ಕೂಡಿಗೆ, ಅ. 9: ಗ್ರಾಮೀಣ ಭಾಗದ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಹೈಸ್ಪೀಡ್ ಇಂಟರ್ನೆಟ್ ಸಹಾಯದಿಂದ ಸರಳ ರೀತಿಯಲ್ಲಿ ಶಿಕ್ಷಕರು ವಿಷಯವಾರು ಬೋಧನೆ ಮಾಡಲು ತಾಂತ್ರಿಕ ಆಧಾರಿತ ಕಲಿಕಾ ವಿಧಾನ (ಟಾಲ್ಪ್) ಯೋಜನೆ ರೂಪಿಸಲಾಗಿದೆ ಎಂದು ಕೂಡಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್)ಯ ಪ್ರಾಂಶುಪಾಲರೂ ಆದ ಉಪ ನಿರ್ದೇಶಕ (ಅಭಿವೃದ್ಧಿ) ಎ. ಶ್ರೀಧರನ್ ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿ.ಎಸ್.ಇ.ಆರ್.ಟಿ) ವತಿಯಿಂದ ಕೂಡಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್)ಯ ಮೂಲಕ ಪ್ರೌಢಶಾಲಾ ವಿಷಯ ಶಿಕ್ಷಕರಿಗೆ 10 ದಿನಗಳ ಕಾಲ ಏರ್ಪಡಿಸಿರುವ ತಾಂತ್ರಿಕ ಆಧಾರಿತ ಕಲಿಕಾ ವಿಧಾನ (ಟಾಲ್ಪ್)ದ ತರಬೇತಿಗೆ ಕೂಡಿಗೆ ಡಯಟ್ ಸಂಸ್ಥೆಯಲ್ಲಿ ಗೂಗಲ್ ಮೀಟ್ ಮೂಲಕ ತರಬೇತಿಗೆ ಚಾಲನೆ ನೀಡಿ, ತರಬೇತಿನಿರತ ಸರ್ಕಾರಿ ಪ್ರೌಢಶಾಲಾ ಶಿಕ್ಷಕರೊಂದಿಗೆ ಸಂವಾದ ನಡೆಸಿದ ಅವರು, ಕಂಪ್ಯೂಟರ್ ತಂತ್ರಜ್ಞಾನದ ಬಳಕೆ ಮೂಲಕ ಬೋಧನೆ ಮತ್ತು ಕಲಿಕೆಯ ಪ್ರಕ್ರಿಯೆಯಲ್ಲಿ ಉಪಯುಕ್ತತೆ ಹಾಗೂ ಕಲಿಕೆಯಲ್ಲಿ ಸುಧಾರಣೆ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಕೇಂದ್ರ ಸರ್ಕಾರದಿಂದ ಪ್ರಾಯೋಜಿತ ಯೋಜನೆಯಿಂದ ಶಾಲೆಗಳಲ್ಲಿ ಶಿಕ್ಷಣದಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ಐ.ಸಿ.ಟಿ.) ಯೋಜನೆಯಡಿ ಪ್ರೌಢಶಾಲಾ ಮಕ್ಕಳಲ್ಲಿ ಕಲಿಕಾ ಸಾಮಥ್ರ್ಯವನ್ನು ಉತ್ತಮಪಡಿಸಲು ತಂತ್ರಜ್ಞಾನ ಆಧಾರಿತ ಶಿಕ್ಷಣ ನೀಡುವಲ್ಲಿ ಸ್ಮಾರ್ಟ್ ಕ್ಲಾಸ್ ಸೌಲಭ್ಯ ಕಲ್ಪಿಸಲಾಗಿದೆ. ಶಿಕ್ಷಕರು ಈ ಪರಿಣತಿ ತರಬೇತಿ ಪಡೆದ ನಂತರ ತಮ್ಮ ಶಾಲಾ ಹಂತದಲ್ಲಿ ಮಕ್ಕಳಿಗೆ ಈ ಸೌಲಭ್ಯದ ಮೂಲಕ ಪರಿಣಾಮಕಾರಿ ಬೋಧನೆ ಕೈಗೊಳ್ಳಬೇಕು ಎಂದು ಶ್ರೀಧರನ್ ಹೇಳಿದರು.
ಕಾರ್ಯಕ್ರಮದ ನೋಡಲ್ ಅಧಿಕಾರಿ ಕೆ.ವಿ. ಸುರೇಶ್, ಗ್ರಾಮಾಂತರ ಸರ್ಕಾರಿ ಪ್ರೌಢಶಾಲಾ ಹಂತದ ವಿದ್ಯಾರ್ಥಿಗಳಿಗೆ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಕೌಶಲ್ಯಗಳನ್ನು ಪಡೆಯುವ ಅವಕಾಶಗಳನ್ನು ನೀಡುವ ಮೂಲಕ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ನೆರವಿನಿಂದ ಕಲಿಕೆಯ ಪ್ರಕ್ರಿಯೆಯನ್ನು ಸಾದರಪಡಿಸಲು ಈ ಯೋಜನೆ ಯನ್ನು ಜಾರಿಗೊಳಿಸಲಾಗಿದೆ ಎಂದರು.
ಡಯಟ್ ಮೂಲಕ ಜಿಲ್ಲೆಯ ಪ್ರೌಢಶಾಲೆಗಳ 11 ಕಂಪ್ಯೂಟರ್ ಕೇಂದ್ರಗಳಲ್ಲಿ 102 ಮಂದಿ ಪ್ರೌಢಶಾಲಾ ಶಿಕ್ಷಕರಿಗೆ ಏಕಕಾಲದಲ್ಲಿ ತರಬೇತಿ ನೀಡಲಾಗುತ್ತಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಪನ್ಮೂಲ ವ್ಯಕ್ತಿ ಎಂ.ಎಂ. ರವಿ ಶಂಕರಪ್ಪ, ಕಂಪ್ಯೂಟರ್ ತಂತ್ರಜ್ಞಾನ ಆಧಾರಿತ ಕಲಿಕಾ ಯೋಜನೆಯ ಉದ್ದೇಶ ಕುರಿತು ಮಾಹಿತಿ ನೀಡಿದರು. ಡಯಟ್ ಉಪನ್ಯಾಸಕ ಯು. ಸಿದ್ದೇಶಿ, ಸಂಪನ್ಮೂಲ ವ್ಯಕ್ತಿಗಳಾದ ಪ್ರವೀಣ್ ಕಾಮತ್, ಜಯಲಕ್ಷ್ಮಿ, ಪ್ರೌಢಶಾಲಾ ಶಿಕ್ಷಕರು ಇದ್ದರು.
ಶಿಕ್ಷಕರು ಮಕ್ಕಳಿಗೆ ತಾವು ತರಗತಿಗಳಲ್ಲಿ ಬೋಧನಾ ವಿಷಯಗಳನ್ನು ಕಂಪ್ಯೂಟರ್ ಬಳಸಿ ಚಿತ್ರ, ವೀಡಿಯೋ ಸಹಿತ ಪಠ್ಯವನ್ನು ಬೋಧಿಸುವ ಯೋಜನೆ ಬಗ್ಗೆ ಕೋವಿಡ್ -19ರ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದೆ.
ಡಯಟ್ ಕೆ.ವಿ. ಸುರೇಶ್, ಉಪನ್ಯಾಸಕ ಯು. ಸಿದ್ದೇಶಿ, ಸಂಪನ್ಮೂಲ ವ್ಯಕ್ತಿಗಳಾದ ಎಂ.ಎಂ. ರವಿಶಂಕರಪ್ಪ, ಪ್ರವೀಣಾ ಇದ್ದರು.