ಒಕ್ಕೂಟದಿಂದ ಭರವಸೆ

ಕೂಡಿಗೆ, ಅ. 9: ಜಿಲ್ಲೆಯಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘಗಳ ನೂತನ ಕಟ್ಟಡದ ನಿರ್ಮಾಣಕ್ಕೆ ಹಾಸನ ಹಾಲು ಒಕ್ಕೂಟದ ವತಿಯಿಂದ ರೂ. 5 ಲಕ್ಷ ನೀಡಲಾಗುವುದು ಎಂದು ಕೊಡಗು ಜಿಲ್ಲಾ ಹಾಸನ ಹಾಲು ಒಕ್ಕೂಟದ ನಿರ್ದೇಶಕ ಕೆ.ಕೆ. ಹೆಮಂತ್ ಕುಮಾರ ತಿಳಿಸಿದರು. ಅವರು ಕೂಡಿಗೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ರೈತರು ಹಾಲಿನ ಗುಣಮಟ್ಟವನ್ನು ಕಾಪಾಡಿದ್ದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳು ಪ್ರಗತಿಯತ್ತ ಸಾಗಲು ಸಾಧ್ಯವಾಗುತ್ತದೆ. ವೈಜ್ಞಾನಿಕವಾಗಿ ಹಸುಗಳು ಸಾಕುವುದು ಮತ್ತು ಪಶುವೈದ್ಯರ ಸಲಹೆಗಳನ್ನು ಪಡೆದು ಹಾಲಿನ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಾಸನ ಹಾಲು ಒಕ್ಕೂಟದ ವಿಸ್ತ್ತರಣಾಧಿಕಾರಿ ಬಿ.ಬಿ. ವೀಣಾ ಮಾತನಾಡಿ, ಒಕ್ಕೂಟದ ಸಾಲ ಸೌಲಭ್ಯಗಳನ್ನು ಪಡೆದು ಒಕ್ಕೂಟದಿಂದ ದೊರಕುವ ಪಶುವೈದ್ಯ ಚಿಕಿತ್ಸೆಗಳನ್ನು ಪಡೆದುಕೊಂಡು ಉತ್ತಮವಾದ ಹಸುಗಳನ್ನು ಸಾಕಿ ಹಾಲನ್ನು ಉತ್ಪಾದಕರ ಸಂಘಕ್ಕೆ ಹಾಕುವ ಮೂಲಕ ತಮ್ಮ ಅರ್ಥಿಕ ಮಟ್ಟವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷೆ ಭಾರತಿ ವಹಿಸಿದ್ದರು. ವೇದಿಕೆಯಲ್ಲಿ ಸಂಘ ನಿರ್ದೇಶಕರು ಮತ್ತು ರೈತರು ಭಾಗವಹಿಸಿದ್ದರು.